ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಗದಂತಾಗಿದೆ. ಅಗೋಚರವಾಗಿರುವ ಪ್ರಜ್ವಲ್ ಇಂದು ಜರ್ಮನಿಯ ಮ್ಯೂನಿಚ್ ಏರ್ಪೋರ್ಟ್ನಿಂದ ಬೆಂಗಳೂರು ವಿಮಾನ ಹತ್ತಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ಕೊನೆಯ ಗಳಿಗೆಯಲ್ಲಿ ಅವರು ವಿಮಾನ ಏರಿಲ್ಲ ಎಂಬ ವರದಿಗಳಾಗುತ್ತಿವೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಮ್ಯೂನಿಚ್ ವಿಮಾನ ನಿಲ್ದಾಣದಿಂದ ಪ್ರಜ್ವಲ್ ಬೆಂಗಳೂರಿಗೆ ಬರುವ ವಿಮಾನ ಏರಲಿದ್ದಾರೆ ಎಂದು ಸಾಕಷ್ಟು ಸುದ್ದಿಯಾಗಿತ್ತು. ಇದಕ್ಕೆ ಪೂರಕ ಎಂಬಂತೆ ಪ್ರಯಾಣದ ಟಿಕೆಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡಾ ಆಗಿತ್ತು. ಬೆಂಗಳೂರಿಗೆ ಪ್ರಜ್ವಲ್ ಬರುತ್ತಾರೆ ಎಂಬ ನಿರೀಕ್ಷೆಯನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಸಹ ಹೊಂದಿತ್ತು ಎಂದು ಕೂಡಾ ಹೇಳಲಾಗುತ್ತಿದೆ. ಅಂತೆಯೇ, ಬೆಂಗಳೂರಿಗೆ ಸಂಸದ ಬಂದ ಬಳಿಕ ಮುಂದೆ ಕೈಗೊಳ್ಳಬೇಕಾದ ಕಾನೂನು ಕ್ರಮಗಳ ಬಗ್ಗೆ ಎಸ್ಐಟಿ ಸಿದ್ಧತೆ ಮಾಡಿಕೊಂಡಿತ್ತು ಎಂಬ ಮಾತುಗಳು ಕೇಳಿ ಬಂದಿವೆ. ಆದರೆ, ಈಗ ಜರ್ಮನಿಯಿಂದ ಬೆಂಗಳೂರಿಗೆ ಟೇಕಾಫ್ ಆದ ಲುಫ್ತಾನ್ಸ್ ವಿಮಾನಯಾನ ಸಂಸ್ಥೆಯ ವಿಮಾನದಲ್ಲಿ ಪ್ರಜ್ವಲ್ ಇಲ್ಲ ಎಂಬ ಮಾಹಿತಿ ಕೂಡಾ ಬಂದಿದೆ. ಆದರೆ ಈ ಬಗ್ಗೆ ಎಸ್ಐಟಿ ಆಗಲಿ ಇನ್ನಿತರ ಮೂಲಗಳಿಂದಲ್ಲೂ ಯಾವುದೇ ಮಾಹಿತಿ ಖಚಿತವಾಗಿಲ್ಲ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಎಸ್ಐಟಿ ಚಿಂತನೆ
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಮಾನ ಟಿಕೆಟ್ ಪ್ರಕಾರ, ಭಾರತೀಯ ಕಾಲಮಾನದಂತೆ ಇಂದು 3.30ಕ್ಕೆ ಮ್ಯೂನಿಚ್ ವಿಮಾನ ನಿಲ್ದಾಣದಿಂದ ವಿಮಾನ ಹೊರಟು ಮಧ್ಯರಾತ್ರಿ ಬೆಂಗಳೂರಿಗೆ ಬರಲಿದೆ. ಈ ವಿಮಾನದ ಟಿಕೆಟ್ ಅನ್ನು ಪ್ರಜ್ವಲ್ಗೆ ಕಾಯ್ದಿರಿಸಲಾಗಿತ್ತು. ಆದರೆ, ನಂತರ ಟಿಕೆಟ್ ಬುಕ್ಕಿಂಗ್ ರದ್ದು ಮಾಡಿರುವುದು ಗೊತ್ತಾಗಿದೆ. ಅಲ್ಲದೇ, ವಿಮಾನ ಫ್ಲೈಟ್ ಟಿಕೆಟ್ ರದ್ದು ಮಾಡಿರುವುದು ಇದು ಮೂರನೇ ಬಾರಿ. ಈ ಮೊದಲು ಮೇ 3 ಹಾಗೂ ಮೇ 14 ರಂದು ಬೆಂಗಳೂರಿಗೆ ಬರಬೇಕಿದ್ದ ವಿಮಾನ ಟಿಕೆಟ್ ಅನ್ನು ಪ್ರಜ್ವಲ್ ಕ್ಯಾನ್ಸಲ್ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.
ಪ್ರಜ್ವಲ್ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಏಪ್ರಿಲ್ 30ರಂದು ನೋಟಿಸ್ ಜಾರಿ ಮಾಡಿತ್ತು. ಆದರೆ, ಇದರ ಮರು ದಿನ ವಿದೇಶದಲ್ಲಿದ್ದುಕೊಂಡೇ ಪ್ರಜ್ವಲ್ ಏಳು ದಿನಗಳ ಸಮಾಯವಕಾಶ ಕೋರಿದ್ದರು. ವಿಚಾರಣೆಗೆ ಹಾಜರಾಗಲು ನಾನು ಬೆಂಗಳೂರಿನಲ್ಲಿ ಇಲ್ಲದ ಕಾರಣ, ನನ್ನ ವಕೀಲರ ಮೂಲಕ ಸಿಐಡಿಗೆ ಕಾಲಾವಕಾಶದ ಬಗ್ಗೆ ಮನವಿ ಮಾಡಿದ್ದೇನೆ ಎಂದು ಸಾಮಾಜಿಕ ಜಾಲತಾಣ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.
ಈಗ 15 ದಿನಗಳಾದರೂ ಪ್ರಜ್ವಲ್ ಎಲ್ಲಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಮತ್ತೊಂದೆಡೆ, ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ಜೆಡಿಎಸ್ ಶಾಸಕ, ತಂದೆ ಹೆಚ್.ಡಿ.ರೇವಣ್ಣ ಬಂಧನಕ್ಕೆ ಒಳಗಾಗಿದ್ದರು. ಜಾಮೀನಿನ ಮೇಲೆ ಜೈಲಿನಿಂದ ಮಂಗಳವಾರ ಬಿಡುಗಡೆಯಾಗಿದ್ದಾರೆ. ರೇವಣ್ಣ ಬಿಡುಗಡೆ ನಂತರ ಬೆಂಗಳೂರಿಗೆ ಪ್ರಜ್ವಲ್ ಬರಲಿದ್ದಾರೆ ಎಂಬ ನಿರೀಕ್ಷೆಯಿತ್ತು.
ಇದನ್ನೂ ಓದಿ: ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ: ಹಾಸನದಲ್ಲಿ 18 ಕಡೆ ಎಸ್ಐಟಿ ಶೋಧ