ಶಿವಮೊಗ್ಗ: ದೇಶ ವಿರೋಧಿ ಘೋಷಣೆ ಕೂಗಿದವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು ಆಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣದ ಕುರಿತು ಕ್ರಮ ಕೈಗೊಳ್ಳಲು ವಿಳಂಬ ಮಾಡುವ ಪ್ರಶ್ನೆಯೇ ಇಲ್ಲ, ತಪ್ಪಿತಸ್ಥರನ್ನು ಬಂಧನ ಮಾಡಲಾಗುತ್ತದೆ. ಅಧಿಕೃತವಾಗಿ ಎಫ್ಎಸ್ಎಲ್ ವರದಿ ಬರಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಬಾಂಬ್ ಸ್ಫೋಟ, ದೇಶ ವಿರೋಧಿ ಘೋಷಣೆ ಪ್ರಾರಂಭಗುತ್ತಿದೆ ಎಂದು ಬಿಜೆಪಿ ನಾಯಕರ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಏನು ಆಗಿಲ್ವಾ?. ಮಣಿಪುರದಲ್ಲಿ ಏನಾಯಿತು?. ಪುಲ್ವಾಮಾ ದಾಳಿ ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದಾಗ ತಾನೇ ಆಗಿದ್ದು, ರೈತರ ಮೇಲೆ ಹೈಟೆಕ್ ಡ್ರೋನ್ನಿಂದ ಟಿಯರ್ ಗ್ಯಾಸ್ ಬಿಡುತ್ತಿದ್ದಾರೆ. ಅಲ್ಲಿ ಕಾಂಗ್ರೆಸ್ ಸರ್ಕಾರ ಇದೆಯಾ?. ಕಾಮನ್ ಸೆನ್ಸ್ ಇಲ್ವಾ ಅವರಿಗೆ, ಸೆನ್ಸ್ ಲೇಸ್ ಫೆಲೋಸ್ ಅವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಅಧಿಕಾರಿಕ್ಕೆ ಬಂದಾಗ ಸಮಾನತೆ ತರುತ್ತದೆ, ಬಿಜೆಪಿಯವರು ಧರ್ಮಗಳ ನಡುವೆ ಜಗಳ ತಂದಿಡುತ್ತಾರೆ. ಅದಕ್ಕೆ ಅವರನ್ನು ಕಳೆದ ಚುನಾವಣೆಯಲ್ಲಿ ಜನರು ಸೋಲಿಸಿದರು. ಚುನಾವಣೆ ಹತ್ತಿರ ಬಂದ ತಕ್ಷಣ ಬಿಜೆಪಿಯವರು ಈ ರೀತಿ ಮಾಡುತ್ತಾರೆ. ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ತಕ್ಷಣ ಭಯೋತ್ಪಾದನೆ ನಿಲ್ಲುತ್ತದೆ ಎಂದು ಹೇಳಿದ್ದರು, ಈಗ ಜನರು ಮತ್ತು ಸೈನಿಕರು ಸಾಯುತ್ತಿಲ್ಲವೇ ಎಂದು ಪ್ರಶ್ನಿಸಿದರು.
ವರದಿಯನ್ನು ವಿರೋಧ ಮಾಡಲು ಅವರಿಗೆ ಹಕ್ಕಿದೆ : ಕಾಂತರಾಜು ವರದಿಗೆ ಕೆಲ ಮಠಾಧೀಶರು ಮತ್ತು ಶಾಮನೂರು ಶಿವಶಂಕರಪ್ಪ ವಿರೋಧಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಯಾರು ಬೇಕಾದರೂ ವಿರೋಧ ಮಾಡಬಹುದು. ವಿರೋಧ ಮಾಡಬಾರದು ಎಂಬ ಕಾನೂನು ಇದೆಯಾ. ಅವರಿಗೆ ವಿರೋಧ ಮಾಡುವ ಹಕ್ಕು ಇದೆ. ಅದು ಶಾಮನೂರು ಶಿವಶಂಕರಪ್ಪ ಆಗಿರಬಹುದು ಮತ್ಯಾರೇ ಆಗಿರಬಹುದು. ನಾನು ವಿರೋಧ ಮಾಡಬಹುದು ನನಗೂ ಮನಸಿನಲ್ಲಿ ಇದೆ. ವಿರೋಧವನ್ನು ಶಾಮನೂರು ಅವರು ಮಾಡಿದರು ಇನೊಬ್ಬರು ಮಾಡಿದರು ಎಂಬುದು ಪ್ರಶ್ನೆಯಾಲ್ಲ. ವಿರೋಧ ಮಾಡುವುದು ಅವರ ವೈಯಕ್ತಿಕ ಎಂದು ಹೇಳಿದರು.
ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರ ಹೇಳಿಕೆ ಬಗ್ಗೆ ಅವರನ್ನೇ ಪ್ರಶ್ನಿಸಿ ಎಂದರು.
ಇದನ್ನೂ ಓದಿ: ಪಾಕ್ ಪರ ಘೋಷಣೆ ಕುರಿತ ಖಾಸಗಿ ಎಫ್ಎಸ್ಎಲ್ ವರದಿ: ಸಚಿವ ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ ಹೇಳಿದ್ದೇನು?