ಬೆಂಗಳೂರು: ದರ್ಶನ್ ಅಂಡ್ ಟೀಂನಿಂದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ಅನುಕುಮಾರ್ನ ತಂದೆ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಆತನನ್ನು ಅಂತ್ಯಕ್ರಿಯೆಗೆ ಕರೆದೊಯ್ಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಆರೋಪಿ ಅನುಕುಮಾರ್ನನ್ನು ಚಿತ್ರದುರ್ಗಕ್ಕೆ ಕರೆದೊಯ್ಯಲಿರುವ ಪೊಲೀಸರು, ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಅನುಮತಿ ಪಡೆದುಕೊಂಡು ಅಂತ್ಯಕ್ರಿಯೆಗೆ ಕರೆದೊಯ್ಯಲಿದ್ದಾರೆ.
ರೇಣುಕಾಸ್ವಾಮಿಯ ಹತ್ಯೆ ಪ್ರಕರಣದ ಇತರ ಆರೋಪಿಗಳಿಗೆ ನೆರವಾಗಿರುವ ಆರೋಪ ಅನುಕುಮಾರ್ ಮೇಲಿದೆ. ಆಟೋ ಚಾಲಕನಾಗಿದ್ದ ಅನುಕುಮಾರ್ ಶುಕ್ರವಾರ ಚಿತ್ರದುರ್ಗ ಪೊಲೀಸರಿಗೆ ಶರಣಾಗಿದ್ದ. ಪ್ರಕರಣದಲ್ಲಿ ತಮ್ಮ ಪುತ್ರ ಪೊಲೀಸರಿಗೆ ಶರಣಾಗಿರುವ ಸುದ್ದಿ ತಿಳಿದ ಬಳಿಕ ನೊಂದಿದ್ದ ಆರೋಪಿ ಅನುಕುಮಾರ್ ತಂದೆ ಚಂದ್ರಪ್ಪ (60) ಶುಕ್ರವಾರ ಮನೆಯಲ್ಲಿ ಕುಸಿದು ಬಿದ್ದಿದ್ದರು. ತಕ್ಷಣ ಚಂದ್ರಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕಡಿಮೆ ರಕ್ತದೊತ್ತಡದಿಂದಾಗಿ ಹೃದಯ ಸ್ತಂಭನ ಸಂಭವಿಸಿ ಅವರು ಸಾವನ್ನಪ್ಪಿದ್ದರು.
ಇದನ್ನೂ ಓದಿ: ಇಂದೇ ನ್ಯಾಯಾಧೀಶರೆದುರು ದರ್ಶನ್ ಟೀಂ ಹಾಜರು?: ತನಿಖಾಧಿಕಾರಿಗಳಿಂದ ಮಾಹಿತಿ ಪಡೆದ ಪೊಲೀಸ್ ಕಮಿಷನರ್ - Darshan Team to Court