ಬೆಂಗಳೂರು: "ಮೈಕ್ರೋಫೈನಾನ್ಸ್ ಸಂಸ್ಥೆಗಳು ದೌರ್ಜನ್ಯ, ತೊಂದರೆ ನೀಡುತ್ತಿರುವ ಕುರಿತು ಪೊಲೀಸರಿಗೆ ದೂರು ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಿದ್ದಾರೆ" ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದೂರು ಬಂದ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಸುಮೋಟೊ ದಾಖಲಿಸುವಂತೆಯೂ ತಿಳಿಸಲಾಗಿದೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದನ್ನು ತಡೆಯಲು ಕಾನೂನು ರೂಪಿಸಲಾಗುತ್ತಿದೆ. ಕಾನೂನು ಸಚಿವರು ಹಾಗೂ ಕಂದಾಯ ಸಚಿವರೊಂದಿಗೆ ಸಭೆ ಕರೆಯಲಾಗಿದೆ. ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂಬ ನಿಟ್ಟಿನಲ್ಲಿ ಕಾನೂನು ರೂಪಿಸಲಾಗುತ್ತಿದೆ. ಸಹಾಯವಾಣಿ ಆರಂಭಿಸಲಾಗುವುದು. ಸಭೆಯಲ್ಲಿ ಅಂತಿಮವಾದರೆ ನಾಳೆ ಕ್ಯಾಬಿನೆಟ್ ಮುಂದೆ ತರುತ್ತೇವೆ" ಎಂದು ತಿಳಿಸಿದರು.
2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತುಮಕೂರು ಭಾಗದಲ್ಲಿ ಮಾಡಿದರೆ ಅನುಕೂಲ: "ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತುಮಕೂರಿಗೆ ನೀಡುವಂತೆ ಕೇಳುತ್ತಿದ್ದೇವೆ. ತುಮಕೂರಿನ ಭಾಗದಲ್ಲಿ ನಿರ್ಮಾಣವಾದರೆ ಉತ್ತರ ಕರ್ನಾಟಕ ಭಾಗದ 21 ಜಿಲ್ಲೆಗಳಿಗೂ ಅನುಕೂಲವಾಗಲಿದೆ. ಈಗಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಂಪರ್ಕವಾಗುತ್ತದೆ" ಎಂದರು.
"ತುಮಕೂರುವರೆಗೆ ಮೆಟ್ರೋ ಯೋಜನೆ ಡಿಪಿಆರ್ ಇನ್ನೂ ಅಂತಿಮವಾಗಿಲ್ಲ. ಹೈದರಾಬಾದ್ ಕಂಪನಿಗೆ ನೀಡಲಾಗಿದ್ದು ಡಿಪಿಆರ್ ವರದಿ ನೀಡಿಲ್ಲ. ವರದಿ ನೀಡಿದ ನಂತರ ತೀರ್ಮಾನ ತೆಗೆದುಕೊಳ್ಳುತ್ತೇವೆ. ತದ ನಂತರ ಕೇಂದ್ರ ಸರ್ಕಾರದ ಅನುಮತಿ ಕೇಳುತ್ತೇವೆ" ಎಂದು ಹೇಳಿದರು.
ಸಿಎಂ ನೇಮಕ ಮಾಡುವುದು ಹೈಕಮಾಂಡ್. ಶಾಸಕರ ಅಭಿಪ್ರಾಯ ಕೇಳಬೇಕಿಲ್ಲ ಎಂದು ರಾಮನಗರ ಶಾಸಕರು ಹೇಳಿಕೆ ನೀಡಿದ್ದಾರೆ. ಹೈಕಮಾಂಡ್ ಸೂಚನೆ ಶಾಸಕರಿಗೆ ಅನ್ವಯವಾಗುವುದಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಹೈಕಮಾಂಡ್ ಸೂಚನೆ ಶಾಸಕರಿಗೂ ಮತ್ತು ಮಂತ್ರಿಗಳಿಗೂ ಎಲ್ಲರಿಗೂ ಅನ್ವಯವಾಗುತ್ತದೆ. ಪಕ್ಷದಲ್ಲಿ ಯಾರು ಆ ರೀತಿ ಹೇಳಿಕೆ ಕೊಡಬಾರದು ಎಂದು ಹೈಕಮಾಂಡ್ ಸೂಚಿಸಿದ ಮೇಲೆ ಎಲ್ಲರಿಗೂ ಅನ್ವಯವಾಗುತ್ತದೆ. ಅವರಿಗೂ ಹೈಕಮಾಂಡ್ ಮತ್ತೆ ಹೇಳುತ್ತಾರೆ. ಹೈಕಮಾಂಡ್ ಮೊದಲು ಶಾಸಕರ ಅಭಿಪ್ರಾಯ ಪಡೆಯುತ್ತಾರೆ. ಆನಂತರ ಅವರು ತೀರ್ಮಾನ ಮಾಡುತ್ತಾರೆ. ಬೆಂಬಲ ಸೇರಿದಂತೆ ಬೇರೆಬೇರೆ ವಿಚಾರಗಳನ್ನು ಆಧರಿಸಿ ಪ್ರಕಟಿಸುತ್ತಾರೆ" ಎಂದರು.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳದ ಪ್ರಕರಣಗಳು ವರದಿಯಾದರೆ ಅಗತ್ಯ ಕ್ರಮ: ಪೊಲೀಸ್ ಕಮಿಷನರ್ ದಯಾನಂದ್