ಬೆಂಗಳೂರು: ಬಿಜೆಪಿಯ ಕೆಲ ಮುಖಂಡರು ಬೆಳಗಾವಿಯಲ್ಲಿ ಗೌಪ್ಯ ಸಭೆ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಅವರು, ''ಕೆಲವರು ಪ್ರತ್ಯೇಕ ಪಾದಯಾತ್ರೆ ನಡೆಸುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಅದರಿಂದ ಪಕ್ಷಕ್ಕೆ ಶಕ್ತಿ ಸಿಗುತ್ತದೆ ಅಂದರೆ, ವರಿಷ್ಠರು ಅದಕ್ಕೆ ಅನುಮತಿ ಕೊಡುತ್ತಾರೆ. ಇದಕ್ಕೆ ನನ್ನ ತಕರಾರು ಇಲ್ಲ'' ಎಂದು ಹೇಳಿದ್ದಾರೆ.
ಶಿವಾಜಿ ನಗರದ ವಸಂತ ನಗರ ವಾರ್ಡಿನ ಬೂತ್ ನಂ. 44ರಲ್ಲಿ ಇಂದು ಹರ್ ಘರ್ ತಿರಂಗ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ''ಕೇಂದ್ರದ ವರಿಷ್ಠರ ಭೇಟಿ ಮಾಡ್ತೇವೆ ಅಂದಿದ್ದಾರೆ, ಭೇಟಿ ಮಾಡಲು ಅವರು ಸ್ವತಂತ್ರರಿದ್ದಾರೆ. ಕೇಂದ್ರದ ನಾಯಕರು ಅನುಮತಿ ಕೊಟ್ಟರೆ ಮಾಡಲಿ ಏನೇ ಮಾಡಿದರೂ ಅದು ಪಕ್ಷಕ್ಕೆ ಪೂರಕವಾಗಿರಬೇಕು, ಸದುದ್ದೇಶದಿಂದ ಇರಬೇಕು'' ಎಂದರು. ''ರಾಜ್ಯಾಧ್ಯಕ್ಷನಾಗಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವುದು ನನ್ನ ಕರ್ತವ್ಯ. ಆ ಕೆಲಸವನ್ನು ಸತತವಾಗಿ ಮಾಡುತ್ತಾ ಬಂದಿದ್ದೇನೆ'' ಎಂದು ಹೇಳಿದರು.
ಸಿ.ಪಿ. ಯೋಗೀಶ್ವರ್ ದೆಹಲಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ''ಸಿ.ಪಿ ಯೋಗೀಶ್ವರ್ ತಾವು ಚನ್ನಪಟ್ಟಣ ಆಕಾಂಕ್ಷಿ ಅಂತ ಹೇಳಿಕೊಂಡಿದ್ದಾರೆ. ಇದು ತಪ್ಪು ಅಂತ ನಾವು ಹೇಳಲ್ಲ. ಅವರು ಕೂಡಾ ಕ್ಷೇತ್ರದಲ್ಲಿ ಅವರದ್ದೇ ಆದ ಹಿಡಿತ ಹೊಂದಿದ್ದಾರೆ. ಅವರದ್ದೇ ಆದ ಬೆಂಬಲಿಗರಿದ್ದಾರೆ. ಕ್ಷೇತ್ರದಲ್ಲಿ ಅವರದ್ದೇ ಆದ ಶಕ್ತಿ ಇದೆ. ಆದರೆ, ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳೂ ಒಟ್ಟಿಗೆ ಹೋಗಬೇಕು. ಈ ಸಂದರ್ಭದಲ್ಲಿ ಚನ್ನಪಟ್ಟಣ ಅಭ್ಯರ್ಥಿ ಯಾರಾಗಬೇಕು ಅಂತ ಎರಡೂ ಪಕ್ಷಗಳ ನಾಯಕರು ಒಟ್ಟಿಗೆ ಕೂತು ಚರ್ಚೆ ಮಾಡ್ತಾರೆ. ಇಷ್ಟು ಮಾತ್ರ ಸತ್ಯ, ಅದು ಹೆಚ್.ಡಿ. ಕುಮಾರಸ್ವಾಮಿ ಗೆದ್ದಂತಹ ಕ್ಷೇತ್ರ. ದೆಹಲಿಯಲ್ಲಿ ಎರಡೂ ಪಕ್ಷದ ವರಿಷ್ಠರು ಚರ್ಚಿಸಿ ತೀರ್ಮಾನ ಮಾಡ್ತಾರೆ. ಅಲ್ಲಿವರೆಗೂ ಎಲ್ಲರೂ ಸಮಾಧಾನದಿಂದ ಇರಬೇಕು'' ಎಂದು ನುಡಿದರು.
''ಯಾರಿಗೆ ಟಿಕೆಟ್ ಅಂತ ಕೇಂದ್ರದ ವರಿಷ್ಠರು ತೀರ್ಮಾನ ಮಾಡ್ತಾರೆ. ಮಾಜಿ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ನೇತೃತ್ವದ ಸಮಿತಿ ಅಭಿಪ್ರಾಯ ಪಡೆದುಕೊಂಡಿದ್ದಾರೆ. ವರದಿಯಲ್ಲಿ ಅವರು ಏನು ಕೊಟ್ಟಿದ್ದಾರೋ ಗೊತ್ತಿಲ್ಲ, ಮಾಹಿತಿ ಪಡೆದುಕೊಳ್ತೇನೆ'' ಎಂದರು.
ವಿಜಯೇಂದ್ರ ಮತ್ತೆ ಚುನಾವಣೆಯಲ್ಲಿ ನಿಂತು ಗೆದ್ದು ಬರಲಿ ಎಂಬ ಬಿಜೆಪಿ ಶಾಸಕ ಬಿ ಪಿ ಹರೀಶ್ ಹೇಳಿಕೆ ವಿಚಾರಕ್ಕೆ ಟಾಂಗ್ ಕೊಟ್ಠ ವೀಜಯೇಂದ್ರ, ''ಶಾಸಕ ಬಿ.ಪಿ. ಹರೀಶ್ ಕುಂತಲ್ಲಿ, ನಿಂತಲ್ಲಿ ಮಾತನಾಡುತ್ತಿದ್ದಾರೆ. ಅವರು ಮಾತಾಡಿದ್ದಾರೆ ಅಂತ ನಾನು ಹಾದಿ ಬೀದಿಯಲ್ಲಿ ಮಾತನಾಡುವುದಕ್ಕೆ ಆಗುವುದಿಲ್ಲ. ಶಿಕಾರಿಪುರದ ಜನ ನನ್ನ ಗೆಲ್ಲಿಸಿ ಆಶೀರ್ವಾದ ಮಾಡಿದ್ದಾರೆ'' ಎಂದು ತಿರುಗೇಟು ನೀಡಿದರು.
ಟಿಬಿ ಡ್ಯಾಂ ಕ್ರಸ್ಟ್ ಗೇಟ್ ಮುರಿದ ಪ್ರಕರಣ ಸಂಬಂಧ ಕೇಳಿದ ಪ್ರಶ್ನೆಗೆ, ''ರಾಜ್ಯ ಸರ್ಕಾರ ಕಳೆದ ಒಂದೂವರೆ ವರ್ಷದಿಂದ ಡ್ಯಾಂಗೆ ಚೀಫ್ ಇಂಜಿನಿಯರ್ ನೇಮಿಸಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಯಾವ ರೀತಿ ಆಡಳಿತ ನಡೆಸ್ತಿದೆ? ಜಲಸಂಪನ್ಮೂಲ ಸಚಿವರಿಗೆ ಸಂಪನ್ಮೂಲದ ಬಗ್ಗೆಯೇ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ. ಅವರು ಜಲದ ಬಗ್ಗೆಯೂ ತಲೆಕೆಡಿಸಿಕೊಂಡಿಲ್ಲ, ರೈತರ ಬಗ್ಗೆಯೂ ತಲೆ ಕೆಡಿಸಿಕೊಂಡಿಲ್ಲ. ಮತ್ತೊಂದು ಕಡೆ ಪಿಎಸ್ಐ ಪರಶುರಾಮ್ ಕುಟುಂಬಕ್ಕೆ ಪರಿಹಾರ ಕೊಟ್ಟಿಲ್ಲ. ರಾಜ್ಯ ಸರ್ಕಾರದ ಆದ್ಯತೆ ಏನು ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ'' ಎಂದು ಟೀಕಿಸಿದರು.
ರಾಜ್ಯ ಸರ್ಕಾರದ ವಿರುದ್ಧ ಗರಂ: ಸರ್ಕಾರದಿಂದ ಜನೌಷಧ ಕೇಂದ್ರಗಳಿಗೆ ಬ್ರೇಕ್ ಹಾಕುವ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ, ''ರಾಜ್ಯ ಸರ್ಕಾರ ಪ್ರತಿಯೊಂದು ವಿಚಾರದಲ್ಲೂ ಸಂಘರ್ಷದ ಹಾದಿ ತುಳಿಯುತ್ತಿದೆ. ಇದು ದುರಂತ. ಬಡವರಿಗೆ ಕಡಿಮೆ ದರದಲ್ಲಿ ಕೇಂದ್ರದಿಂದ ಔಷಧಗಳು ಸಿಗುತ್ತಿವೆ. ಇದು ಪ್ರಧಾನಮಂತ್ರಿಗಳ ಕನಸಿನ ಯೋಜನೆ. ಇವುಗಳ ಸ್ಥಗಿತದ ಬಗ್ಗೆ ಹೇಳಿಕೆ ಕೊಡ್ತಿರೋದು ಖಂಡಿತ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ''ಬಡವರಿಗೆ ಕೈಗೆಟುಕುವ ದರದಲ್ಲಿ ಔಷಧ ಸಿಗುತ್ತಿದೆ. ಇದರ ಜತೆಗೆ ರಾಜ್ಯ ಸರ್ಕಾರವೂ ಔಷಧಿಗಳನ್ನು ಕೊಡಲಿ. ಆದರೆ, ಜನೌಷಧ ಕೇಂದ್ರಗಳನ್ನು ನಿಲ್ಲಿಸೋದು ಬೇಡ'' ಎಂದು ಹೇಳಿದರು.
‘ಹರ್ ಘರ್ ತಿರಂಗ’ ಕಾರ್ಯಕ್ರಮಕ್ಕೆ ಚಾಲನೆ: ಸ್ವಾತಂತ್ರ್ಯ ಹೋರಾಟದ ಕುರಿತು ಜನಜಾಗೃತಿಗಾಗಿ ಪ್ರತಿಯೊಂದು ಮನೆಯ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸುವ ‘ಹರ್ ಘರ್ ತಿರಂಗ’ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಗಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ನಮ್ಮ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸ್ವಾತಂತ್ರ್ಯ ದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಯುವ ಪೀಳಿಗೆಗೆ ಸ್ವಾತಂತ್ರ್ಯ ಸಂಗ್ರಾಮದ ದಿನಗಳನ್ನು ನೆನಪಿಸಿ ಕೊಡಬೇಕು. ತ್ಯಾಗ, ಬಲಿದಾನದ ಚರ್ಚೆ ಆಗಬೇಕು ಎಂದು ತಿಳಿಸಿದ್ದಾರೆ. ಅದಕ್ಕಾಗಿ ಯುವಜನತೆಯಲ್ಲೂ ದೇಶಭಕ್ತಿ ಜಾಗೃತಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ವಿವರಿಸಿದರು.
ಸಂಸದ ಪಿ.ಸಿ.ಮೋಹನ್, ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೂತ್ ಸಂಖ್ಯೆ 44ರ ಅಧ್ಯಕ್ಷ ಸಾಗರ್, ಪಕ್ಷದ ಕಾರ್ಯಕರ್ತರ ನೇತೃತ್ವದಲ್ಲಿ ತ್ರಿವರ್ಣ ಧ್ವಜ ಹಾರಿಸಲಾಗಿದೆ. ಅದೇರೀತಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ತಿರಂಗಯಾತ್ರೆ ಆಯೋಜಿಸಲಾಗಿದೆ ಎಂದು ತಿಳಿಸಿದರು. ಯುವಕರಿಂದ ಬೈಕ್ ರ‍್ಯಾಲಿ ಮೂಲಕ ತಿರಂಗ ಯಾತ್ರೆ ನಡೆಸಲಾಗುತ್ತಿದ್ದು, ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.
ಇದೇ 11ರಿಂದ 15ರವರೆಗೆ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕಗಳು, ಪುತ್ಥಳಿಗಳ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ನಾಳೆ (ಆ.14) ದೇಶದ ವಿಭಜನೆಯ ಕರಾಳ ದಿನದ ನೆನಪನ್ನು ವಿಭಜನೆಯ ಸ್ಮೃತಿ ದಿನವಾಗಿ ನೆನಪಿಸುವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ತುಂಗಭದ್ರಾ ವಿಚಾರದಲ್ಲಿ ನಾನು ರಾಜಕೀಯ ಮಾಡಲು ಬಯಸುವುದಿಲ್ಲ: ಸಿಎಂ ಸಿದ್ದರಾಮಯ್ಯ - CM Siddaramaiah