ಬೆಂಗಳೂರು : ಲೋಕಸಭೆ ಚುನಾವಣಾ ಕಣ ರಂಗೇರಿದೆ. ಇಂದು ಬಿಜೆಪಿ ಅಭ್ಯರ್ಥಿಗಳು ಹಾಗೂ ಮುಖಂಡರು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಸಂಸದ, ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ, ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಜೆಡಿಎಸ್ ಬಿಜೆಪಿ (NDA) ಮೈತ್ರಿಕೂಟದ ಅಭ್ಯರ್ಥಿ ಡಾ. ಕೆ. ಸುಧಾಕರ್ ಹಾಗೂ ಟಿಕೆಟ್ ಮಿಸ್ ಆದ ಸಂಸದ ಕರಡಿ ಸಂಗಣ್ಣ ಅವರು ಸಹ ಇಂದು ಬೆಳಗ್ಗೆ ಜೆ. ಪಿ. ನಗರದ ನಿವಾಸದಲ್ಲಿ ಹೆಚ್. ಡಿ. ಕುಮಾರಸ್ವಾಮಿ ಅವರನ್ನು ಸೌಹಾರ್ದಯುತವಾಗಿ ಭೇಟಿಯಾದರು. ಈ ಸಂದರ್ಭದಲ್ಲಿ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜಯನಗರ ಕ್ಷೇತ್ರದ ಶಾಸಕ ಸಿ. ಕೆ. ರಾಮಮೂರ್ತಿ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಬಳಿಕ ಸಂಸದ ತೇಜಸ್ವಿ ಸೂರ್ಯ ಸುದ್ದಿಗಾರರ ಜೊತೆ ಮಾತನಾಡಿ, ಲೋಕಸಭೆ ಚುನಾವಣೆಗೆ ಸಹಕಾರ ನೀಡುವಂತೆ ಕುಮಾರಸ್ವಾಮಿ ಅವರನ್ನು ಕೋರಿದ್ದೇನೆ. ಮೂರು ದಿನಗಳಲ್ಲಿ ಸಕ್ರಿಯ ರಾಜಕೀಯದಲ್ಲಿ ನಾನು ತೊಡಗಿಸಿಕೊಳ್ಳುತ್ತೇನೆ. ನನ್ನ ಆಶೀರ್ವಾದ ಇದೆ. ಮುನ್ನುಗ್ಗಿ ಅಂದಿದ್ದಾರೆ ಎಂದು ಹೇಳಿದರು.
ಏಪ್ರಿಲ್ 4ರಂದು ನಾಮಪತ್ರ ಸಲ್ಲಿಕೆಗೆ ಕುಮಾರಸ್ವಾಮಿ ಅವರನ್ನು ಆಹ್ವಾನಿಸಿದ್ದೇನೆ. ನಾಮಪತ್ರ ಪ್ರಚಾರದ ಜಾಥಾಗೆ ಬರ್ತೀನಿ ಅಂತ ಅವರು ಹೇಳಿದ್ದಾರೆ. ನನ್ನ ಪರ ಪ್ರಚಾರಕ್ಕೆ ಬರುತ್ತೇನೆ ಎಂದಿದ್ದಾರೆ ಎಂದರು. ಸಂಸದ ಕರಡಿ ಸಂಗಣ್ಣ ಮಾತನಾಡಿ, ಕುಮಾರಸ್ವಾಮಿ ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ. ಯಾವುದೇ ರಾಜಕೀಯ ವಿಚಾರ ಚರ್ಚೆ ಮಾಡಿಲ್ಲ. ನಾನು ಮುಂಚೆ ಜೆಡಿಎಸ್ ಪಕ್ಷದಲ್ಲೇ ಇದ್ದೆ. ಹಾಗಾಗಿ, ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದೆ ಎಂದು ಹೇಳಿದರು.
ನನಗೆ ಟಿಕೆಟ್ ಯಾಕೆ ಮಿಸ್ ಆಯ್ತು ಅಂತ ಗೊತ್ತಿಲ್ಲ. ನಮ್ಮ ನಾಯಕರು ಸಭೆಗೆ ಬನ್ನಿ ಅಂತ ಹೇಳಿದ್ದಾರೆ. ನಾಯಕರ ಜೊತೆ ಸಭೆಯಾದ ಬಳಿಕ ವಿವರವಾಗಿ ಹೇಳುತ್ತೇನೆ ಎಂದು ತಿಳಿಸಿದರು. ಮಾಜಿ ಸಚಿವ ಡಾ. ಕೆ. ಸುಧಾಕರ್ ಮಾತನಾಡಿ, ನನಗೆ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಬಿಜೆಪಿ-ಜೆಡಿಎಸ್ ಪಕ್ಷಗಳ ನಡುವೆ ಮೈತ್ರಿಯಾಗಿದೆ. ಬಿಜೆಪಿ ಮತ್ತು ಜೆಡಿಎಸ್ ವೈರತ್ವವಿರುವ ಪಕ್ಷ ಅಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.