ಹುಬ್ಬಳ್ಳಿ: ಸಂಸದೀಯ ಜಂಟಿ ಸಮಿತಿ ಒಂದು ನಾಟಕ ಕಂಪನಿ. ಜೆಪಿಸಿಗೆ ಒಂದು ನಿಯಮ ಇದೆ. ಸಮಿತಿ ಅಧ್ಯಕ್ಷರು ಭೇಟಿ ನೀಡುವ ಮೊದಲು ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ತಿಳಿಸಬೇಕು. ಅದರಲ್ಲಿರುವ ಸದಸ್ಯರೆಲ್ಲರೂ ಬರಬೇಕು. ಒಬ್ಬರು ಅಧ್ಯಕ್ಷರು ಮಾತ್ರ ಭೇಟಿ ನೀಡಿದ್ದಾರೆ. ಒಬ್ಬ ಸಂಸದನನ್ನು ಕರೆದುಕೊಂಡು ಬಂದಿದ್ದಾರೆ. ಅವರ ಪಕ್ಷದ ಕೆಲಸಕ್ಕೆ ಬಂದಿದ್ದಾರೆ ಎನಿಸುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.
ಹುಬ್ಬಳ್ಳಿಯಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಜೆಪಿಸಿಯಲ್ಲಿ ಬೊಮ್ಮಾಯಿ ಏನಾದರೂ ಸದಸ್ಯರಾಗಿದ್ದಾರಾ? ಸೋಮಣ್ಣ ಮೆಂಬರ್ ಆಗಿದ್ದಾರಾ? ಸೋಮಣ್ಣ ಒಬ್ಬರು ಮಂತ್ರಿ. ಒಬ್ಬ ಮಂತ್ರಿ ಜೆಪಿಸಿಯಲ್ಲಿ ಇರಲು ಆಗಲ್ಲ. ಅವರು ಬಂದು ಜನರ ಹತ್ತಿರ ಅರ್ಜಿ ಸ್ವೀಕರಿಸಿದ್ದಾರೆ. ಜನರೆದುರು ಪ್ರಚಾರ ಮಾಡ್ಬೇಕು ಅಂತ ಬಂದಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.
ಧಾರವಾಡದ ಜಿಲ್ಲಾಧಿಕಾರಿಗಳಿಗೆ ಕೇಳಿ ಬೊಮ್ಮಾಯಿ ಸರ್ಕಾರ ಇದ್ದಾಗಲೇ ನೋಟಿಸ್ ಕೊಟ್ಟು ದಾಖಲೆ ತಿದ್ದಲಾಗಿದೆ. ಮುಖ್ಯಮಂತ್ರಿ ಈಗಾಗಲೇ ಆ ಬಗೆಗಿನ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ. ನಮ್ಮ ಕಂದಾಯ ಸಚಿವರೂ ದಾಖಲೆಗಳನ್ನು ಬಿಡುಗಡೆ ಮಾಡುತ್ತಾರೆ. ಯಾವ ರೈತನ ಜಮೀನನ್ನೂ ಕಬಳಿಸಿಕೊಳ್ಳುವಂಥ ಪ್ರಶ್ನೆ ಬರೋದೇ ಇಲ್ಲ. ರೈತರನ್ನು ಉಳಿಸುತ್ತೇವೆ, ತಾಂತ್ರಿಕವಾಗಿ ಏನೋ ಕೆಲವು ಅಧಿಕಾರಿಗಳು ತಪ್ಪುಗಳನ್ನು ಮಾಡಿರಬಹುದು. ಎಲ್ಲ ರೈತರಿಗೆ ರಕ್ಷಣೆ ಕೊಡುವಂಥ ಕೆಲಸ ನಮ್ಮ ಸರ್ಕಾರ ಮಾಡುತ್ತದೆ" ಎಂದು ಭರವಸೆ ನೀಡಿದರು.
ಅನುದಾನ ಕೇಳಬೇಕಾದರೆ ಡಿಕೆಶಿ ತಗ್ಗಿ ಬಗ್ಗಿ ನಡೆಯಬೇಕು ಎಂಬ ಅಶೋಕ್ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ ಅವರು, "ನಾನು ಹೇಳಿದ್ದು ತೇಜಸ್ವಿ ಸೂರ್ಯಗೆ. ನಾನು ಎಂಎಲ್ಎ ಆದ್ಮೇಲೆ ಬೆಂಗಳೂರು ಅದೋಗತಿ ಆಗಿದೆ ಅಂದ್ರು. ಲೆಕ್ಕ ಕೊಡಿ ಅಂತ ಹೇಳಿದೆ. ಲೋಕಾಯುಕ್ತ ಮ್ಯಾಚ್ ಫಿಕ್ಸಿಂಗ್ ಅಂತ ಅಶೋಕ್ ಹೇಳ್ತಿದ್ದಾರೆ. ನಮ್ಮ ಸಂಸ್ಥೆ ಸಂವಿಧಾನದ ಒಂದು ಭಾಗ. ಇವರು ಸಂವಿಧಾನದಲ್ಲಿ ವಿರೋಧ ಪಕ್ಷದ ನಾಯಕ. ಇವರ ಮಾತುಗಳೆಲ್ಲ ಮ್ಯಾಚ್ ಫಿಕ್ಸಿಂಗಾ?" ಎಂದು ಪ್ರಶ್ನಿಸಿದರು.
ಬಿಜೆಪಿಯಿಂದ ಜೆಪಿಸಿ ದುರ್ಬಳಕೆ: "ಚುನಾವಣೆಗಾಗಿ ಇಡಿ, ಸಿಬಿಐ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಬಿಜೆಪಿ ಇದೀಗ ಜೆಪಿಸಿಯನ್ನು ಸಹ ದುರ್ಬಳಕೆ ಮಾಡಿಕೊಳ್ಳುತ್ತಿದೆ" ಎಂದು ಸಚಿವ ಎಚ್.ಕೆ.ಪಾಟೀಲ್ ಆರೋಪಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, "ಜೆಪಿಸಿ ರಾಜ್ಯಕ್ಕೆ ಬಂದಿರುವುದಕ್ಕೆ ಮಾನ್ಯತೆಯೇ ಇಲ್ಲ. ಅವರು ಅಧಿಕೃತವಾಗಿ ರಾಜ್ಯಕ್ಕೆ ಬಂದಿಲ್ಲ, ಇದು ಅನಧಿಕೃತ ಭೇಟಿ. ಕಮಿಟಿಗೆ ರೈತರು ಮನವಿ ಕೊಟ್ಟರಾ? ರಾಜ್ಯ ಸರ್ಕಾರಕ್ಕೆ ಮಾಹಿತಿಯೇ ನೀಡದೇ ಬಂದಿದ್ದಾರೆ. ಅಂದ ಮೇಲೆ ರಾಜ್ಯ ಸರ್ಕಾರದಿಂದ ಏನು ಮಾಹಿತಿ ಪಡೆದುಕೊಳ್ಳಲು ಸಾಧ್ಯ? ಎಂದು ಪ್ರಶ್ನಿಸಿದರು.
ಜೆಪಿಸಿ ಅಧ್ಯಕ್ಷರು ಏಕಾಂಗಿಯಾಗಿ ಬಂದಿದ್ದಾರೆ. ಈ ಮೂಲಕ ಜೆಪಿಸಿಯನ್ನೂ ಕೂಡ ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಚಾರದ ವೇಳೆ ಕೋಮು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಅವರ ವಿರುದ್ಧ ಚುನಾವಣಾ ಆಯೋಗ ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಬೇಕು" ಎಂದು ಆಗ್ರಹಿಸಿದರು.
"ಈ ಮೂರು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದ್ದಾರೆ" ಎಂದು ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಜಂಟಿ ಸಂಸದೀಯ ಸಮಿತಿ ಅಧ್ಯಕ್ಷರ ರಾಜ್ಯ ಭೇಟಿ ರಾಜಕೀಯ ದುರುದ್ದೇಶಿತ: ಬೆಂಗಳೂರಿನ ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, "ಜಂಟಿ ಸಂಸದೀಯ ಸಮಿತಿ ಅಧ್ಯಕ್ಷರ ರಾಜ್ಯ ಭೇಟಿ ರಾಜಕೀಯ ದುರುದ್ದೇಶದಿಂದ ಕೂಡಿದೆ. ಕಮಿಟಿಯ ಸದಸ್ಯರನ್ನು ಬಿಟ್ಟು ಬರುತ್ತಿದ್ದಾರೆ. ಅವರು ಆ ರೀತಿ ಒಬ್ಬರೇ ಬರುವ ಹಾಗಿಲ್ಲ ಎಂದು ಸಮಿತಿಯ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಗ ರಾಜಕೀಯ ದುರುದ್ದೇಶದಿಂದ ಬರ್ತಿದ್ದಾರೆ ಎಂದಾಗುತ್ತೆ" ಎಂದು ಆರೋಪಿಸಿದ್ದಾರೆ.
ಸಿಎಂ ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದ ಕುರಿತು ಪ್ರತಿಕ್ರಿಯಿಸಿ, "ಲೋಕಾಯುಕ್ತದವರು ಬಿಜೆಪಿಯವರನ್ನು ಕೇಳಿ ಪ್ರಶ್ನೆ, ಸಮಯ ನಿಗದಿ ಮಾಡ್ತಾರಾ? ಅವರ ಮ್ಯಾಂಡೇಟ್ ಪ್ರಕಾರ ಲೋಕಾಯುಕ್ತದವರು ವಿಚಾರಣೆ ಮಾಡಿದ್ದಾರೆ. ಬಿಜೆಪಿಯವರು ರಾಜಕೀಯ ಮಾಡುವುದು ಸಮಂಜಸವಲ್ಲ, ಅರ್ಥವಿಲ್ಲದ್ದು. ಎಷ್ಟು ಸಮಯ ತೆಗೆದುಕೊಳ್ತಾರೋ ಅವರಿಗೆ ಬಿಟ್ಟಿರೋದು. ಪ್ರಶ್ನೆಗಳು ಹತ್ತಾಗಬಹುದು, ಇಪ್ಪತ್ತಾಗಬಹುದು, ನೂರಾಗಬಹುದು, ಅವರಿಗೆ ಬಿಟ್ಟಿದ್ದು" ಎಂದರು.
ಇದನ್ನೂ ಓದಿ: ವಕ್ಫ್ ಆಸ್ತಿ ವಿವಾದ: ಹುಬ್ಬಳ್ಳಿಯಲ್ಲಿ ವಕ್ಫ್ ಬೋರ್ಡ್ ಜೆಪಿಸಿ ಅಧ್ಯಕ್ಷ, ರೈತರಿಗೆ ನ್ಯಾಯ ಕೊಡಿಸುವ ಅಭಯ