ಮಂಡ್ಯ: ನಾಗಮಂಗಲ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಮಂಗಲ ಪಟ್ಟಣಕ್ಕೆ ಸಚಿವ ಎನ್. ಚಲುವರಾಯಸ್ವಾಮಿ ಭೇಟಿ ನೀಡಿ ಅಧಿಕಾರಿಗಳ ಜೊತೆ ಘಟನಾ ಸ್ಥಳ ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಪೊಲೀಸರಿಗೆ ಸೂಕ್ತ ಕ್ರಮಕ್ಕೆ ಸೂಚನೆ ನೀಡಿ, ಅನಾಹುತದಿಂದ ನಷ್ಟಕ್ಕೊಳಗಾದವರಿಗೆ ಪರಿಹಾರದ ಭರವಸೆ ನೀಡಿದರು.
ಇದೇ ವೇಳೆ ಮಾಧ್ಯಮದ ಜೊತೆ ಮಾತನಾಡಿ, "ನಾನು ಹೊರಗಡೆ ಇದ್ದೆ. ನಿನ್ನೆ ಸಂಜೆ 7 ಗಂಟೆಗೆ ಬೆಂಗಳೂರಿಗೆ ಬಂದೆ. ಪೊಲೀಸರು ವಿಚಾರ ತಿಳಿಸಿದರು. ವಿಚಾರ ತಿಳಿದು ಬೇಸರ ಆಗಿದೆ. ಈ ಹಿಂದೆ ಈ ರೀತಿ ಘಟನೆಗಳು ನಾಗಮಂಗಲದಲ್ಲಿ ನಡೆದಿವೆ. ಈ ಹಿಂದೆ ಎರಡು ಕಡೆಯವರ ಜೊತೆ ಮಾತನಾಡಿದ್ದೆವು. ಹೀಗಾಗಿ ಇಲ್ಲಿವರೆಗೆ ನಾಗಮಂಗಲ ಶಾಂತವಾಗಿತ್ತು. ನಿನ್ನೆ ದುರಾದೃಷ್ಟ, ಆಗಬಾರದಿತ್ತು, ಆಗಿದೆ. ತಕ್ಷಣ ಎಲ್ಲ ಅಧಿಕಾರಿಗಳು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಯಾವುದೇ ಪ್ರಾಣಹಾನಿ ಆಗದೇ ಇರೋ ಥರ ನಿಯಂತ್ರಿಸಿದ್ದಾರೆ. ಎರಡೂಕಡೆಯವರ ಅಂಗಡಿಗಳೂ ಡ್ಯಾಮೇಜ್ ಆಗಿವೆ. ಎಷ್ಟು ಹಾನಿಯಾಗಿದೆ ಎಂದು ವರದಿ ಕೊಡಲು ತಿಳಿಸಿದ್ದೇನೆ." ಎಂದು ಹೇಳಿದರು.
ನಾಗಮಂಗಲ ಈಗ ಶಾಂತ: "20 ಅಂಗಡಿಗಳು ಸುಟ್ಟು ಹೋಗಿವೆ. ಸಿಎಂ ಜೊತೆ ರಾತ್ರಿ ಕೂಡ ಮಾತನಾಡಿದ್ದೇನೆ. ಐಜಿ, ಎಡಿಜಿಪಿ ಸ್ಥಳದಲ್ಲೇ ಇದ್ದಾರೆ. ಈಗ ನಾಗಮಂಗಲ ಶಾಂತವಾಗಿದೆ. ಮತ್ತೆ ಇಂತಹ ವಿಚಾರ ಮರುಕಳಿಸದ ಹಾಗೇ ಪೊಲೀಸರ ನಿಯೋಜನೆ ಮಾಡಲಾಗಿದೆ. ನಾಗರೀಕರು ಆತಂಕ ಪಡಬೇಕಿಲ್ಲ. ಸಿಎಂ ಜೊತೆ ಸರ್ಕಾರದಿಂದ ಪರಿಹಾರ ಕೊಡಿಸಲು ಮಾತನಾಡುತ್ತೇನೆ. ವೈಯಕ್ತಿಕವಾಗಿ ಕೂಡ ಪರಿಹಾರವನ್ನು ನೀಡಲಿದ್ದೇನೆ. ಸರ್ಕಾರದ ಪರಿಹಾರ ನೋಡಿಕೊಂಡು ವೈಯಕ್ತಿಕ ಪರಿಹಾರ ನೀಡುತ್ತೇನೆ. ಇಂತಹ ಘಟನೆ ತುಂಬಾ ಬೇಸರ ತರಿಸಿದೆ. ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕಿದೆ. ಇಂತಹದ್ದನ್ನು ಸ್ವಲ್ಪ ಪ್ರಸಾರ ಮಾಡುವುದನ್ನು ಕಡಿಮೆ ಮಾಡಬೇಕು ಎಂದು ಮಾಧ್ಯಮಗಳಿಗೆ ವಿನಂತಿ ಮಾಡುತ್ತೇನೆ" ಎಂದರು.
’ದೇವರು ಅವರಿಗೆ ಒಳ್ಳೆಯದು ಮಾಡಲಿ’: ಯಾವುದೇ ಒಂದು ಕೋಮಿಗೆ ಪ್ರಾಮುಖ್ಯತೆ ಕೊಡುವ ಪ್ರಶ್ನೆ ಇಲ್ಲ. ಕುಮಾರಸ್ವಾಮಿ ಮಾಜಿ ಸಿಎಂ ಹಾಗೂ ಕೇಂದ್ರ ಮಂತ್ರಿಯಾಗಿದ್ದಾರೆ. ನನಗೆ ಎಷ್ಟು ಜವಾಬ್ದಾರಿ ಇದೆಯೋ ಅಷ್ಟೇ ಜವಾಬ್ದಾರಿ ಅವರಿಗೂ ಇದೆ ಎಂದು ನಾನು ಭಾವಿಸುತ್ತೇನೆ. ಇಂತಹದ್ದನ್ನು ಶಾಂತವಾಗಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಇದರ ಬಗ್ಗೆ ರಾಜಕೀಯವಾಗಿ ಹೇಳಿಕೆ ಕೊಡುತ್ತಾರೆಂದರೆ ದೇವರು ಅವರಿಗೆ ಒಳ್ಳೆಯದು ಮಾಡಲಿ."
"ಸಿಎಂ ರಾತ್ರಿಯೇ ಮಾತುಕತೆ ವೇಳೆ ಎಲ್ಲಾ ವರದಿ ತೆಗೆದುಕೊಂಡು ಬಂದು ಇಂದು ಭೇಟಿ ಮಾಡಲು ತಿಳಿಸಿದ್ದಾರೆ. ಇಡೀ ರಾಜ್ಯದಲ್ಲಿ ಇಂತಹ ಘಟನೆ ಜರುಗದಂತೆ ಕಟ್ಟುನಿಟ್ಟು ಮಾಡಬೇಕಿದೆ. ಇದು ಎರಡು ಸಮುದಾಯಗಳ ನಡುವಣ ಗಲಾಟೆ ಅಲ್ಲ, ಯಾರೋ ಇಂತಹ ಕೃತ್ಯ ನಡೆಸುತ್ತಾರೆ. ಇಂತಹ ಘಟನೆಗೆ ಫುಲ್ಸ್ಟಾಪ್ ಇಟ್ಟು, ಮತ್ತೆ ಇಂತಹದು ನಡೆಯದಂತೆ ನಾನು ನೋಡಿಕೊಳ್ಳುತ್ತೇನೆ" ಎಂದರು.
ವಿರೋಧ ಪಕ್ಷದವರು ರಾಜಕೀಯ ಮಾಡಬಾರದು: "ವಿರೋಧ ಪಕ್ಷದವರು ಈ ಘಟನೆಯನ್ನು ರಾಜಕೀಯ ಮಾಡದೇ ಇದ್ದರೆ ಒಳ್ಳೆಯದು. ಈ ಘಟನೆ ಪ್ರೀಪ್ಲ್ಯಾನ್ ಆಗಿತ್ತಾ ಎನ್ನುವ ಬಗ್ಗೆ ತನಿಖೆ ಮಾಡಿಸುತ್ತೇವೆ. ಆ ರೀತಿ ಪ್ರೀ ಪ್ಲ್ಯಾನ್ ಆಗಿದ್ದರೆ, ಅಂತಹವರ ವಿರುದದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು." ಎಂದು ಹೇಳಿದರು.
"ಘಟನೆ ಆಕಸ್ಮಿಕವಾಗಿಯೇ ಪ್ರಾರಂಭವಾಗಿರೋದು. ಈ ಮಟ್ಟಿಗೆ ಡ್ಯಾಮೆಜ್ ಆಗುತ್ತದೆ ಅಂತ ಯಾರಿಗೂ ತಿಳಿದಿರಲಿಲ್ಲ. ರಾಜ್ಯದಲ್ಲಿ ಪೊಲೀಸ್ ವೈಫಲ್ಯ ಇದ್ದರೆ ಕ್ರಮ ಕೈಗೊಳ್ಳುತ್ತೇವೆ. ಪೊಲೀಸ್ ವೈಫಲ್ಯದ ಬಗ್ಗೆ ವರದಿ ಕೇಳಿದ್ದೇವೆ. ಹಿಂದೆ ಯಾವುದೇ ಗಲಾಟೆ ಇಲ್ಲದಂತೆ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಿಲ್ವಾ? ಯಾವ ಸರ್ಕಾರ ಇದ್ದಾಗ ಗಲಭೆಗಳು ಆಗಿವೆ ಎಂಬುದನ್ನು ದಾಖಲೆಗಳನ್ನು ತೆಗೆದು ನೋಡಿ. ನಾವು ಎಲ್ಲ ಜನರ ಪರವಾಗಿ ಸರ್ಕಾರ ನಡೆಸಿದ್ದೇವೆ. ಇಂತಹ ಘಟನೆಗಳಲ್ಲಿ ರಾಜಕಾರಣ ಬೇಡ."
"ಯಾರು ಕೂಡ ಇಂತಹ ವಿಚಾರದಲ್ಲಿ ಪ್ರಚೋದನೆಗೆ ಒಳಗಾಗಬಾರದು. ಹಿಂದೂ, ಮುಸ್ಲಿಂ ಇಬ್ಬರೂ ಬಾಂಧವ್ಯದಿಂದ ಇರಬೇಕು. ಪೊಲೀಸರು ಮುಂಜಾಗ್ರತೆಯಿಂದಾಗಿ ದೊಡ್ಡಮಟ್ಟದ ಅನಾಹುತ ಆಗಿಲ್ಲ. ತನಿಖೆ ನಡೆಸಿ ತಪ್ಪು ಮಾಡದವರನ್ನು ಬಿಡುಗಡೆ ಮಾಡುತ್ತಾರೆ. ವಿರೋಧ ಪಕ್ಷದ ನಾಯಕರು ನಾಗಮಂಗಲಕ್ಕೆ ಬರುತ್ತಿದ್ದಾರೆ. ರಾಜಕಾರಣ ಮಾಡದೇ ಅಧಿಕಾರಿಗಳಿಗೆ ಸಲಹೆ ನೀಡಲಿ. ನಾನಂತೂ ಇದರಲ್ಲಿ ರಾಜಕೀಯ ಹೇಳಿಕೆ ನೀಡಲ್ಲ" ಎಂದರು.
ಇದನ್ನೂ ಓದಿ: ನಾಗಮಂಗಲ ಗಣೇಶ ಮೆರವಣಿಗೆ ವೇಳೆ ಗಲಾಟೆ: 52 ಜನರ ಬಂಧನ, ಪರಿಸ್ಥಿತಿ ಹತೋಟಿಗೆ- ಸಚಿವ ಪರಮೇಶ್ವರ್ - Nagamangala Clash