ಬೆಂಗಳೂರು: "ಗುತ್ತಿಗೆದಾರ ಸಚಿನ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ಆಗಬೇಕು. ಸಚಿವ ಪ್ರಿಯಾಂಕ್ ಖರ್ಗೆ ಮೊದಲು ರಾಜೀನಾಮೆ ಕೊಡಬೇಕು" ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಆಗ್ರಹಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು," ಹೆಣ್ಣುಮಕ್ಕಳ ದುರ್ಬಳಕೆಯ ಸಂಚು ಸೇರಿದಂತೆ ಅನೇಕ ವಿಷಯಗಳು ಸಚಿನ್ ಡೆತ್ನೋಟಿನಲ್ಲಿವೆ" ಎಂದು ತಿಳಿಸಿದರು.
"ತನಿಖೆ ನಡೆಯಲೆಂದು ಮುಂಚಿತವಾಗಿ ತಿಳಿಸಿದರೆ ಬಚಾವ್ ಆಗಬಹುದೆಂದು ಪ್ರಿಯಾಂಕ್ ಅವರು ಪತ್ರಿಕಾಗೋಷ್ಠಿ ಮಾಡಿದ್ದಾರೆ. ಈಶ್ವರಪ್ಪನವರ ರಾಜೀನಾಮೆ ಪಡೆದ ದಾರಿಯಲ್ಲೇ ರಾಜೀನಾಮೆ ಕೊಡಬೇಕು. ನಿಮ್ಮ ಪಾತ್ರ ಏನೂ ಇಲ್ಲ ಎಂದು ಗೊತ್ತಾದರೆ ನೀವು ಮುಖ್ಯಮಂತ್ರಿಯಾದರೂ ನಮ್ಮ ಅಭ್ಯಂತರವಿಲ್ಲ. ನಾವು ಸುಲಭವಾಗಿ ಬಿಡುವುದಿಲ್ಲ, ಹೋರಾಟವನ್ನು ಮುಂದುವರೆಸುತ್ತೇವೆ. ಸಚಿನ್ ಬರೆದ ಪತ್ರದ ಮಾಹಿತಿಯ ಇಂಚಿಂಚನ್ನೂ ರಾಜ್ಯದಲ್ಲಿ ನಾವು ಪ್ರಚಾರ ಮಾಡುತ್ತೇವೆ" ಎಂದು ಹೇಳಿದರು.
"ವಿಪಕ್ಷ ನಾಯಕರು, ನಮ್ಮ ಕಾರ್ಯಕರ್ತರ ಮೇಲೆ ಸುಲಭವಾಗಿ ಎಫ್‍ಐಆರ್ ಆಗುತ್ತಿದೆ. ಆದರೆ, ವಿಪಕ್ಷದವರು ಆಡಳಿತ ಪಕ್ಷದವರ ಮೇಲೆ ದೂರು ನೀಡಿದರೆ ಎಫ್‍ಐಆರ್ ಆಗುತ್ತಿಲ್ಲ. ಸಿ.ಟಿ. ರವಿಯವರು ಕೊಟ್ಟ ದೂರಿನ ಎಫ್‍ಐಆರ್ ಮಾಡಿಲ್ಲ. ಎಫ್‍ಐಆರ್ ಮಾಡದೆ ಅವರನ್ನು ರಾತ್ರಿಯೆಲ್ಲ ಸುತ್ತಾಡಿಸಿದ್ದಾರೆ. ಕಲಬುರಗಿಯಲ್ಲಿ ಕೂಡ ಎಫ್‍ಐಆರ್ ಮಾಡಿಲ್ಲ. ಅದಕ್ಕೆ ಕೋರ್ಟ್ ನಿರ್ದೇಶನ ನೀಡಬೇಕಾಯಿತು" ಎಂದರು.
ಸತ್ಯಶೋಧನಾ ಸಮಿತಿಗೆ ರಾಜ್ಯಾಧ್ಯಕ್ಷರ ನೇತೃತ್ವ: "ನಾಳೆಯೇ ಬಿಜೆಪಿ ಸತ್ಯಶೋಧನಾ ಸಮಿತಿಯು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ತೂಗಾಂವ್ ಕಟ್ಟೆಗೆ ಭೇಟಿ ಕೊಡಲಿದೆ. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ನಾನು ನಮ್ಮ ಕಲಬುರಗಿ ಶಾಸಕ ಬಸವರಾಜ ಮತ್ತಿಮೂಡ, ಬೀದರ್ ಶಾಸಕ ಶೈಲೇಂದ್ರ ಬೆಲ್ದಾಳೆ, ಬಸವಕಲ್ಯಾಣದ ಶಾಸಕ ಶರಣು ಸಲಗಾರ್, ಹುಮ್ನಾಬಾದ್ ಶಾಸಕ ಸಿದ್ದು ಪಾಟೀಲ್, ಬೀದರ್ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ಚಂದು ಪಾಟೀಲ್, ಶಿವರಾಜ್ ಪಾಟೀಲ್ ಅವರು ಈ ಸಮಿತಿಯಲ್ಲಿ ಇರುತ್ತಾರೆ" ಎಂದು ತಿಳಿಸಿದರು.
"ನಮ್ಮ ಈ ನಿಯೋಗವು ಭಾಲ್ಕಿ ತಾಲೂಕಿನ ತೂಗಾಂವ್ ಕಟ್ಟೆಗೆ ನಾಳೆ ಸಂಜೆ ಭೇಟಿ ಕೊಡುತ್ತದೆ. ಸಚಿನ್ ಮನೆಗೆ ತೆರಳಿ ವಿವರ ಪಡೆಯುತ್ತೇವೆ. ಬೆಂಗಳೂರಿನಲ್ಲಿ ಪ್ರತಿಭಟನೆ ಕುರಿತು ನಂತರ ತಿಳಿಸುತ್ತೇವೆ. ಕರ್ನಾಟಕ ರಾಜ್ಯದಲ್ಲಿ ಸರ್ವಾಧಿಕಾರ ತಾಂಡವವಾಡುತ್ತಿದೆ. ಸಿದ್ದರಾಮಯ್ಯನವರು ಪ್ರಜಾಪ್ರಭುತ್ವವಾದಿ, ಸಮಾಜವಾದಿ ಎಂದು ಹೇಳುತ್ತಿದ್ದು, ಅದೆಲ್ಲ ಬೋಗಸ್, ಬೂಸಾ" ಎಂದು ಟೀಕಿಸಿದರು.
ಇದನ್ನೂ ಓದಿ: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದ ತನಿಖೆಯಾಗಿ ಸತ್ಯಾಸತ್ಯತೆ ಹೊರಬರಲಿ: ಪ್ರಿಯಾಂಕ್ ಖರ್ಗೆ