ರಾಯಚೂರು: "ನನ್ನ ಪತಿಯ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಶಾಸಕ ಚನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಪುತ್ರನನ್ನು ಬಂಧಿಸಿ, ಶಾಸಕರ ರಾಜೀನಾಮೆ ಪಡೆಯಬೇಕು" ಎಂದು ಮೃತ ಪರಶುರಾಮ್ ಪತ್ನಿ ಶ್ವೇತಾ ಆಗ್ರಹಿಸಿದರು.
ನಗರದ ಐಡಿಎಂಎಸ್ ಲೇಔಟ್ನಲ್ಲಿರುವ ಪರುಶುರಾಮ್ ಅವರ ಮಾವನ ಮನೆಗೆ ಇಂದು ಜಿಲ್ಲಾ ಜೆಡಿಎಸ್ ಮುಖಂಡರ ನಿಯೋಗ ಭೇಟಿ ಮಾಡಿ, ಪಿಎಸ್ಐ ಪತ್ನಿ ಶ್ವೇತಾ ಹಾಗೂ ಅವರ ಮಾವ ವೆಂಕಟ್ ಸ್ವಾಮಿ ಅವರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.
ಈ ವೇಳೆ ಶ್ವೇತಾ ಸುದ್ದಿಗಾರರೊಂದಿಗೆ ಮಾತನಾಡಿ, "ನಮಗೆ ಅನ್ಯಾಯವಾಗಿದೆ. ತುಂಬಾ ಕಿರುಕುಳ ನೀಡುತ್ತಿದ್ದಾರೆ ಎಂದು ನನ್ನ ಪತಿ ಹೇಳುತ್ತಿದ್ದರು. ಕಡಿಮೆ ಕುಲದವರು ನಮ್ಮ ಮುಂದೆ ನಿಂತು ಮಾತನಾಡಲು ಎಷ್ಟು ಧೈರ್ಯ ಅಂತ ನಿಂದಿಸಿದ್ದರು. ಯಾದಗಿರಿಗೆ ಬರುವ ಮೊದಲೇ ಪೋಸ್ಟಿಂಗ್ಗೆ ದುಡ್ಡು ಕೊಟ್ಟಿದ್ದಾರೆ. ಈಗ ಟೈಮ್ ಪೀರಿಯಡ್ ಮುಗಿಯದಿದ್ದರೂ ಮತ್ತೆ ದುಡ್ಡು ಕೇಳಿದರೆ, ಎಷ್ಟು ಕೊಡಲು ಸಾಧ್ಯವಾಗುತ್ತದೆ. ಇಲ್ಲಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಬೇಕು, ಒಳ್ಳೆಯದು ಮಾಡಬೇಕು ಎಂದು ಹೆಮ್ಮೆಯಿಂದ ಹೇಳುತ್ತಿದ್ದರು. ಆದರೆ ಹಣ ನೀಡಿದರೆ ಮಾತ್ರ ಇಲ್ಲಿಯೇ ಕೆಲಸ ಮಾಡಲು ಪೋಸ್ಟಿಂಗ್ ಕೊಡುತ್ತೇವೆ ಎಂದು ಹೇಳಿದ್ದರು. ಎಲ್ಲಿಂದ ಹಣ ತಂದು ಕೊಡೋದು, ಎಷ್ಟು ಸಾರಿ ದುಡ್ಡು ತಂದು ಕೊಡೋದು ಎಂದು ತುಂಬಾ ಡಿಪ್ರೆಶನ್ ಆಗಿದ್ದರು" ಎಂದು ತಿಳಿಸಿದರು.
"ಬೀದರ್ ಜಿಲ್ಲೆಗೆ ಪೋಸ್ಟಿಂಗ್ ನೀಡುವುದಾಗಿ ಹೇಳಿದ್ರು, ಅದು ಸಹ ಗ್ಯಾರೆಂಟಿ ಇರಲಿಲ್ಲ. ಟೌನ್ಗೆ ಕೊಟ್ಟಿಲ್ಲಾಂದ್ರೂ ಕ್ರೈಂ ವಿಭಾಗಕ್ಕೆ ನೀಡುವಂತೆ ಕೇಳಿದ್ರು, ಆದರೆ ಕೊಡಲಿಲ್ಲ. ಹಣ ತೆಗದುಕೊಂಡೇ ಶಾಸಕರು ಇಲ್ಲಿ ಎಲ್ಲರಿಗೂ ಪೋಸ್ಟಿಂಗ್ ಕೊಟ್ಟಿದ್ದಾರೆ. ಯಾದಗಿರಿಯಲ್ಲಿರುವ ಸಿಪಿಐ, ಡಿವೈಎಸ್‌ಪಿ ಎಲ್ಲರೂ ದುಡ್ಡು ಕೊಟ್ಟೆ ಪೋಸ್ಟಿಂಗ್ನಲ್ಲಿದ್ದಾರೆ. ಎಲ್ಲರೂ ದುಡ್ಡು ಕೊಟ್ಟೆ ಪೋಸ್ಟಿಂಗ್ ತಗೊಂಡಿದ್ದಾರೆ" ಎಂದು ದೂರಿದರು.
"ಪತಿಯ ಸಾವು ಆದಾಗಿಂದ ಠಾಣೆಗೆ ಹೋಗಿ ದೂರು ಕೊಡಲು ಮುಂದಾದರೂ ಎಫ್ಐಆರ್ ಮಾಡಲಿಲ್ಲ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆಯವರು ಫೋನ್ ಮಾಡಿ ಹೇಳಿದರೂ ಎಫ್ಐಆರ್ ಮಾಡಲಿಲ್ಲ. ದೂರು ಸ್ವೀಕರಿಸಲು 18 ಗಂಟೆ ನಾವು ಕಾಯಬೇಕಾಯಿತು. ಸಿಐಡಿ ಅಧಿಕಾರಿಗಳು ಬಂದಿದ್ದಾರೆ, ತನಿಖೆ ಇನ್ನೂ ಶುರುಮಾಡಿಲ್ಲ. ಬೇಗ ರಿಸಲ್ಟ್ ಕೊಡ್ತಾರೆ ಅಂತ ನಂಬಿಕೆಯಿಲ್ಲ. ಅದಕ್ಕೆ ಇದನ್ನು ಸಿಬಿಐಗೆ ಕೊಡಬೇಕು. ಇಲ್ಲಿ ನಡೆದದ್ದು ನಾಳೆ ಬೇರೆ ಎಲ್ಲಾದರು ನಡೆಯಬಹುದು. ನಮ್ಮ ಕುಟುಂಬಕ್ಕೆ ಆದ ಸ್ಥಿತಿ ಬೇರೆಯವರಿಗೆ ಬರಬಾರದು" ಎಂದರು.
ಪರುಶುರಾಮ್ ಮಾವ ವೆಂಕಟ್ ಸ್ವಾಮಿ ಮಾತನಾಡಿ, "ಪ್ರಕರಣವನ್ನು ಸಿಐಡಿಗೆ ಕೊಟ್ಟಿರುವುದನ್ನು ಸ್ವಾಗತ ಮಾಡುತ್ತೇವೆ. ಯಾದಗಿರಿ ಶಾಸಕ ಹಾಗೂ ಅವರ ಪುತ್ರನ ಹಿಂಸೆಯಿಂದ ನನ್ನ ಅಳಿಯ ಮೃತಪಟ್ಟಿದ್ದಾನೆ. ಸಾವಿಗೆ ನ್ಯಾಯ ಸಿಗಬೇಕು ಎಂದು ಎಸ್ಪಿಯವರಿಗೆ ದೂರು ನೀಡಿದ್ದೇವೆ. 30 ಲಕ್ಷ ಕೊಡದಿದ್ದರೆ ಯಾದಗಿರಿಯಲ್ಲಿ ಇರಬಾರದು ಅಂತ ಹಿಂಸೆ ಕೊಟ್ಟಿದ್ದಾರೆ. ಜಾತಿ ನಿಂದನೆ ಮಾಡಿದ್ದಾರೆ. ಅದಕ್ಕೆ ನೊಂದು ಬಿಪಿ ಹೆಚ್ಚಾಗಿ ನನ್ನ ಅಳಿಯ ಮೃತಪಟ್ಟಿದ್ದಾನೆ" ಎಂದು ಹೇಳಿದರು.
"ಯಾದಗಿರಿ ಠಾಣೆ ಕಾನ್ಸ್ಟೇಬಲ್ ಒಬ್ಬರು ನಮ್ಮನ್ನು ಸಂಪರ್ಕ ಮಾಡಿ, ಇಂದು ಮಧ್ಯಾಹ್ನ 1.30ಕ್ಕೆ ಸಿಐಡಿಯವರು ಬರಲು ಹೇಳಿದ್ದಾರೆ ಎಂದು ಹೇಳಿದರು. ಆದರೆ ಪುನಃ ಕರೆ ಮಾಡಿ ಮತ್ತೆ ತಿಳಿಸುತ್ತೇವೆ ಅಂತ ಹೇಳಿದ್ದಾರೆ. ಸಿಐಡಿಯವರ ಕರೆಗೆ ಕಾಯುತ್ತಿದ್ದೇವೆ. ಸರ್ಕಾರದ ಹಾಗೂ ಗೃಹ ಸಚಿವರ ಮೇಲೆ ಭರವಸೆ ಇಡುತ್ತೇವೆ. ನಮ್ಮ ಅಳಿಯನ ಸಾವಿಗೆ ನ್ಯಾಯ ಸಿಗುತ್ತೆ ಅನ್ನೋ ನಂಬಿಕೆಯಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ಪರಶುರಾಮ್, ಶಾಸಕರ ಒತ್ತಡದ ಕುರಿತು ನನ್ನ ಜೊತೆ ಮಾತನಾಡಿದ್ದ. ಯಾದಗಿರಿಯಲ್ಲಿ ನನ್ನ ಪರಸ್ಥಿತಿ ಕಷ್ಟವಿದೆ. ನಾನು ಬಂದು 7 ತಿಂಗಳಾಗಿವೆ. ಎಂಪಿ ಚುನಾವಣೆ ಹಿನ್ನೆಲೆ ಬೇರೆಡೆ ಹೋಗಿದ್ದೆ, ಮರಳಿ ಬಂದ ಮೇಲೆ ಶಾಸಕ ಹಾಗೂ ಅವರ ಪುತ್ರ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಅವರು ಕೇಳುವಷ್ಟು ಹಣ ನನಗೆ ಕೊಡಲು ಆಗಲ್ಲ. ಬೇರೆ ಎಲ್ಲಿಗಾದರೂ ಹೋಗುತ್ತೇನೆ. ಇಲ್ಲಾ, ಹಿಂದಿನ ಥರ ಎಸ್ಪಿ ಕಚೇರಿಯಲ್ಲಿ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದು ಮನನೊಂದು ನನ್ನ ಬಳಿ ದುಃಖ ಹಂಚಿಕೊಂಡಿದ್ದ."
"ಅಳಿಯನಿಗೆ ಮನಮೊಲಿಸಲು ಪ್ರಯತ್ನ ಮಾಡಿದ್ದೆ, ವೃತ್ತಿಯಲ್ಲಿ ಇದು ಸಾಮಾನ್ಯ. ರಾಜಕೀಯ ಒತ್ತಡಗಳು ಇದ್ದೇ ಇರುತ್ತೆ. ಎಲ್ಲಿ ಕೊಡ್ತಾರೆ ಅನ್ನೋದನ್ನು ಕೇಳಿ, ಐಜಿ ಆಫೀಸ್‌ಗೆ ಹೋಗಿ ರಿಕ್ವೆಸ್ಟ್ ಮಾಡು. ಮುಂದೆ ಜನರಲ್ ಟ್ರಾನ್ಸ್‌ಫರ್ ಟೈಮಲ್ಲಿ ನೋಡೋಣ ಅಂತ ಮನವರಿಕೆ ಮಾಡಿದ್ದೆವು. ಆದರೆ ಪರಶುರಾಮ್ ತುಂಬಾ ಒತ್ತಡದಲ್ಲಿದ್ದ. ಮಗಳ ಮದುವೆಯಾಗಿ ಮೂರು ವರ್ಷಗಳಾಗಿವೆ. ಒಂದು ಮಗು ಇದೆ. ಈಗ ತುಂಬು ಗರ್ಭಿಣಿ. ನನ್ನ ಮಗಳಿಗೂ ನ್ಯಾಯ ಸಿಗಬೇಕು" ಎಂದು ಒತ್ತಾಯಿಸಿದರು.
ಜೆಡಿಎಸ್ ಮುಖಂಡ ಮಾತನಾಡಿ, ಶ್ವೇತಾ ಕುಟುಂಬಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ದೂರವಾಣಿ ಮೂಲಕ ಸ್ವಾಂತನ ಹೇಳಿ, ಧೈರ್ಯ ಹೇಳಿದರು. "ನಿಮ್ಮ ಪತಿಯ ಸಾವಿಗೆ ನ್ಯಾಯ ಒದಗಿಸಲು ಹೋರಾಟ ಮಾಡುತ್ತೇವೆ. ನಿಮ್ಮ ಜೊತೆ ನಾವಿದ್ದೇವೆ ಎಂದು ಹೇಳಿದ್ದಾರೆ. ನಿಮ್ಮ ಮನೆಗೆ ಬಂದು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ" ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವೀರುಪಾಕ್ಷಿ ತಿಳಿಸಿದರು.
ಇದನ್ನೂ ಓದಿ: PSI ಪರಶುರಾಮ್ ಸಾವು ಪ್ರಕರಣ: ತನಿಖೆಗೆ ಆದೇಶ - ಗೃಹ ಸಚಿವ ಡಾ.ಜಿ.ಪರಮೇಶ್ವರ್ - PSI Death Case