ಮೈಸೂರು : ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ವಿರುದ್ಧ ಕ್ರಮದ ಬಗ್ಗೆ ಪಕ್ಷದಲ್ಲಿ ಚರ್ಚೆ ಮಾಡುತ್ತೇವೆ ಎಂದು ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಜಿ. ಟಿ ದೇವೇಗೌಡ ಹೇಳಿದ್ದಾರೆ.
ಕುದೇರು ಶಾಖಾ ಮಠ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸೂರಜ್ ರೇವಣ್ಣ ಬಂಧನ ವಿಚಾರವಾಗಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಹೋ ಏನಾಗಿದೆ, ಅವರು ಹಗರಣದಲ್ಲಿ ಸಿಕ್ರಾ! ಹಾಗಾದ್ರೆ ಕಾದಿದೆ ಶಿಕ್ಷೆ ಬಿಡಿ, ಹೋ ಅರೆಸ್ಟ್ ಕೂಡ ಆದ್ರಾ, ಸೂರಜ್ ರೇವಣ್ಣ ಬಂಧನದ ಬಗ್ಗೆ ನನಗೆ ಮಾಹಿತಿ ಇಲ್ಲ. ನಿನ್ನೆಯಿಂದ ನಾನು ಹಲವು ಕಾರ್ಯಕ್ರಮಗಳಲ್ಲಿ ಬ್ಯುಸಿ ಇದ್ದೆ. ಬೆಳಗ್ಗೆ ಪತ್ರಿಕೆ, ಟಿವಿ ನೋಡಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದರು.
ಪ್ರಜ್ವಲ್ ರೇವಣ್ಣ ವಿಚಾರದಲ್ಲೂ ನಮ್ಮ ಹಸ್ತಕ್ಷೇಪ ಇರಲಿಲ್ಲ. ತಪ್ಪು ಮಾಡಿದ್ರೆ ಶಿಕ್ಷೆಯಾಗಲಿ. ತಪ್ಪು ಮಾಡಿದವರ ಪರ ನಾವು ಯಾವತ್ತೂ ನಿಲ್ಲಲ್ಲ. ನನ್ನ ಮಗನೇ ಇರಲಿ, ನನ್ನ ಸಂಬಂಧಿಗಳೇ ಇರಲಿ, ಯಾರೇ ತಪ್ಪು ಮಾಡಿದ್ರು ತಪ್ಪೇ. ಜನತಾದಳ ಯಾವತ್ತೂ ತಪ್ಪು ಮಾಡಿದವರ ಪರ ನಿಲ್ಲಲ್ಲ ಎಂದು ತಿಳಿಸಿದರು.
ಸೂರಜ್ ರೇವಣ್ಣ ಬಂಧನದಿಂದ ಪಕ್ಷಕ್ಕೆ ಏಕೆ ಮುಜುಗರ ?: ರಾಜ್ಯದಲ್ಲಿ ಯಾರೋ ಒಬ್ಬ ತಪ್ಪು ಮಾಡಿದರೇ ಅದಕ್ಕೆ ಆರೂವರೆ ಕೋಟಿ ಜನ ಕಾರಣರಾ?. ಅಲ್ಲ ತಾನೆ. ಇದು ಕೂಡ ಹಾಗೆ ಎಂದರು. ಸೂರಜ್ ವಿರುದ್ಧ ಕ್ರಮದ ವಿಚಾರವಾಗಿ ಮಾತನಾಡಿ ಪಕ್ಷದೊಳಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸೂರಜ್ ರೇವಣ್ಣರ ತನಿಖೆಯಿಂದ ಸತ್ಯ ಹೊರಬರಲಿದೆ- ಡಾ. ಯತೀಂದ್ರ : ಡಾಕ್ಟರ್ ಸೂರಜ್ ರೇವಣ್ಣ ಅವರ ಪ್ರಕರಣ ತನಿಖೆಯಿಂದ ಸತ್ಯಾಸತ್ಯತೆ ಹೊರ ಬರಲಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಕುದೇರು ಶಾಖಾ ಮಠ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾತನಾಡಿದ ಅವರು, ಲೈಂಗಿಕ ದೌರ್ಜನ್ಯದ ಬಗ್ಗೆ ಯುವಕನೊಬ್ಬ ದೂರು ಕೊಟ್ಟಿದ್ದಾನೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ತಪ್ಪು ಯಾರೇ ಮಾಡಿದ್ದರೂ ತಪ್ಪೇ. ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸುತ್ತಿದ್ದಾರೆ. ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿದೆ. ಇದರಲ್ಲಿ ಯಾವುದೇ ಷಡ್ಯಂತ್ರ ಇಲ್ಲ ಎಂದರು.
ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿಚಾರವಾಗಿ ಮಾತನಾಡಿ, ಪೆಟ್ರೋಲ್ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ ಮಾಡುವುದಕ್ಕೆ ಯಾವುದೇ ನೈತಿಕ ಹಕ್ಕಿಲ್ಲ. ದೇಶದಲ್ಲಿ ತೈಲ ಬೆಲೆ ಏರಿಕೆಯಾಗಲು ಬಿಜೆಪಿಯೇ ಕಾರಣ. ಚುನಾವಣೆ ಸಂದರ್ಭದಲ್ಲಿ ಕಡಿಮೆ ಮಾಡಿದರು. ಇವಾಗ ಬೆಲೆ ಏರಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಚನ್ನಪಟ್ಟಣ ಉಪಚುನಾವಣೆ ವಿಚಾರವಾಗಿ ಮಾತನಾಡಿ, ಚನ್ನಪಟ್ಟಣ ಗ್ರೌಂಡ್ ರಿಯಾಲಿಟಿ ನನಗೆ ಗೊತ್ತಿಲ್ಲ.
ನಮ್ಮ ಪಕ್ಷದ ವರಿಷ್ಠರು, ಸ್ಥಳೀಯ ಕಾರ್ಯಕರ್ತರು ಕುಳಿತು ಅಭ್ಯರ್ಥಿ ಆಯ್ಕೆ ಮಾಡುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ : ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಸೂರಜ್ ರೇವಣ್ಣಗೆ 14 ದಿನ ನ್ಯಾಯಾಂಗ ಬಂಧನ - SURAJ REVANNA IN JUDICIAL CUSTODY