ಕರ್ನಾಟಕದಲ್ಲಿ ವರ್ಷದಿಂದ ವರ್ಷಕ್ಕೆ ತಾಪಮಾನ ಏರಿಕೆ; ಹೆಚ್ಚಿದ ಆತಂಕ - Temperature Continue To Rise - TEMPERATURE CONTINUE TO RISE
ಈಗಂತೂ ಎಲ್ಲೆಡೆ ತಾಪಮಾನ ಏರಿಕೆಯದ್ದೇ ಮಾತು. ವಿಪರೀತ ಸೆಖೆ ಜನರಷ್ಟೇ ಅಲ್ಲ ಇತರೆ ಪ್ರಾಣಿ-ಪಕ್ಷಿಗಳನ್ನೂ ಬಳಲಿ ಬೆಂಡಾಗಿಸುತ್ತಿದೆ. ಹಾಗಂತ ತಾಪಮಾನ ಏರಿಕೆಯಾಗಿದ್ದು ಇದೇ ಮೊದಲಲ್ಲ. ಕಳೆದ ಹಲವು ವರ್ಷದಿಂದ ವರ್ಷಕ್ಕೆ ಕರ್ನಾಟಕದಲ್ಲಂತೂ ತಾಪ ಏರುತ್ತಲೇ ಇದೆ.
Published : May 2, 2024, 7:08 PM IST
ಬೆಂಗಳೂರು: ಕಳೆದ ಹಲವು ವರ್ಷಗಳಿಂದ ಕರ್ನಾಟಕದಲ್ಲಿ ತಾಪಮಾನ ಹೆಚ್ಚುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಮಳೆಯ ಏರಿಳಿತದ ನಡುವೆ ದಾಖಲೆ ಪ್ರಮಾಣದಲ್ಲಿ ಉಷ್ಣಾಂಶ ಕಂಡುಬರುತ್ತಿದೆ. ಕಳೆದ ವರ್ಷಕ್ಕಿಂತ ಈ ಸಲ ತಾಪ ಹೆಚ್ಚಳವಾಗಿರುವುದನ್ನು ಇತ್ತೀಚಿನ ಹವಾಮಾನ ವರದಿಯಲ್ಲಿ ಕಾಣಬಹುದು.
2017ರಲ್ಲಿ 23, 2018ರಲ್ಲಿ 21, 2019ರಲ್ಲಿ 27, 2020ರಲ್ಲಿ 27, 2021ರಲ್ಲಿ 20 ಹಾಗೂ 2022ರಲ್ಲಿ 17 ಜಿಲ್ಲೆಗಳಲ್ಲಿ 40ರಿಂದ 45 ಡಿಗ್ರಿ ಸೆಲ್ಸಿಯಸ್‌ವರೆಗೆ ಉಷ್ಣಾಂಶ ದಾಖಲಾಗಿತ್ತು. 2019ರಲ್ಲಿ ರಾಜ್ಯದಲ್ಲೇ ಕಲಬುರಗಿಯಲ್ಲಿ ಅತಿ ಹೆಚ್ಚು 46.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ವರದಿಯಾಗಿದ್ದು, ಈವರೆಗೆ ದಾಖಲಾದ ಅತ್ಯಧಿಕ ತಾಪಮಾನ. ಈ ಬಾರಿಯೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ 4ರಿಂದ 5 ಡಿಗ್ರಿ ಸೆಲ್ಸಿಯಸ್ ಹೆಚ್ಚು ಉಷ್ಣಾಂಶ ವರದಿಯಾಗುತ್ತಿದೆ.
ಕಳೆದೆರಡು ತಿಂಗಳಿನಿಂದ ರಾಜ್ಯದ ಶೇ.90ರಷ್ಟು ಪ್ರದೇಶಗಳು ಬಿಸಿಲಿನ ತಾಪಕ್ಕೆ ನಲುಗಿವೆ. ಹವಾಮಾನ ಅಸಮತೋಲನದಿಂದ ಹೊತ್ತಲ್ಲದ ಹೊತ್ತಲ್ಲಿ ಎಡೆಬಿಡದೆ ಸುರಿಯುವ ಮಳೆ, ಇದ್ದಕ್ಕಿದ್ದಂತೆ ಮಳೆ ಕುಂಠಿತ, ಭೀಕರ ಬರಗಾಲ, ರಣ ಬಿಸಿಲು, ಮೈ ನಡುಗಿಸುವ ಚಳಿ, ಮಳೆ ದಿನಗಳ ಅವಧಿಯಲ್ಲಿನ ಬದಲಾವಣೆ ಹಾಗೂ ಬೇಸಿಗೆ ಅವಧಿಯ ದಿನಗಳು ಏರಿಕೆಯಾಗುತ್ತಿವೆ. ಬೆಂಗಳೂರು ಸಹ ಇದರಿಂದ ಹೊರತಾಗಿಲ್ಲ.
ಬಿಸಿ ಗಾಳಿ/ಶಾಖದ ಅಲೆ ಎಂದರೇನು?: 40 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚು ಉಷ್ಣಾಂಶ ದಾಖಲಾದರೆ ಅದನ್ನು ಶಾಖದ ಅಲೆ ಅಥವಾ ಶಾಖದ ಅಲೆ ಎಂದು ಕರೆಯಲಾಗುತ್ತದೆ. ಆರು ವರ್ಷಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ತಾಪಮಾನ ದಾಖಲಾಗುತ್ತಿದೆ. ಸದ್ಯ ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಗಿಂತ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಹೆಚ್ಚು ಉಷ್ಣಾಂಶ ಕಂಡುಬರುತ್ತಿದೆ ಎಂದು ಹವಾಮಾನ ಕೇಂದ್ರದ ವಿಜ್ಞಾನಿ ಡಾ.ಎಂ.ರಾಜವೇಲ್ ಮಾಹಿತಿ ನೀಡಿದ್ದಾರೆ.
ಹವಾಮಾನ ಇಲಾಖೆ ಮುನ್ಸೂಚನೆ: ಬೀದರ್, ಬೆಳಗಾವಿ, ಧಾರವಾಡ, ಗದಗ, ಕಲಬುರಗಿ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಬಳ್ಳಾರಿ, ಬೆಂಗಳೂರು ನಗರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಶಾಖದ ಅಲೆಯ ವಾತಾವರಣ ಮೇ 5ರವರೆಗೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ 5 ದಿನಗಳವರೆಗೆ ಕರಾವಳಿಯಲ್ಲಿ ಬಿಸಿ ಮತ್ತು ಆರ್ದ್ರತೆಯ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಮುಂದಿನ 48 ಗಂಟೆಗಳ ಕಾಲ ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ಆಕಾಶವಿರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 39 ಡಿಗ್ರಿ ಮತ್ತು 25 ಡಿಗ್ರಿ ಇರುವ ಸಾಧ್ಯತೆ ಎಂದು ಇಲಾಖೆ ತಿಳಿಸಿದೆ.