ಬೆಂಗಳೂರು: ಸಿ.ಎ ನಿವೇಶನ ಮಂಜೂರು ಮಾಡಿರುವುದರಲ್ಲಿ ಕಾನೂನು ಉಲ್ಲಂಘನೆ ಎಲ್ಲಿ ಆಗಿದೆ. ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಮಲ್ಲಿಕಾರ್ಜುನ ಕುಟುಂಬಕ್ಕೆ ಸೇರಿದ ಸಿದ್ದಾರ್ಥ ವಿಹಾರ ಟ್ರಸ್ಟ್ಗೆ ಕೆಐಎಡಿಬಿ ಸಿ.ಎ ನಿವೇಶನ ಮಂಜೂರು ಮಾಡಿರುವ ಬಗ್ಗೆ ವಿಕಾಸಸೌಧದಲ್ಲಿ ಮಾತನಾಡಿದ ಅವರು, ಇದು ವಾಣಿಜ್ಯ ಅಥವಾ ಕೈಗಾರಿಕಾ ಉದ್ದೇಶಕ್ಕೆ ಪಡೆದಿಲ್ಲ. ಇದು ಸಿ.ಎ ಜಮೀನು. ಸಚಿವ ಎಂ.ಬಿ. ಪಾಟೀಲ್ ಅವರು ಇದರ ಬಗ್ಗೆ ಸ್ಪಷ್ಟ ಉತ್ತರ ಕೊಟ್ಟಿದ್ದಾರೆ. ಒಟ್ಟು 193 ಸಂಸ್ಥೆಗಳು ಅರ್ಜಿ ಹಾಕಿದ್ವು, 43 ಸಂಸ್ಥೆಗಳು ಮಾತ್ರ ಆಯ್ಕೆ ಆಗಿವೆ. ಇದರಲ್ಲಿ ಯಾವುದೇ ಪ್ರಭಾವ ಬೀರಿಲ್ಲ. ಬಿಜೆಪಿಯವರಿಗೆ ಕನಿಷ್ಠ ಜ್ಞಾನ ಇಲ್ಲ. ಸಿ.ಎ ಸೈಟನ್ನು ಹರಾಜು ಹಾಕಲು ಆಗಲ್ಲ, ಅದನ್ನು ಖರೀದಿಯೇ ಮಾಡಬೇಕು. ಬಿಜೆಪಿಯವರು ಎಷ್ಟು ಜನ ಸಿ.ಎ ನಿವೇಶನ ಪಡೆದಿಲ್ಲ ಕೇಳಿ. ಈ ಟ್ರಸ್ಟ್ ಮೂರು ದಶಕದಿಂದ ಚಾಲ್ತಿಯಲ್ಲಿದೆ, ಇದು ಹಳೆಯ ಟ್ರಸ್ಟ್. ಶಿಕ್ಷಣ, ಸಮಾಜ ಸೇವೆ ಕೆಲಸ ಮಾಡಿಕೊಂಡು ಬರ್ತಿರುವ ಟ್ರಸ್ಟ್ ಎಂದು ತಿಳಿಸಿದರು.
ಯುವ ಸಮೂಹಕ್ಕೆ ಕೌಶಲ್ಯಾಭಿವೃದ್ಧಿ ಕೇಂದ್ರ ತೆರೆಯೋದು ತಪ್ಪಾ?. ಇದಕ್ಕೆ ಜಮೀನು ಖಾಸಗಿಯವರು ಕೊಡಬೇಕು ಅಥವಾ ಸರ್ಕಾರದಿಂದ ಖರೀದಿ ಮಾಡಬೇಕು. ನಾವು ಸರ್ಕಾರದಿಂದ ಖರೀದಿ ಮಾಡಿದ್ದೇವೆ. ಬಿಜೆಪಿಯವರು ಪ್ರೇರಣಾ ಟ್ರಸ್ಟ್ ಅಕ್ರಮದ ಬಗ್ಗೆ ಮಾತಾಡಲಿ, ರಾಷ್ಟ್ರೋತ್ಥಾನ ಸಂಸ್ಥೆಗೆ ಭೂಮಿ ಕೊಟ್ಟಿದ್ದಾರಲ್ಲ ಅವರು, ಅದನ್ನು ಮಾತಾಡಲಿ. ಈ ವಿಚಾರದಲ್ಲಿ ಕಾನೂನು ಉಲ್ಲಂಘನೆ ಆಗಿಲ್ಲ. ಬಿಜೆಪಿಯವರು ರಾಜ್ಯಪಾಲರಿಗೆ ದೂರು ಕೊಟ್ಟು ರಾಜಕೀಯ ಮಾಡ್ತಿದ್ದಾರೆ. ನಮ್ಮಣ್ಣ ರಾಹುಲ್ ಖರ್ಗೆಯವರ ಬಗ್ಗೆ ಛಲವಾದಿಯವರಿಗೆ ಏನು ಗೊತ್ತಿದೆ? ಎಂದು ಪ್ರಶ್ನಿಸಿದರು.
ಅವರು ಯುವಿಯಲ್ಲಿ ಟಾಪ್ ಬಂದವರು, ಐಐಎಸ್‌ಸಿಯಲ್ಲಿ ಕೆಲಸ ಮಾಡಿದವರು ರಾಹುಲ್ ಖರ್ಗೆ. ಅವರು ರಾಜಕೀಯದಲ್ಲಿ ಇಲ್ಲ, ಅವರ ಬಗ್ಗೆ ಮಾತಾಡೋದನ್ನು ನಿಲ್ಲಿಸಿ. ಸಿಎ ಜಮೀನು ಖರೀದಿಸುವುದು ತಪ್ಪು ಅಂತ ಎಲ್ಲಿದೆ ನಿಯಮ?. ಎಷ್ಟು ಜನ ಬಿಜೆಪಿಯವರು ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ತೆರೆದಿಲ್ಲ?. ಅವರೆಲ್ಲ ಡಾಕ್ಟರ್, ಇಂಜಿನಿಯರ್ ಆಗಿದ್ದಾರಾ?. ನಾವೇನು ಲೂಟಿ ಹೊಡೆಯಲು ಮಾಡಿದ್ದೀವಾ?. ಮುಡಾ ವಿಚಾರ ಬಂತು ಅಂತ ಈಗ ನಮ್ಮ ಕುಟುಂಬದ ಮೇಲೆ ಸುಳ್ಳು ಆರೋಪ ಬರ್ತಿದೆ. ಸಿಎ ನಿವೇಶನ ಖರೀದಿ ಮಾಡಿದ್ದಕ್ಕೆ ಇಷ್ಟೊಂದು ಹೊಟ್ಟೆ ಕಿಚ್ಚೇಕೆ?. ನಾವು ನಮ್ಮ ಅರ್ಜಿಯಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ತೆರೆಯುವ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೇವೆ. ಇಲ್ಲಿ ತಗೊಳ್ಳೋ ಬದಲು ಜವಳಿ ಪಾರ್ಕ್ನಲ್ಲಿ ತಗೋಳ್ಳೋಕೆ ಆಗುತ್ತಾ ಎಂದು ಟೀಕಿಸಿದರು.
ಅವರ ಸಮಸ್ಯೆ ಪ್ರಿಯಾಂಕ್ ಖರ್ಗೆ ಅಷ್ಟೇ. ಆಯಕಟ್ಟಿನ ಜಾಗದಲ್ಲಿ ನಾನಿದ್ದೇನೆ. ಅದಕ್ಕೆ ತಗೊಂಡಿದ್ದಾರೆ ಅಂತ ಆರೋಪಿಸಿದ್ದಾರೆ. ನಾವು ಕಾನೂನು ಪ್ರಕಾರ ಜಮೀನು ತಗೋಬಾರದಾ?. ನಮಗೆ ಅರ್ಹತೆ ಇಲ್ಲ, ರಿಯಾಯತಿ ಕೇಳಿದೀವಿ, ಕುರ್ಚಿ ದುರ್ಬಳಕೆ ಮಾಡಿದ್ರೆ ಹೇಳಲಿ, ಅಂಥದ್ದೇನಾದ್ರೂ ಇದೆಯಾ?. ಛಲವಾದಿಗೆ ಇಂಗ್ಲೀಷೂ ಬರಲ್ಲ, ಕಾನೂನು ಗೊತ್ತಿಲ್ಲ, ಸಿ.ಎ ನಿವೇಶನಗಳ ಬಗ್ಗೆ ತಿಳಿದುಕೊಳ್ಳಲಿ ಅವರು ಎಂದು ಟಾಂಗ್ ನೀಡಿದರು.
ನಾವು ಏರೋಸ್ಪೇಸ್ ಉದ್ಯಮಿಗಳಲ್ಲ, ಆದ್ರೆ ಆಗುತ್ತೇವೆ. ತಪ್ಪಿದೆಯಾ?. ಇವರ ಅಸ್ತಿತ್ವ ಮುಗೀತಿದೆ. ಹಾಗಾಗಿ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಹಾಗೂ ನಮ್ಮ ವಿರುದ್ಧ ಈ ಕೆಸರು ಎರಚ್ತಿದ್ದಾರೆ. ಕಾಂಗ್ರೆಸ್ ನವ್ರಿಗೆ ಬೈಯಲಿ ಅಂತನೇ ವಿಪಕ್ಷ ಸ್ಥಾನ ಕೊಟ್ಟೊರೋದು. ಛಲವಾದಿಯವರು ಇದನ್ನು ಅರ್ಥ ಮಾಡಿಕೊಳ್ಳಲಿ. ಇಂಥ ಕೆಲಸಕ್ಕೆ ಅವರು ಇರೋದು ಅಲ್ಲಿ. ಹಿಂದೆ ಆರ್ಎಸ್ಎಸ್ ಚಡ್ಡಿಗಳನ್ನು ಸಂಗ್ರಹ ಮಾಡಿದ್ರು, ತಲೆ ಮೇಲೆ ಬುಟ್ಟಿ ಹೊತ್ಕೊಂಡು ಸಂಗ್ರಹ ಮಾಡಿದ್ರು. ಬೇರೆ ಯಾರೂ ಬಿಜೆಪಿಯವರು ಚಡ್ಡಿಗಳನ್ನು ಸಂಗ್ರಹ ಮಾಡಿರಲಿಲ್ಲ. ನೀವು ಮಾತ್ರ ಮಾಡಿದ್ರಿ ಯಾಕೆ? ನೀವು ಎಸ್‌ಸಿ ಸಮುದಾಯ ಅಂತ ಎಂದು ಆರೋಪಿಸಿದರು.
ನಮ್ಮ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಹಲವು ರೀತಿಗಳಲ್ಲಿ ಮಾಡ್ತಿದೆ ಬಿಜೆಪಿ. ಬಿಜೆಪಿಯವರು ಚಾಣಕ್ಯ, ರಾಷ್ಟ್ರೋತ್ಥಾನಗಳಿಗೆಲ್ಲ ಭೂಮಿ ಕೊಟ್ರು. ಗೋಮಾಳ ಭೂಮಿ ಎಲ್ಲ ಕೊಟ್ರು. ಅದೆಲ್ಲ ಇವರಿಗೆ ನೆನಪು ಆಗಲ್ಲ. ಇವತ್ತು ನಮ್ಮನ್ನು ಹಿಡಿದಿದ್ದಾರೆ, ನಾಳೆ ಬೇರೆಯವರನ್ನು ಹಿಡೀತಾರೆ. ಮೋದಿಯವರ ವಿರುದ್ಧ ದೇಶದಲ್ಲಿ ಮಾತಾಡೋರೇ ಕಡಿಮೆ, ಈಗ ಅವರನ್ನೂ ಟಾರ್ಗೆಟ್ ಮಾಡಿದ್ದಾರೆ. ಸಿದ್ದರಾಮಯ್ಯ, ಡಿಕೆಶಿಯವರನ್ನೂ ಇದಕ್ಕೇ ಟಾರ್ಗೆಟ್ ಮಾಡಿರೋದು ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: 'ದಲಿತರು ಅಂದ್ರೆ ಒಂದೇ ಕುಟುಂಬ ಅಲ್ಲ': ಛಲವಾದಿ ನಾರಾಯಯಣಸ್ವಾಮಿ ಹೀಗೆ ಅಂದಿದ್ದೇಕೆ? - Chalavadi Narayanaswamy