ಬೆಂಗಳೂರು : ಡಿಫೆನ್ಸ್ ಏರೋಸ್ಪೇಸ್ ಸೆಕ್ಟರ್‌ನಲ್ಲಿ ಖರ್ಗೆ ಕುಟುಂಬದ ಟ್ರಸ್ಟ್ಗೆ 5 ಎಕರೆ ಜಮೀನನ್ನು ಎಸ್ ಆರ್ ವ್ಯಾಲ್ಯೂಗಿಂತ ಕಡಿಮೆ ದರಕ್ಕೆ ನೀಡಿದ್ದು, ಇಡೀ ಸೆಕ್ಟರ್‌ನಲ್ಲಿ ಬಹುದೊಡ್ಡ ಹಗರಣ ನಡೆದಿದೆ. ಇದು ಎರಡನೇ ಮುಡಾ ಹಗರಣ ಆಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ನಿನ್ನೆ ಒಂದು ವಿಚಾರ ಪ್ರಸ್ತಾಪ ಮಾಡಿದ್ದೆ. ಕೆಐಎಡಿಬಿನಲ್ಲಿ ಕೆಲವರು ಸೈಟ್ ಪಡೆದಿದ್ದಾರೆ ಅನ್ನೋದನ್ನು ಹೇಳಿದ್ದೆ. ವಿಶೇಷವಾಗಿ ಖರ್ಗೆ ಅವರ ಕುಟುಂಬ ಪಡೆದಿರೋ ಬಗ್ಗೆ ಮಾತನಾಡಿದ್ದೆ. ಕಾನೂನುಬಾಹಿರವಾಗಿ ಜಾಗ ಪಡೆಯಲಾಗಿದೆ ಎಂದು ದೂರಿದರು.
ಟ್ರಸ್ಟ್ ಅಂದ್ರೆ ಅದಕ್ಕೆ ಇನ್ಫ್ಲೂಯೆನ್ಸ್ ಇರಬಾರದು. ಸರ್ಕಾರಿ ಹುದ್ದೆಯಲ್ಲಿ ಇರಬಾರದು ಅನ್ನೋದು. ಪ್ರಿಯಾಂಕ್ ಖರ್ಗೆ ಅವರು ಕ್ಯಾಬಿನೆಟ್‌ನಲ್ಲಿ ಸಚಿವರಿದ್ದಾರೆ. ಹಲವು ಲೋಪದೋಷಗಳಿವೆ. ಸಿಎ ಸೈಟ್‌ಗಳನ್ನ ಆಕ್ಷನ್ ಹಾಕೋ ಪದ್ಧತಿ ಇದೆ. ಸಿಎ ಸೈಟನ್ನ ಯಾವುದಕ್ಕೆ ಅಂತ ಉಲ್ಲೇಖ ಮಾಡಿರ್ತಾರೆ. ಯಾರಿಗೆ ಯಾವುದು ಬೇಕೋ ಅದಕ್ಕೆ ಅರ್ಜಿ ಹಾಕ್ತಾರೆ. ಇಲ್ಲಿ ಯಾವುದಕ್ಕೆ ಅಂತ ಉಲ್ಲೇಖವನ್ನೇ ಮಾಡಿಲ್ಲ. ಯಾವ ಉದ್ದೇಶಕ್ಕೆ ಬೇಕು ಅಂತ ಲೆಟರ್ ಕೊಡಿ ಅಂತ ಹೇಳಿ ಜಾಗ ಕೊಡಲಾಗಿದೆ ಎಂದು ಆರೋಪಿಸಿದರು.
ಜಾಗ ನೀಡಿಕೆ ಕುರಿತು 2024 ರ ಫೆಬ್ರವರಿ 5ರಂದು ತೀರ್ಮಾನ ಮಾಡ್ತಾರೆ. 8 ನೇ ತಾರೀಖು ಮೆನ್ಷನ್ ಮಾಡ್ತಾರೆ. 25 ಕೊನೆಯ ದಿನ ಅರ್ಜಿ ಸಲ್ಲಿಸಿ ಅಂತಾರೆ. 14 ದಿನ ಮಾತ್ರ ಅರ್ಜಿ ಸಲ್ಲಿಸುವ ಅವಧಿ ಕೊಟ್ಟಿದ್ದಾರೆ. ಒಂದು ತಿಂಗಳ ಅವಕಾಶ ನೀಡಬೇಕು. ಸಿಂಗಲ್ ವಿಂಡೋ ಏಜೆನ್ಸಿಯಲ್ಲಿ ಪರಿಶೀಲನೆ ಮಾಡ್ತಾರೆ. 4-3-2024 ರಂದು ಮಂತ್ರಿಗಳ ಸಭೆ ಸೇರಿ, 5-3-2024ರಂದು ಅನುಮೋದನೆ ಮಾಡ್ತಾರೆ. ಅನುಮೋದನೆ ನೀಡಿ ಅದಕ್ಕೆ ಸಂಬಂಧಿಸಿದಂತೆ ಲೆಟರ್ ಕೂಡ ಕೊಟ್ಟಿದ್ದಾರೆ ಎಂದರು.
ಗೌರಿಬಿದನೂರಿನಲ್ಲಿ ಯಾರೂ ಕೇಳೋರಿಲ್ಲ. ಅಲ್ಲಿ ಕೇವಲ ಕಾಲು ಎಕರೆ ಮಾತ್ರ ಕೊಟ್ಟಿದ್ದಾರೆ. ಓಬದೇವನಹಳ್ಳಿಯಲ್ಲಿ ಒಂದೂವರೆ ಎಕರೆ ಕೊಟ್ಟಿದ್ದಾರೆ. ಆಗ್ರೋ ಇನ್ಫ್ರಾಸ್ಟ್ರಕ್ಚರ್ ಏರೋ ಸ್ಪೇಸ್‌ನಲ್ಲಿ 5 ಎಕರೆ ನೀಡಿದ್ದಾರೆ. ಬಿಜಾಪುರದ ಕೆಹೆಚ್‌ಬಿ ಕಾಲೋನಿಯಲ್ಲಿ 5.65 ಎಕರೆ ನೀಡಿದ್ದಾರೆ. ಮತ್ತೆ ಅವರಿಗೆ ಮತ್ತೊಂದು ಜಾಗ ನೀಡಿದ್ದಾರೆ ಎಂದು ಆರೋಪಿಸಿದರು.
ನಿನ್ನೆ ರಾಜ್ಯಪಾಲರ ಭೇಟಿ ಮಾಡಿದ್ದೇನೆ. ಇಂಡಸ್ಟ್ರೀಸ್ ಪ್ಲಾಟ್ ತೆಗೆದುಕೊಳ್ಳುವಾಗ ಯಾರು ಬೇಕಾದ್ರೂ ತಗೋಬಹುದು. ಆದ್ರೆ ಖರ್ಗೆ ಅವರ ಕುಟುಂಬ ತೆಗೆದುಕೊಂಡಿದೆ. ಪ್ರಿಯಾಂಕ್ ಖರ್ಗೆ ಅವರು ಸಚಿವರಾದಾಗ ಪ್ರಮಾಣ ವಚನ ತೆಗೆದುಕೊಂಡಿರ್ತಾರೆ. ಅದರ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಅವರು ಸಿದ್ಧಾರ್ಥ ವಿಹಾರ ಟ್ರಸ್ಟ್ ಮೆಂಬರ್ ಆಗಿದ್ರೆ ಅದು ತಪ್ಪಲ್ವಾ? ಹಾಗಾಗಿ ಸಚಿವ ಸ್ಥಾನದಿಂದ ಕೈಬಿಡುವಂತೆ ಸರ್ಕಾರಕ್ಕೆ ಸೂಚಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇನೆ ಎಂದು ಛಲವಾದಿ ಹೇಳಿದರು.
ಮಣಿವಣ್ಣನ್ ಅವರು ಪತ್ರ ಬರೆದು ಹಾಸ್ಟೆಲ್ ನಿರ್ಮಾಣಕ್ಕೆ ಜಾಗ ಕೇಳ್ತಾರೆ. ಡಿಫೆನ್ಸ್ ಏರೋ ಸ್ಪೇಸ್ ಸೆಕ್ಟರ್‌ನಲ್ಲಿ ಐದು ಎಕರೆ ಕೇಳಿದ್ದಾರೆ. ಆದರೆ ದಲಿತ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಕೊಟ್ಟಿಲ್ಲ. ಸರ್ಕಾರಿ ಕೆಲಸಕ್ಕೆ ಕೊಟ್ಟಿಲ್ಲ. ಆದರೆ ಖಾಸಗಿಯವರಿಗೆ ಜಾಗ ನೀಡಿದ್ದೀರಿ. ಏರೋಸ್ಪೇಸ್ ಟೆಕ್ ಪಾರ್ಕ್‌ನಲ್ಲಿ 71 ಜನ ಅರ್ಜಿ ಹಾಕಿದ್ದು, ಅಲಾಟ್ ಆಗಿದೆ. 22-3-2023ರಲ್ಲಿ ಅಲಾಟ್ ಆಗಿದೆ. ಈವರೆಗೆ ಅವರಿಗೆ ಜಾಗ ಕೊಟ್ಟಿಲ್ಲ. ಲಕ್ಷಾಂತರ ಹಣ ಕೊಟ್ಟು ಜಾಗಕ್ಕಾಗಿ ಕಾಯ್ತಿದ್ದಾರೆ ಎಂದರು.
ಪ್ರಿಯಾಂಕ್ ಖರ್ಗೆ ಅವರೇ ನೀವು ಪ್ರಭಾವ ಬಳಸಿ ಜಾಗ ಪಡೆದಿದ್ದೀರಿ. 71 ಜನರಿಗೆ ನೀವು ಯಾಕೆ ನ್ಯಾಯ ಕೊಡಿಸಿಲ್ಲ? ಹಣ ಕಟ್ಟಿ ಬಡ್ಡಿ ಕೊಡ್ತಿದ್ದಾರೆ. ಮತ್ತೆ ಜಾಗ ಪಡೆಯೋಕೆ ಆಗಲ್ಲ. ಅಲಾಟ್ ಆಗಿದ್ರೆ ಅದು ಎರಡು ಗುಂಟೆ, ಐದು ಗುಂಟೆ ಮಾತ್ರ. ಸೋಶಿಯಲ್ ವೆಲ್‌ಫೇರ್‌ನವರು ಹಾಸ್ಟೆಲ್ ಕಟ್ಟೋಕೆ, ರಿಸರ್ಚ್ ಸೆಂಟರ್ ನಿರ್ಮಾಣಕ್ಕೆ ಜಾಗ ಕೊಡಲ್ಲ. ಅಲ್ಲಿ ಓದೋರು ಯಾರು?. ಎಸ್ಸಿ, ಎಸ್ಟಿ, ಒಬಿಸಿ ಮಕ್ಕಳು ಅಂತ ಮಣಿವಣ್ಣನ್ ಹೇಳಿದ್ದಾರೆ. ಆದರೆ, ಇವರು ಖಾಸಗಿಯವರಿಗೆ ಜಾಗ ನೀಡಿದ್ದಾರೆ. ಇಲ್ಲಿ ಸ್ಪಷ್ಟವಾಗಿ ನಿಯಮ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.
ಎರಡನೇ ಮುಡಾ ಹಗರಣ : ಕೆಐಡಿಬಿಯ ಎಲ್ಲಾ ಜಾಗವನ್ನ ಆನ್ಲೈನ್ ಮಾಡಿದ್ದಾರೆ. ಆದರೆ ಈ ಜಾಗವನ್ನ ಮಾತ್ರ ಮ್ಯಾನ್ಯುಯಲ್ ಮಾಡಿದ್ದಾರೆ. ಇದರಿಂದ ಸರ್ಕಾರಕ್ಕೆ 500-600 ಕೋಟಿ ಲಾಸ್ ಆಗಿದೆ. ಎಕರೆಗೆ 2.5 ಕೋಟಿಗೆ ನೀಡಿದ್ದಾರೆ. ಎಸ್.ಆರ್ ವ್ಯಾಲ್ಯೂ 6.5 ಕೋಟಿ ಇದೆ. ಅಲ್ಲಿಗೆ ಎಕರೆಗೆ 4 ಕೋಟಿ ಲಾಸ್ ಆಗಿದೆ. 30 ಲಕ್ಷ ಸ್ಟ್ಯಾಂಪ್ ಡ್ಯೂಟಿ ಲಾಸ್ ಆಗಿದೆ. ಇದರ ಹಿಂದೆ ಏನಿದೆ? ಎಂದು ಅವಲೋಕನ ಮಾಡಿದರೆ ಲೂಟಿ ಹೊಡೆದಿರೋದು ಸ್ಪಷ್ಟವಾಗಿದೆ. ಇದೊಂದು ಬಹು ದೊಡ್ಡ ಹಗರಣ. ಇದು ಎರಡನೇ ಮುಡಾ ಹಗರಣ ಆಗಿದೆ ಎಂದು ಆರೋಪಿಸಿದರು.
ಇಲ್ಲಿ ನಿಯಮ ಉಲ್ಲಂಘನೆ ಸ್ಪಷ್ಟವಾಗಿರುವ ಹಿನ್ನೆಲೆ ತಕ್ಷಣವೇ ನೋಟಿಸ್ ನೀಡಿ ಜಾಗವನ್ನು ವಾಪಸ್ ಪಡೆಯಬೇಕು. ಕೊಟ್ಟಿರುವ ಸೈಟ್ ಮರಳಿ ಆಕ್ಷನ್ ಆಗಬೇಕು. ಇದಕ್ಕೆ ಸರ್ಕಾರ ಹೊಣೆಯಾಗಿದೆ. ಕೂಡಲೇ ತಪ್ಪು ಸರಿಪಡಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ನಡೆಸಬೇಕಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದು, ರಾಜ್ಯಸಭಾ ವಿಪಕ್ಷ ನಾಯಕರಾಗಿದ್ದು, ನಿಮ್ಮ ಪ್ರಭಾವ ಇಲ್ಲವಾ.? 5 ಎಕರೆಗೆ 80-100 ಕೋಟಿ ಆಗಿದೆ. ನೀವು ಸೈಟ್ ಪಡೆಯಿರಿ. ನಾವು ಬೇಡ ಅನ್ನಲ್ಲ. ಆದರೆ ನ್ಯಾಯಯುತವಾಗಿ ಪಡೆಯಿರಿ. ಇದು ಧಾರ್ಮಿಕ ಹಾಗೂ ಶೈಕ್ಷಣಿಕ ವಿಚಾರಕ್ಕೆ ಮಾಡ್ತಿದ್ದೀರಿ. ಇದಕ್ಕೆ ನಮ್ಮ ವಿರೋಧ ಇಲ್ಲ. ಇದರಲ್ಲಿ ಪ್ರಭಾವ ಬಳಸಿ ಜಾಗ ಪಡೆದಿರೋದು ಸ್ಪಷ್ಟವಾಗಿದೆ. ಹಾಗಾಗಿ ಇದರ ವಿರುದ್ಧ ನಾವು ಧ್ವನಿ ಎತ್ತಿದ್ದೇವೆ ಎಂದರು.
ಸಚಿವ ಪ್ರಿಯಾಂಕ್ ಖರ್ಗೆ ನನ್ನ ಬಗ್ಗೆ ಹಗುರವಾಗಿ ಮಾತಾಡಿದ್ದಾರೆ. ಅವರನ್ನ ಬೈಯುವುದಕ್ಕೆ ಬಿಜೆಪಿ ನನ್ನನ್ನು ನೇಮಿಸಿದೆ ಎಂದಿದ್ದಾರೆ. ವಿರೋಧ ಪಕ್ಷದಲ್ಲಿ ಕುಳಿತು ನಾನು ಯಾರ ಬಗ್ಗೆ ಮಾತಾಡಬೇಕು? ನನಗೆ ಜಾಸ್ತಿ ಇಂಗ್ಲಿಷ್ ಬರಲ್ಲ. ಈಗೀಗ ಸ್ವಲ್ಪ ಕಲಿತಿದ್ದೀನಿ. ಕೂಲಿ ಮಾಡುತ್ತಿದ್ದವರ ಮಗ ನಾನು. ಕಾನ್ವೆಂಟ್ಗೆ ಹೋಗಿಲ್ಲ. ನನ್ನ ಯೋಗ್ಯತೆ ಗುರುತಿಸಿ ಪಕ್ಷ ಅವಕಾಶ ನೀಡಿದೆ. ನಿಮ್ಮಂತೆ ಬಂಗಾರದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದವನು ನಾನಲ್ಲ. ನೀವು ಇಂಗ್ಲಿಷ್ ಮೀಡಿಯಂ ಓದಿದ್ದು, ಎಲ್ಲೆಲ್ಲಿ ಫೇಲ್ ಆಗಿದ್ದೀರಿ ಗೊತ್ತು ಎಂದು ಪ್ರಿಯಾಂಕ್ ಖರ್ಗೆಗೆ ಬಿಜೆಪಿ ನಾಯಕ ಟಾಂಗ್ ಕೊಟ್ಟರು.
ನನ್ನನ್ನು ಕೆಣಕಬೇಡಿ ಮಿಸ್ಟರ್ ಪ್ರಿಯಾಂಕ್ ಖರ್ಗೆ, ಕೆಣಕಿದರೆ ಚಲ್ಲಣ ಹರಿಯುತ್ತೇನೆ. ಕೆಣಕಿದರೆ ಕುಣುಕೋ ವ್ಯಕ್ತಿ ನಾನು. ಅಪ್ಪನ ಹೆಸರಿನ ಪ್ರಭಾವ ಬಳಸಿ ಬೆಳೆದಿಲ್ಲ ನಾನು. ತಂದೆಯ ಹೆಸರು ಇಲ್ಲದಿದ್ದರೆ ಪ್ರಿಯಾಂಕ್ ಖರ್ಗೆ ಪಂಚಾಯತ್ ಸದಸ್ಯ ಆಗಲು ಸಾಧ್ಯವಿಲ್ಲ. ವೈಯಕ್ತಿಕವಾಗಿ ಮಾತಾಡಿದ್ರೆ ಸುಮ್ಮನಿರಲ್ಲ. ಅವರ ಸಹೋದ ರಾಹುಲ್ ಖರ್ಗೆ ಅವರು ಪ್ರಿಯಾಂಕ್ ಖರ್ಗೆ ತರ ಅಲ್ಲ. ಫೇಲ್ ಆಗಿಲ್ಲ ಅವರು. ಐಆರ್ಎಸ್ ಮಾಡಿದವರು, ಅವರ ಬಗ್ಗೆ ನಾನು ಮಾತಾಡಲ್ಲ. ಟ್ರಸ್ಟ್ನಲ್ಲಿ ನೀವು ಇದ್ದೀರಿ. ಹಾಗಾಗಿ ನಿಮ್ಮ ಹೆಸರು ಬರುತ್ತದೆ. ಕೋರಮಂಗಲ, ಯಲಹಂಕ, ಕಲಬುರಗಿ ಎಲ್ಲೆಲ್ಲಿ ಆಸ್ತಿ ಇದೆ ಗೊತ್ತು. ನನ್ನ ಮೇಲೆ ಹೀಗೆ ವಾಗ್ದಾಳಿ ನಡೆಸುತ್ತಾ ಹೋಗಿ ಒಂದೊಂದೇ ಎಲ್ಲ ಹೊರಗೆ ಬರುತ್ತವೆ, ದಿಲ್ಲಿವರೆಗೂ ಇದನ್ನ ಒಯ್ಯುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ : ಖರ್ಗೆ ಕುಟುಂಬದ ಟ್ರಸ್ಟ್ಗೆ ಕೆಐಎಡಿಬಿ ಜಮೀನು: ರಾಜ್ಯಪಾಲರಿಗೆ ದೂರು ನೀಡಿದ ಛಲವಾದಿ ನಾರಾಯಣಸ್ವಾಮಿ - Kharge Family Trust