ಬೆಂಗಳೂರು: ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಅವರು ಒಂದು ನಿರ್ದಿಷ್ಟ ಸ್ಥಳ ಮತ್ತು ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುವ ಕನಿಷ್ಠ ಸೇವಾವಧಿ ನಿಗದಿಪಡಿಸುವ ಹಾಗೂ ಕರ್ತವ್ಯ ನಿರ್ವಹಣೆ ವೇಳೆ ಅವರ ಹಿತಕಾಯುವ ಉದ್ದೇಶ ಹೊಂದಿರುವ ‘ನಾಗರಿಕ ಸೇವಾ ಮಂಡಳಿ’ (ಸಿಎಸ್‌ಬಿ) ರಚನೆ ಮಾಡುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಸುಪ್ರೀಂಕೋರ್ಟ್ ನಿರ್ದೇಶನದಂತೆ ಕರ್ನಾಟಕದಲ್ಲಿ ನಾಗರಿಕ ಸೇವಾ ಮಂಡಳಿ ರಚಿಸಬೇಕು ಮತ್ತು ನಾಗರಿಕ ಸೇವಕ ಅಧಿಕಾರಿಗಳ ಕನಿಷ್ಠ ಸೇವಾವಧಿ ನಿಗದಿಪಡಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಬೆಂಗಳೂರು ನಿವಾಸಿ, ಸಾಮಾಜಿಕ ಕಾರ್ಯಕರ್ತ ರಿಷಬ್ ಟ್ರಾಕ್ರೂ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಐಎಎಸ್ ಅಧಿಕಾರಿಗಳು ಮೌಖಿಕ ಸೂಚನೆ, ಆದೇಶ, ಅಭಿಪ್ರಾಯ ಅಥವಾ ಪ್ರಸ್ತಾವನೆ ಆಧರಿಸಿ ಸೇವೆ ಸಲ್ಲಿಸುವಂತಾಗಬಾರದು. ಅಲ್ಲದೇ ಐಎಎಸ್ ಅಧಿಕಾರಿಗಳನ್ನು ಆಡಳಿತಾತ್ಮಕ ಮೇಲಾಧಿಕಾರಿಗಳು, ರಾಜಕಾರಣಿಗಳು ಹಾಗೂ ಇತರರ ನ್ಯಾಯಬಾಹಿರ ಹಾಗೂ ನಿರಂಕುಶ ಒತ್ತಡದಿಂದ ರಕ್ಷಿಸಬೇಕು. ಈ ನಿಟ್ಟಿನಲ್ಲಿ ನಾಗರಿಕ ಸೇವಕ ಅಧಿಕಾರಿಗಳಿಗೆ ಕನಿಷ್ಠ ಸೇವಾವಧಿಗೆ ಮಾರ್ಗಸೂಚಿ ನಿಗದಿಪಡಿಸಲು ಕೇಂದ್ರ ಸರ್ಕಾರದಂತೆ ಎಲ್ಲಾ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ನಾಗರಿಕ ಸೇವಾ ಮಂಡಳಿ (ಸಿಎಸ್‌ಬಿ) ರಚಿಸಬೇಕು ಎಂದು 2013ರಲ್ಲಿ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ದೇಶದ 20 ರಾಜ್ಯಗಳಲ್ಲಿ ಈಗಾಗಲೇ ಸಿಎಸ್‌ಬಿ ರಚನೆ ಆಗಿದೆ. ನಮ್ಮ ರಾಜ್ಯದಲ್ಲಿ 2014ರಲ್ಲಿ ಮಂಡಳಿ ರಚಿಸಿ ನಂತರ ಅದನ್ನು ರದ್ದುಪಡಿಸಿದೆ. ಮಂಡಳಿ ರಚನೆ ಸಂಬಂಧ ಹೈಕೋರ್ಟ್ ಸಹ 2021ರಲ್ಲಿ ಆದೇಶ ನೀಡಿದೆ. ಆದರೂ ರಾಜ್ಯದಲ್ಲಿ ಈವರೆಗೆ ನಾಗರಿಕ ಸೇವಾ ಮಂಡಳಿ ರಚನೆ ಆಗಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರು ಹೇಳಿರುವ ವಿಷಯದ ಬಗ್ಗೆ ತಮ್ಮ ತಕರಾರು ಇಲ್ಲ. ಆದರೆ, ಜುಲೈ 11ಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಅರ್ಜಿದಾರರು, ಮನವಿ ಏನೆಂದು ನೋಡಲು ಸರ್ಕಾರಕ್ಕೆ ಸಮಯ ಕೊಡದೆ ಜುಲೈ 18ರಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ ನ್ಯಾಯಾಲಯದ ಮಂಡಿಸಿರುವ ವಿವರಗಳು ಸರ್ಕಾರಕ್ಕೆ ಸಲ್ಲಿಸಿರುವ ಅವರ ಮನವಿಯಲ್ಲಿ ಇಲ್ಲ. ಪರಿಷ್ಕೃತ ಮನವಿ ಸಲ್ಲಿಸಿದರೆ, ಸರ್ಕಾರ ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಪೀಠಕ್ಕೆ ತಿಳಿಸಿದರು.
ಈ ವೇಳೆ ಮಧ್ಯಪ್ರವೇಶಿಸಿ ನ್ಯಾಯಪೀಠ, ಸಿಎಸ್‌ಬಿ ರಚನೆಗೆ 2013ರಲ್ಲಿ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಆಗ ಮಂಡಳಿ ರಚನೆ ಮಾಡಿ, ಅದನ್ನು ರದ್ದುಪಡಿಸಲಾಗಿದೆ. 2021ರಲ್ಲಿ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಆದೇಶ ನೀಡಿದೆ. ಆದರೂ ಸರ್ಕಾರ ಸಿಎಸ್‌ಬಿ ರಚನೆ ಮಾಡಿಲ್ಲ. ಸರ್ಕಾರದ ಈ ಕ್ರಮ ನ್ಯಾಯಾಂಗ ನಿಂದನೆಗೆ ಸಮ ಎಂದು ಮೌಖಿಕವಾಗಿ ಹೇಳಿ ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಿತು.
ಓದಿ: ಜೈಲಿನಲ್ಲಿ ಗಾಂಜಾ, ಗನ್ ಪೂರೈಕೆ ಆರೋಪ : ಪರಿಶೀಲಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ - Ganja And Guns in Jail