ಧಾರವಾಡ: ರಾಹುಲ್ ಗಾಂಧಿ ಹಲವು ಬಾರಿ ಮೋದಿ ಬಗ್ಗೆ ಜಾತಿ ನಿಂದನೆ ಮಾಡಿದ್ದಾರೆ. ದುರ್ದೈವ ಏನೆಂದರೆ ಅವರಿಗೆ ತಿಳುವಳಿಕೆ ಬರುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.
ಈಗಾಗಲೇ ಈ ರೀತಿ ಮಾಡಿ ಎರಡು ವರ್ಷ ಶಿಕ್ಷೆ ಅನುಭವಿಸಿದ್ದಾರೆ. ತಾತ್ಪೂರ್ತಿಕವಾಗಿ ಅದು ಸ್ಟೇ ಆಗಿದೆ. ಸುಪ್ರೀಂ ಕೋರ್ಟ್ ಸಹ ಸ್ಟೇ ಆದೇಶ ಮಾಡುವಾಗ ಬಹಳ ಸ್ಪಷ್ಟವಾಗಿ ಹೇಳಿದೆ. ಯಾರು ತಮ್ಮನ್ನು ತಾವು ನಾಯಕರೆಂದು ತಿಳಿದುಕೊಳ್ಳುತ್ತಾರೋ ಅವರಿಗೆ ಭಾಷೆಯ ಮೇಲೆ ಹಿಡಿತ ಇರಬೇಕು, ನಾಲಿಗೆ ಮೇಲೆ ಹಿಡಿತ ಇರಬೇಕು ಎಂದಿದೆ. ಈ ರೀತಿ ಅವರು ಮಾತನಾಡುತ್ತಿರುತ್ತಾರೆ. ಜನ ಅವರಿಗೆ ಬುದ್ಧಿ ಕಲಿಸಿದ್ದಾರೆ. ಮಮತಾ ಬ್ಯಾನರ್ಜಿ ಹೇಳಿದಂತೆ ಅವರು ಇದೇ ರೀತಿ ಮಾತನಾಡುತ್ತಾ ಹೋಗಲಿ, ಈ ಬಾರಿ ಲೋಕಸಭೆಯಲ್ಲಿ 40ಕ್ಕಿಂತ ಕಡಿಮೆ ಸ್ಥಾನಕ್ಕೆ ಕುಸಿಯುತ್ತಾರೆ ಎಂದರು.
ಲೋಕಸಭೆ ಚುನಾವಣೆಗೆ ಹೊಸ ಅಭ್ಯರ್ಥಿಗಳ ಆಯ್ಕೆ ಅವಕಾಶ ವಿಚಾರಕ್ಕೆ ಪ್ರತಿಕ್ರಿಯಿಸಿ, ಒಂದೇ ಪಾಲಿಸಿ ಎಲ್ಲ ಕಡೆ ಅಪ್ಲೈ ಆಗೋದಿಲ್ಲ. ನಮ್ಮ ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ಎಲ್ಲೆಲ್ಲಿ ಅಗತ್ಯ ಇದೆಯೋ ಅಲ್ಲಿ ಅಭ್ಯರ್ಥಿಗಳನ್ನು ಬದಲಾವಣೆ ಮಾಡುತ್ತಾರೆ. ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ ಖಂಡಿತಾ ಟಿಕೆಟ್ ಕೊಡುತ್ತಾರೆ. ವಿಧಾನಸಭೆಗೆ ಬದಲಾವಣೆ ಮಾಡಿದಂತೆ ಇಲ್ಲಿ ಅಭ್ಯರ್ಥಿ ಬದಲಾವಣೆ ಮಾಡುವ ಪಾಲಿಸಿ ಇಲ್ಲ ಎಂದರು.
ಸಿದ್ದರಾಮಯ್ಯನವರು ವಿರೋಧ ಪಕ್ಷದವರು ಗೂಂಡಾಗಳಿದ್ದಂತೆ ಎಂದು ಹೇಳಿರುವ ವಿಚಾರಕ್ಕೆ, ಗೂಂಡಾಗಳು ಯಾರ ಪಾರ್ಟಿಯಲ್ಲಿ ಎಷ್ಟು ಜನ ಇದ್ದಾರೆ ಎಂಬುದು ಗೊತ್ತಿದೆ. ಅವರ ಈ ಭಾಷೆ ಹಾಗೂ ನಾಲಿಗೆ ಅವರ ಸಂಸ್ಕೃತಿ ತೋರಿಸುತ್ತದೆ ಎಂದು ಹರಿಹಾಯ್ದರು.
ಇದನ್ನೂ ಓದಿ: ಧಾರ್ಮಿಕ ನಿಂದನೆ ವಿವಾದ: ಶಿಕ್ಷಕಿ ವಜಾಕ್ಕೆ ಶಾಸಕರಿಂದ ಒತ್ತಡ- ಮುಖ್ಯೋಪಾಧ್ಯಾಯಿನಿ ಆರೋಪ