ಮಂಡ್ಯ: ಖಾಸಗಿ ಶಾಲೆಯ ಶಿಕ್ಷಕಿಯನ್ನು ಹತ್ಯೆ ಮಾಡಿ ಹೂತು ಹಾಕಿದ ಘಟನೆ ಮೇಲುಕೋಟೆಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿಯ 28 ವರ್ಷದ ಮಹಿಳೆ ಕೊಲೆಯಾದವರು. ಮೇಲುಕೋಟೆಯ ಖಾಸಗಿ ಶಾಲೆಯೊಂದರಲ್ಲಿ ಅತಿಥಿ ಶಿಕ್ಷಕಿ ಕೊಲೆಯಾದ ಮಹಿಳೆ ಕೆಲಸ ಮಾಡುತ್ತಿದ್ದರು.
ಜ.20ರಂದು ಮಹಿಳೆ ಸ್ಕೂಟಿಯಲ್ಲಿ ಶಾಲೆಗೆ ಹೋಗಿದ್ದರು. ಆದರೆ ರಾತ್ರಿಯಾದ್ರೂ ವಾಪಸ್ ಮನೆಗೆ ಬಂದಿರಲಿಲ್ಲ. ಇದನ್ನು ಗಮನಿಸಿದ ಪತಿ, ಪತ್ನಿಯ ಮೊಬೈಲ್ಗೆ ಕರೆ ಮಾಡಿದ್ದಾರೆ. ಆ ಸಮಯದಲ್ಲಿ ಅವರ ಫೋನ್ ಸ್ವಿಚ್ಡ್ ಆಫ್ ಆಗಿರುವುದು ಗೊತ್ತಾಗಿದೆ. ಇದರಿಂದ ಆತಂಕಗೊಂಡ ಪತಿ, ಮೇಲುಕೋಟೆಗೆ ತೆರಳಿ ಸಂಜೆವರೆಗೂ ಹುಡುಕಾಡಿದ್ದಾರೆ. ಬಳಿಕ ಮೇಲುಕೋಟೆ ಪೊಲೀಸರಿಗೆ ದೂರು ಕೂಡಾ ನೀಡಿದ್ದಾರೆ. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಇನ್ನು ಕೆಲ ಸ್ಥಳೀಯರು ಮಾಹಿತಿ ನೀಡಿದ ಮೇರೆಗೆ ಮೇಲುಕೋಟೆಯ ಯೋಗನರಸಿಂಹಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಶನಿವಾರ ಸಂಜೆ ಶಿಕ್ಷಕಿಯ ಸ್ಕೂಟಿ ಪತ್ತೆಯಾಗಿತ್ತು. ಶಿಕ್ಷಕಿ ಮತ್ತು ಒಬ್ಬ ಯುವಕ ಬೆಟ್ಟದ ತಪ್ಪಲಿನಲ್ಲಿ ಜಗಳವಾಡುತ್ತಿರುವಾಗ ಸ್ಥಳೀಯರು ವಿಡಿಯೋ ಮಾಡಿಕೊಂಡಿದ್ದರು. ಆ ವಿಡಿಯೋ ಆಧರಿಸಿ ಬಳಿಕ ಅಲ್ಲೇ ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸರು ಹುಡುಕಿದಾಗ, ಸೋಮವಾರ ಮೃತದೇಹ ಹೂತಿಟ್ಟಿದ್ದು ಪತ್ತೆಯಾಗಿದೆ. ಬಳಿಕ ತಹಶೀಲ್ದಾರ್ ಸಮ್ಮುಖದಲ್ಲಿ ಹೂತಿಟ್ಟ ಶವವನ್ನು ಹೊರತೆಗೆಯಲಾಗಿದೆ. ಆ ಬಳಿಕ ನಾಪತ್ತೆ ಪ್ರಕರಣವನ್ನು ಕೊಲೆ ಪ್ರಕರಣ ಎಂದು ಪೊಲೀಸರು ಬದಲಿಸಿಕೊಂಡಿದ್ದಾರೆ. ಮೃತ ಶಿಕ್ಷಕಿಯು 10 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಸದ್ಯ ಒಂದು ಗಂಡು ಮಗು ಸಹ ಇದೆ. ಕಳೆದ ಒಂದು ವರ್ಷದಿಂದ ಮಾಣಿಕ್ಯನಹಳ್ಳಿಯಿಂದ ಮೇಲುಕೋಟೆಯ ಖಾಸಗಿ ಶಾಲೆಗೆ ಶಿಕ್ಷಕಿಯಾಗಿ ಕೆಲಸಕ್ಕೆ ಹೋಗುತ್ತಿದ್ದರು.
ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡಾಗ ಮೇಲುಕೋಟೆಯ ಯೋಗನರಸಿಂಹಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಶನಿವಾರ ಸ್ಕೂಟಿ ಪತ್ತೆಯಾತ್ತು. ಬಳಿಕ ಅನುಮಾನದ ಮೇರೆಗೆ ಮತ್ತಷ್ಟು ಶೋಧ ಕಾರ್ಯ ನಡೆಸಿದಾಗ ಬೆಟ್ಟದ ತಪ್ಪಲಿನಲ್ಲೇ ಶವ ಹೂತಿಟ್ಟಿರುವುದು ಪತ್ತೆಯಾಗಿತ್ತು. ನಾಪತ್ತೆ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಬದಲಾಯಿಸಿಕೊಂಡಿದ್ದೇವೆ. ಮೃತ ದೇಹದ ಮರಣೋತ್ತರ ಪರೀಕ್ಷೆಯ ಬಳಿಕ ಮತ್ತಷ್ಟು ಮಾಹಿತಿ ಗೊತ್ತಾಗಲಿದೆ. ಪ್ರಕರಣದ ಬಗ್ಗೆ ತನಿಖೆಯ ಬಳಿಕವಷ್ಟೇ ಪೂರ್ಣ ಮಾಹಿತಿ ಸಿಗಲಿದೆ. ತನಿಖೆ ಕೈಗೊಂಡು ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ಎಸ್ಪಿ ಎನ್.ಯತೀಶ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮೈಸೂರು: ಕುಡಿದ ಅಮಲಿನಲ್ಲಿ ಪತ್ನಿ ಕೊಲೆ ಮಾಡಿದ ಪತಿ