ಬೆಂಗಳೂರು: ನೆಲಮಂಗಲ ತಾಲೂಕಿನ ಹನುಮಂತಪುರ, ಬಿದ್ಲೂರು ಹಾಗೂ ಕೋಡಿಪಾಳ್ಯ ವ್ಯಾಪ್ತಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಪ್ರಾಥಮಿಕ ಅಧಿಸೂಚನೆ ಹೊರಡಿಸಿರುವ ಜಮೀನಿನಲ್ಲಿ ಕೆಲವರು ಹೆಚ್ಚಿನ ಪರಿಹಾರ ಪಡೆಯಲೆಂದೇ ಗಿಡ, ಮರಗಳನ್ನು ನೆಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ತನಿಖೆ ನಡೆಸಿ ಮೂರು ದಿನಗಳಲ್ಲಿ ವರದಿ ನೀಡುವಂತೆ ಸಂಸ್ಥೆಯ ಸಿಇಒ ಡಾ.ಎಂ.ಮಹೇಶ್ ವಿಶೇಷ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಿಯಮಗಳ ಪ್ರಕಾರ ಪ್ರಾಥಮಿಕ ಅಧಿಸೂಚನೆ ಹೊರಡಿಸಿದಾಗ ಜಮೀನುಗಳಲ್ಲಿ ಇರುವ ಗಿಡ, ಮರಗಳು ಮತ್ತು ಕಟ್ಟಡಗಳಿಗೆ ಮಾತ್ರ ಪರಿಹಾರ ಕೊಡಲಾಗುವುದು. ಆದರೆ ಕೆಲವೆಡೆಗಳಲ್ಲಿ ವಿಪರೀತ ಪರಿಹಾರ ದಕ್ಕಿಸಿಕೊಳ್ಳಲೆಂದೇ ಕೆಲವರು ಅಧಿಸೂಚಿತ ಜಮೀನುಗಳಲ್ಲಿ ಬೇರೆಡೆ ಬೆಳೆದು ನಿಂತಿರುವ ಬಲಿತ ಗಿಡ, ಮರಗಳನ್ನು ತಂದು ನೆಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹೀಗಾಗಿ ಈ ಆದೇಶ ಮಾಡಿದ್ದು, ತನಿಖಾ ತಂಡದಲ್ಲಿ ಕೆಐಎಡಿಬಿ ಮುಖ್ಯ ಎಂಜಿನಿಯರ್ ಕೂಡ ಇರಲಿದ್ದಾರೆ ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ಅಥವಾ ಇಸ್ರೋದ ಸ್ಯಾಟಲೈಟ್ ಮ್ಯಾಪಿಂಗ್ ಆಧರಿಸಿಯೇ ಅಧಿಸೂಚಿತ ಜಮೀನುಗಳಿಗೆ ಪರಿಹಾರ ವಿತರಿಸುವುದನ್ನು ಕಡ್ಡಾಯಗೊಳಿಸಲಾಗುವುದು. ಅಧಿಸೂಚನೆ ಹೊರಡಿಸಿದ ನಂತರ ಹೆಚ್ವಿನ ಪರಿಹಾರಕ್ಕಾಗಿ ಗಿಡ/ಮರ ತಂದು ನೆಡುವುದರ ಮೂಲಕ ಸಂಸ್ಥೆಗೆ ನಷ್ಟ ಉಂಟುಮಾಡಿದರೆ ಅದಕ್ಕೆ ಸಂಬಂಧಪಟ್ಟ ವಿಶೇಷ ಭೂಸ್ವಾಧೀನ ಅಧಿಕಾರಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಹಾಗೆಯೇ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಮಹೇಶ್ ಎಚ್ಚರಿಸಿದ್ದಾರೆ.