ರಾಮನಗರ: ಚನ್ನಪಟ್ಟಣ ಉಪಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಸಲು ಜೆಡಿಎಸ್ ತಾಲೂಕು ಘಟಕ ವತಿಯಿಂದ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಚನ್ನಪಟ್ಟಣ ಜೆಡಿಎಸ್ ತಾಲೂಕು ಅಧ್ಯಕ್ಷ ಹೆಚ್. ಸಿ ಜಯಮುತ್ತು ತಿಳಿಸಿದ್ದಾರೆ.
ಚನ್ನಪಟ್ಟಣ ತಾಲೂಕಿನ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಜೆಡಿಎಸ್ ಮುಖಂಡರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಮಾತನಾಡಿದ ಅವರು, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರೇ ಅಭ್ಯರ್ಥಿಯಾಗಬೇಕೆಂದು ಒತ್ತಾಯ ಮಾಡಿದರು.
ಇದುವರೆಗೂ ಎನ್ಡಿಎ ಅಭ್ಯರ್ಥಿಯನ್ನ ಯಾರೂ ಕೂಡ ಘೋಷಣೆ ಮಾಡಿಲ್ಲ. ಇದೆಲ್ಲವೂ ಊಹಾಪೋಹ. ನಮ್ಮ ಅಭ್ಯರ್ಥಿಯನ್ನು ಕೇಂದ್ರ ಸಚಿವರಾಗಿರುವ ಹೆಚ್.ಡಿ ಕುಮಾರಸ್ವಾಮಿ ಘೋಷಣೆ ಮಾಡುತ್ತಾರೆ. ಅಲ್ಲಿಯವರೆಗೂ ಜೆಡಿಎಸ್ ಮುಖಂಡರು ಯಾವುದೇ ಸಭೆ ನಡೆಸಿ ಗೊಂದಲ ಮೂಡಿಸದಂತೆ ಕಾರ್ಯಕರ್ತರಿಗೆ ತಾಕೀತು ಮಾಡಿದರು.
ಇದಲ್ಲದೆ ಜೆಡಿಎಸ್ ಪಕ್ಷ ಸಂಘಟನೆಗೆ ನಿಖಿಲ್ ಕುಮಾರಸ್ವಾಮಿ ಅನಿವಾರ್ಯ. ಚನ್ನಪಟ್ಟಣ ಜೆಡಿಎಸ್ ಭದ್ರಕೋಟೆ. ಇಲ್ಲಿ ಪಕ್ಷ ಉಳಿಸಿಕೊಳ್ಳಬೇಕಿದೆ. ಎನ್ಡಿಎ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಮೈತ್ರಿ ಧರ್ಮ ಪಾಲಿಸಲಿದ್ದಾರೆಂಬ ನಂಬಿಕೆ ಇದೆ. ರಾಜ್ಯದಲ್ಲಿ ನಡೆಯಲಿರುವ ಮೂರು ಉಪ ಚುನಾವಣೆ ಪೈಕಿಯಲ್ಲಿ ಈಗಾಗಲೇ ಎರಡು ಕ್ಷೇತ್ರ ಬಿಜೆಪಿಗೆ ನೀಡಲಿದ್ದು, ಮತ್ತೊಂದು ಚನ್ನಪಟ್ಟಣ ಕ್ಷೇತ್ರ ಜೆಡಿಎಸ್ ಪಕ್ಷದ ಪಾಲಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈಗಾಗಲೇ ಯೋಗೇಶ್ವರ್ ಎಂಎಲ್ಸಿಯಾಗಿದ್ದಾರೆ. ಅವರ ನೇತೃತ್ವದಲ್ಲಿ ನಿಖಿಲ್ ಗೆಲ್ಲಿಸಲಿ, ಅವರಿಗೆ ಮುಂದೆ ಒಳ್ಳೆಯ ಅವಕಾಶವಿದೆ. ನಿಖಿಲ್ ಕುಮಾರಸ್ವಾಮಿ ಅವರೇ ನಮ್ಮ ಅಭ್ಯರ್ಥಿ ಎಂದು ಇದೇ ವೇಳೆ ಜಯಮುತ್ತು ತಿಳಿಸಿದರು.
ಈವರೆಗೂ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಮೈತ್ರಿ ಅಭ್ಯರ್ಥಿಯಾಗಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಮೈತ್ರಿ ಪಕ್ಷದಿಂದ ಪ್ರಬಲ ಅಭ್ಯರ್ಥಿಯಾಗಿದ್ದಾರೆ. ಜೊತೆಗೆ ತಮಗೆ ಟಿಕೆಟ್ ಸಿಗಲಿದೆ ಎಂದು ಕ್ಷೇತ್ರದಾದ್ಯಂತ ಗ್ರಾಮೀಣ ಮಟ್ಟದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಇದಲ್ಲದೆ ಕೆಲ ಜೆಡಿಎಸ್ ಮುಖಂಡರು ಕೂಡ ಸಿಪಿವೈ ಪರ ಬ್ಯಾಟಿಂಗ್ ನಡೆಸಿ ಅವರೇ ಅಭ್ಯರ್ಥಿಯಾದರೆ ಸೂಕ್ತ ಎಂದು ತಿಳಿಸಿದ್ದರು. ಇದು ಜೆಡಿಎಸ್ ಪಕ್ಷದ ನಿಷ್ಠಾವಂತ ಮುಖಂಡರಿಗೆ ನುಂಗಲಾರದ ತುತ್ತಾಗಿತ್ತು. ಕ್ಷೇತ್ರ ಜೆಡಿಎಸ್ ಭದ್ರ ಕೋಟೆಯಾಗಿದ್ದು, ನಮ್ಮ ಪಕ್ಷದ ಚಿಹ್ನೆಯಿಂದಲೇ ಚುನಾವಣೆ ಎದುರಿಸಬೇಕೆಂದು ಜೆಡಿಎಸ್ ಪಕ್ಷದ ನಿಷ್ಠಾವಂತ ಮುಖಂಡರು ಒತ್ತಾಯಿಸಿದ್ದರು.
ಇದನ್ನೂ ಓದಿ : ಸಿನಿಮಾ ಬಂದ್, ನಾನು ಸಂಪೂರ್ಣ ರಾಜಕಾರಣಿಯಾಗುವೆ: ನಿಖಿಲ್ ಕುಮಾರಸ್ವಾಮಿ - Nikhil Kumaraswamy