ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸಿಎ ನಿವೇಶನ ಅಕ್ರಮ ಹಂಚಿಕೆ ಆರೋಪ ಸಂಬಂಧ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು ಅದನ್ನು ವಾಟ್ಸ್ಆ್ಯಪ್ನಲ್ಲಿ ಬಂದಿತ್ತು, ಗಮನಿಸಿದ್ದೇನೆ. ಯಾರೋ ಸಿಎಂಗೆ ಪತ್ರ ಬರೆದಿದ್ದಾರಲ್ಲ. ಎಂ.ಬಿ.ಪಾಟೀಲ್ ಯಡವಟ್ಟು ಮಾಡುವಷ್ಟು ದಡ್ಡರಲ್ಲ. ನಾವು ನಿಯಮ ಅನುಸರಿಸಿ ಸಿಎ ನಿವೇಶನ ಕೊಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಸಿಎ ನಿವೇಶನಕ್ಕೆ ಒಂದು ರೇಟ್ ಫಿಕ್ಸ್ ಮಾಡಿದ್ದೇವೆ. ಪ್ರತಿಯೊಂದು ಅರ್ಜಿಯನ್ನೂ ಕೂಡ ಪರಿಶೀಲಿಸಿದ್ದೇವೆ. ಆನ್ಲೈನ್ ಅಪ್ಲಿಕೇಶನ್ ಮಾಡಿದ್ದೇವೆ. ಎಸ್ಸಿ, ಎಸ್ಟಿಗೂ ಶೇ.24 ರಷ್ಟು ಕೊಟ್ಟಿದ್ದೇವೆ. ಇಷ್ಟಾದ್ರೂ ಮಾಡೋದಾದ್ರೆ ಮಾಡಿಕೊಳ್ಳಲಿ ಎಂದರು.
ಕೆಐಎಡಿಬಿ ಸಿಎ ನಿವೇಶನ ಅಕ್ರಮ ದೂರು: ಸಿಎ ಸೈಟ್ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯಗೆ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಎಂಬವರು ದೂರು ನೀಡಿದ್ದಾರೆ. ಕೆಐಎಡಿಬಿನಲ್ಲಿ ನೂರಾರು ಕೋಟಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕೆಐಎಡಿಬಿಯ ಸಿಎ ನಿವೇಶನ ಹಂಚಿಕೆಯಲ್ಲಿ ಹಗರಣ ನಡೆದಿದೆ ಎಂದು ಜೂನ್ ತಿಂಗಳಲ್ಲಿ ಸಿಎಂಗೆ ದೂರು ನೀಡಲಾಗಿದೆ. ಈ ಹಗರಣದಲ್ಲಿ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ನೇರವಾಗಿ ಭಾಗಿಯಾಗಿದ್ದಾರೆ ಎಂದು ಕಲ್ಲಹಳ್ಳಿ ಆರೋಪಿಸಿದ್ದಾರೆ.
ಸಚಿವರು, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಕೆಐಎಡಿಬಿ ಸಿಇಒ ನೇರವಾಗಿ ಈ ಅಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದು ಆರೋಪಿಸಿರುವ ಅವರು, ಕೆಐಎಡಿಬಿನಲ್ಲಿ 300 ರಿಂದ 400 ಕೋಟಿ ರೂ. ಭ್ರಷ್ಟಾಚಾರ ನಡೆದಿದೆ. ಸಿಎ ನಿವೇಶನವನ್ನು ಹರಾಜು ಅಥಾವ ಮೂರು ಪಟ್ಟು ಹೆಚ್ಚಿನ ದರದಲ್ಲಿ ಹಂಚಿಕೆ ಮಾಡಬೇಕಿತ್ತು. ಆಗ ಕೆಐಎಡಿಬಿಗೆ 300 ರಿಂದ 400 ಕೋಟಿ ರೂ. ಲಾಭ ಸಿಗುತ್ತಿತ್ತು ಎಂದಿದ್ದಾರೆ.
ಇಂಥ ಸಿಎ ನಿವೇಶನಗಳನ್ನು ಕೈಗಾರಿಕೆಗಳಿಗೆ ಹಂಚಿಕೆ ಮಾಡುವ ವೇಳೆ ಅವರಿಗೆ ಬೇಕಾದಂತಹ ಕೈಗಾರಿಕೋದ್ಯಮಿಗಳಿಗೆ ಬೇಕಾಬಿಟ್ಟಿ ಸಿಎ ನಿವೇಶನ ಹಂಚಿಕೆ ಮಾಡಲಾಗಿದೆ. ಇದೊಂದು ಬೃಹತ್ ಭ್ರಷ್ಟಾಚಾರವಾಗಿದೆ. ಈ ಸಂದರ್ಭದಲ್ಲಿ ಇಡೀ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸಿವಿಐ ಅಥಾವ ಸ್ವತಂತ್ರ ತನಿಖೆ ಸಂಸ್ಥೆಗೆವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣ ಗಂಭೀರವಾದದ್ದು, ಸಿಬಿಐ ತನಿಖೆಗೆ ವಹಿಸಿ: ಸಂಸದ ಯದುವೀರ್ ಒಡೆಯರ್ - MP Yaduveer Wadiyar