ರಾಮನಗರ: ನವಜಾತ ಶಿಶುವಿನ ಮೃತದೇಹವೊಂದು ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ದಯಾನಂದ ಸಾಗರ ಆಸ್ಪತ್ರೆಯ ಶೌಚಾಲಯದ ಗುಂಡಿಯಲ್ಲಿ ಪತ್ತೆಯಾಗಿದೆ.
ಶಿಶುವನ್ನು ಶೌಚಾಲಯದ ಕಮೋಡ್ನಲ್ಲಿ ಹಾಕಿ ನೀರನ್ನು ಪ್ಲಶ್ ಮಾಡಿದ್ದು, ಶವ ಪೈಪ್ನಲ್ಲಿ ಸಿಲುಕಿಕೊಂಡಿದೆ. ಇದರಿಂದಾಗಿ ಕಟ್ಟಿಕೊಂಡಿದ್ದ ಶೌಚಾಲಯದ ಪೈಪ್ಲೈನ್ ಮತ್ತು ಗುಂಡಿಯನ್ನು ಪರಿಶೀಲಿಸಿದಾಗ ಮೃತ ಶಿಶು ದೊರೆತಿದೆ. ಶಿಶುವಿನ ಜನನ ಮರೆಮಾಚಲು ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಅಧಿಕಾರಿಗಳು ಭೇಟಿ, ಪರಿಶೀಲನೆ: ಘಟನೆ ಕುರಿತು ಆಸ್ಪತ್ರೆ ವೈದ್ಯರು ಹಾರೋಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಹಿರಿಯ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ತಾಯಿಯಿಂದಲೇ ಕೃತ್ಯ ಶಂಕೆ: ನವಜಾತ ಶಿಶುವಿಗೆ ಜನ್ಮ ನೀಡಿದ ತಾಯಿಯಿಂದಲೇ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ. ಮಗುವಿನ ಜನನ ಮರೆಮಾಚಲು ಹಾಗೂ ಮಗುವಿನ ಮೃತದೇಹವನ್ನು ರಹಸ್ಯವಾಗಿ ಮುಚ್ಚಿಟಲು ತಾಯಿಯೇ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ. ದೂರು ದಾಖಲಿಸಿಕೊಂಡಿರುವ ಹಾರೋಹಳ್ಳಿ ಪೊಲೀಸರು ಡಿ.ಎನ್.ಎ ಪರೀಕ್ಷೆ ಮೂಲಕ ಆರೋಪಿಯನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಅಲ್ಲದೆ ಆಸ್ಪತ್ರೆಯ ಸಿಸಿಟಿವಿ ಕ್ಯಾಮರಾ ಪರಿಶೀಲಿಸಲಾಗುತ್ತಿದೆ. ಶೀಘ್ರದಲ್ಲೇ ಆರೋಪಿಯ ಪತ್ತೆ ಕಾರ್ಯ ನಡೆಸುವುದಾಗಿ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ದೆಹಲಿ ಮೂಲದ ಯುವತಿಯ ಮೃತದೇಹ ಪತ್ತೆ, ಆತ್ಮಹತ್ಯೆ ಶಂಕೆ