ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಅವರದ್ದು ಆತ್ಮಹತ್ಯೆಯಲ್ಲ. ಅದು ಸರ್ಕಾರ ಪ್ರಾಯೋಜಿತ ಕೊಲೆ ಆಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.
ವಿಧಾನಸಭೆಯಲ್ಲಿ ಸೋಮವಾರ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಕುರಿತು ನಿಯಮ 69ರಡಿ ಚರ್ಚೆ ನಡೆಸಿ ಮಾತನಾಡಿದ ಅವರು, 187 ಕೋಟಿ ದಲಿತರ ಹಣ ಲೂಟಿ ಹೊಡೆದು ಬೇರೆ ರಾಜ್ಯಕ್ಕೆ ಕಳುಹಿಸಿದ ಉದಾಹರಣೆ ಇಲ್ಲ. ಕಟಾಕಟ್ ಅಂತಾ 187 ಕೋಟಿ ಹಗರಣ ಮಾಡಿರುವುದು ರಾಜ್ಯಕ್ಕೆ ಕಪ್ಪು ಚುಕ್ಕೆಯಾಗಿದೆ. ಬೇಲಿನೇ ಎದ್ದು ಹೊಲ ಮೇಯ್ದ ರೀತಿ ಆಗಿದೆ. ನಿಗಮದ ಎಂಡಿನೇ ದಲಿತರ ಹಣ ಲೂಟಿ ಮಾಡಿದ್ದಾರೆ. ಸಂದರ್ಭವನ್ನು ದುರುಪಯೋಗ ಮಾಡಿ ಗೋಲ್ಮಾಲ್ ಮಾಡಿದ್ದಾರೆ. ಮೃತ ಅಧಿಕಾರಿಯೂ ದಲಿತ. ಲೂಟಿ ಹೊಡೆದವನೂ ದಲಿತ. ಸರ್ಕಾರ ನಾವು ದಲಿತರ ಚಾಂಪಿಯನ್ ಅಂತ ಹೇಳುತ್ತೆ. ದಲಿತರ ಹಣ ಟಕಾಟಕ್ ವರ್ಗಾವಣೆ ಆಯ್ತಾ ಅಲ್ಲ. ಸರ್ಕಾರ ಕಣ್ಣು ಮುಚ್ಚಿ ಕೂತಿದೆಯಾ ಎಂದು ಪ್ರಶ್ನಿಸಿದರು.
ಸಿಎಂ ಹೆಡ್ ಮಾಸ್ಟರ್ ಕೈಚೆಲ್ಲಿ ಕೂತಿದ್ದಾರೆ. ಸಿಎಂ ಸಿದ್ದರಾಮಯ್ಯ ಈಗ ಮೊದಲಿನಂತೆ ಇಲ್ಲ. ಈಗ ಯಾರ ಮಾತು ಕೇಳುತ್ತಾರೋ ಗೊತ್ತಿಲ್ಲ. ಅಮಾಯಕ ಅಧಿಕಾರಿ ಪ್ರಮಾಣಿಕ ಅಧಿಕಾರಿಯಾಗಿದ್ದರು. ಈ ಹಗರಣದಲ್ಲಿ ಸರ್ಕಾರ ಭಾಗಿಯಾಗಿದೆ. ಇದು ಸ್ವತಃ ಸಿಎಂ ನಿರ್ವಹಿಸುವ ಹಣಕಾಸು ಇಲಾಖೆ ಅಡಿ ಬರುವ ನಿಗಮವಾಗಿದೆ. ಇದು ಪೂರ್ವ ಯೋಜಿತ ಹಗರಣ. ಶಾಂಗ್ರೀಲಾ ಹೊಟೇಲ್ ಇದಕ್ಕೆ ಹೆಡ್ ಆಫೀಸ್. ಅಲ್ಲೇ ಎಲ್ಲ ತೀರ್ಮಾನ ಆಗಿರುವುದು. ಅಲ್ಲಿ ಆಗಿರುವ ಡೀಲ್ ಇದು. ಚುನಾವಣೆಗೆ ಹಣ ಬೇಕಿತ್ತು. ಟಾಕಾಟಕ್ ಅಂತ ವರ್ಗಾವಣೆ ಆಯಿತು ಎಂದು ದೂರಿದರು.
ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆಯಲ್ಲ. ಇದು ಸರ್ಕಾರ ಪ್ರಾಯೋಜಿತ ಕೊಲೆ ಆಗಿದೆ. ದಲಿತರ ದುಡ್ಡು, ಯಾರದ್ದೋ ಮೋಜು ಮಸ್ತಿಗಾಗಿ ಬಳಕೆಯಾಯಿತು. ಸತ್ತ ದಲಿತ ವ್ಯಕ್ತಿಯ ಬೆಲೆ ಇಲ್ವಾ?, ಸರ್ಕಾರ ಕುರುಡಾಯಿತಾ?, 187 ಕೋಟಿ ರೂ. ಅನ್ನು ಅವನು ಉಳಿಸಿದ್ದಾನೆ. ಸತ್ತ ವ್ಯಕ್ತಿಯ ಶಾಪತಟ್ಟದೇ ಇರುತ್ತಾ?, ಪಿಎ ಮನೆಯಲ್ಲಿ, ಚಿನ್ನದ ಅಂಗಡಿಯಲ್ಲಿ ಹಣ ಸಿಕ್ಕಿದೆ. ಇದು ಹಗರಣ ಅಲ್ಲ ಅಂತ ಯಾರೂ ಹೇಳಲು ಆಗುವುದಿಲ್ಲ. ಮೃತ ಅಧಿಕಾರಿ ಯಾವ ದುಡ್ಡನ್ನೂ ಹೊಡೆದಿಲ್ಲ. ಆ ಅಮಾಯಕನನ್ನು ಬಲಿ ಪಡೆದರಲ್ಲಾ? ಎಂದು ಕಿಡಿಕಾರಿದರು.
ಡಿಕೆಶಿ ಕ್ಲೆವರ್ ರಾಜಕಾರಣಿ. ಅವರು ಸುದ್ದಿಗಾರರಿಗೆ ಸಂದೇಶ ಕೊಟ್ಟಿದ್ದಲ್ಲ, ಅವರು ಪೊಲೀಸರಿಗೆ ಸಂದೇಶ ಕೊಟ್ಟಿದ್ದು ಅನ್ನಿಸುತ್ತೆ. ಸಿಎಂ ಅವರು ಆ ತರದ ಹೇಳಿಕೆ ಕೊಟ್ಟಿಲ್ಲ ಎಂದು ಅಶೋಕ್ ಟಾಂಗ್ ನೀಡಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಡಿ.ಕೆ.ಶಿವಕುಮಾರ್, ನಾನು ಈಗಲೂ ಹೇಳುತ್ತೇನೆ, ಅವರು ಏನೂ ತಪ್ಪು ಮಾಡಿಲ್ಲ. ನಾನು ನಾಗೇಂದ್ರರನ್ನು ಕರೆಸಿ ಮಾತನಾಡಿದ್ದೇನೆ. ಅವರು ನನ್ನದೇನು ಪಾತ್ರ ಇಲ್ಲ ಅಂದಿದ್ದಾರೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಈಗಲೂ ಅದನ್ನೇ ಹೇಳುತ್ತೇನೆ ಎಂದು ಪುನರುಚ್ಚರಿಸಿದರು.
ಮುಂದುವರೆದು ಮಾತನಾಡಿದ ಅಶೋಕ್, 30.3.2024 ಒಂದು ವಿಶೇಷ ದಿನವಾಗಿದೆ. ನಿಗಮದವರು 50 ಕೋಟಿಯನ್ನು ಫಿಕ್ಸೆಡ್ ಠೇವಣಿಯಲ್ಲಿ ಇಡುತ್ತಾರೆ. ಅದರ ಮೇಲೆ 45 ಕೋಟಿ ಸಾಲ ಕೊಟ್ಟಿದ್ದಾರೆ. ಅದೇ ದಿನ ಠೇವಣಿ ಮಾಡಿ, ಅದೇ ದಿನ ಸಾಲ ಮಾಡಿದ್ದಾರೆ. ಅದೇ ದಿನ ಹೈದರಾಬಾದ್ಗೆ ಆ ಹಣ ವರ್ಗಾವಣೆ ಆಗಿದೆ. 30.3.2024ರಂದು 7.6% ಬಡ್ಡಿ ದರದಲ್ಲಿ ಸಾಲ ಮಂಜೂರಾಗುತ್ತೆ. ಇದಾದ ಬಳಿಕ ಸರ್ಕಾರಕ್ಕೆ ಬಿಸಿ ಮುಟ್ಟಲು ಶುರುವಾಯಿತು. ಆಗ ಪ್ರಧಾನ ಕಾರ್ಯದರ್ಶಿ ಎದ್ದು ನಿಂತರು. ಆಗ ಪತ್ರ ಬರೆದು ಆರ್ಬಿಎಲ್ ಖಾತೆಯಲ್ಲಿನ ವಹಿವಾಟನ್ನು ತಡೆ ಹಿಡಿಯುವಂತೆ ಸೂಚಿಸುತ್ತಾರೆ. ಎಂಜಿ ರಸ್ತೆ ಖಾತೆಗೆ ಹಣ ವರ್ಗಾವಣೆ ಆದಾಗಲೇ ಕೇಳಬೇಕಿತ್ತು. ಎಲ್ಲ ಹಣ ಹೋದ ಮೇಲೆ ಪತ್ರ ಬರೆದು ತಡೆ ಹಿಡಿಯಲು ಹೇಳುತ್ತಾರೆ. ವರ್ಗಾವಣೆ ಆದ ಆ ಹಣವನ್ನು ಮದ್ಯದ ಅಂಗಡಿಗಳಿಗೆ, ಚಿನ್ನದ ಅಂಗಡಿಗಳಿಗೆ ಕೊಟ್ಟರು. ಅಲ್ಲಿಗೆ ಹಣ ಕೊಟ್ಟು 5% ಕಮಿಷನ್ ಕೊಟ್ಟು ನಗದು ಪಡೆದು ಚುನಾವಣೆಗೆ ಬಳಸಿದ್ದಾರೆ. ಅದನ್ನೇ ಇ.ಡಿ ಹೇಳಿದ್ದು ಎಂದರು.
ಎಲ್ಲಿ ಹವಾಲಾ ವಹಿವಾಟು ಆಗುತ್ತೆ ಅಲ್ಲಿ ಇಡಿ ಬರುತ್ತೆ. ಹಾಗಾಗಿ ಈ ಪ್ರಕರಣದಲ್ಲೂ ಇಡಿ ಬಂದಿದೆ. ಈ ಮಧ್ಯೆ ಅಧಿಕಾರಿಗಳಾದ ಪದ್ಮನಾಭ ಮತ್ತು ಪರಶುರಾಮ ನಾನು ಮಾಡಿಲ್ಲ ಅನ್ನೋದಕ್ಕೆ ಒಂದು ದಾಖಲೆ ಸೃಷ್ಟಿಸಿದ್ದಾರೆ. ಒಂದು ಡೀಲ್ ಮಾತುಕತೆ ಮಾಡುತ್ತಾರೆ. 14 ನಿಮಿಷ ಸಂಭಾಷಣೆಯನ್ನು ಹೊರಬಿಡುತ್ತಾರೆ ಎಂದು ತಿಳಿಸಿದರು.
ಹಣದ ವರ್ಗಾವಣೆಯಲ್ಲಿ ಕಾಣದ ಕೈಗಳು ಎಸರಿದ್ದಾರೆ ಎಂಬುದು ಹೊರಗೆ ಬರಬೇಕು. ಎಸ್ಐಟಿ ನಾಟಕ ಮಾಡಬಾರದು. ಸ್ವಚ್ಛ ಆಡಳಿತ, ಪಾರದರ್ಶಕತೆ ಎಂಬುದು ಸಿದ್ದರಾಮಯ್ಯನವರ ಭಾಷಣಕ್ಕೆ ಸೀಮಿತವಾಗಬಾರದು. ಡಿಜಿಟಲ್, ಆನ್ಲೈನ್ ಪದ್ದತಿ ಮಾಡಿದೆ. ಹಣಕಾಸು ಇಲಾಖೆ ಗಮನಕ್ಕೆ ಬಾರದೆ ಮಾಡಲಾಗುವುದಿಲ್ಲ. ತೆರಿಗೆದಾರರ ಹಣಕ್ಕೆ ಯಾರು ಜವಾಬ್ದಾರರು ಎಂದು ಕೇಳಿದರು.
ಹಣ ದುರುಪಯೋಗ ಆಗದಂತೆ ಎನ್‌ಟಿಟಿ (ನಾನ್ ಟ್ರೆಷರಿ ಟ್ರಾನ್ಸೇಕ್ಷನ್)ಮಾಡೆಲ್ ಅನ್ನು ನಾವು ಅಳವಡಿಸಿದ್ದೇವೆ. ಹಣವನ್ನು ಒಂದೇ ಖಾತೆಯಲ್ಲಿ ಇಡುವಂತೆ ಆದೇಶನೂ ಇದೆ. ಎಲ್ಲ ಕಾರ್ಯದರ್ಶಿಗಳಿಗೆ ಇದರ ಬ್ಯಾಂಕ್ ಖಾತೆಯ ಮಾಹಿತಿಯ ಗಮನಕ್ಕೆ ತರಲಾಗುತ್ತದೆ. ಕೆಲ ನಿಗಮಗಳಲ್ಲಿ ಎನ್‌ಟಿಟಿ ಮಾಡೆಲ್ ಅಳವಡಿಕೆ ಆಗಿಲ್ಲ. ಇಷ್ಟು ದೊಡ್ಡ ಹಣ ವರ್ಗಾವಣೆ ಮಾಡಿರುವುದು ಹಣಕಾಸು ಇಲಾಖೆಯ ಗಮನಕ್ಕೆ ಬಂದಿಲ್ಲವೇ? ಹಣಕಾಸು ಇಲಾಖೆಯೂ ಇದಕ್ಕೆ ಕಾರಣರಾಗಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಸದನದಲ್ಲಿ ವಾಲ್ಮೀಕಿ ನಿಗಮ ಹಗರಣದ ಗದ್ದಲ: ವಿಪಕ್ಷ, ಆಡಳಿತ ಪಕ್ಷದ ನಡುವೆ ವಾಕ್ಸಮರ - Assembly Session