ಬೆಂಗಳೂರು: 50 ವರ್ಷಕ್ಕಿಂತ ಮೇಲ್ಪಟ್ಟ ಶಿಕ್ಷಕರ ವರ್ಗಾವಣೆಗೆ ವಿನಾಯ್ತಿ ಇದ್ದರೂ ಸರ್ಕಾರ 55 ವರ್ಷ ಹಾಗೂ 58 ವರ್ಷದ ಇಬ್ಬರು ಮಹಿಳಾ ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರು ಎಂದು ವರ್ಗಾವಣೆ ಮಾಡಿ ಆದೇಶಿಸಿದ್ದನ್ನು ರದ್ದುಗೊಳಿಸಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ(ಕೆಎಟಿ) ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಕೆಎಟಿ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಅಲ್ಲದೇ, ನಿಯಮಗಳಲ್ಲಿ ವರ್ಗಾವಣೆ ಮಾಡುವುದಕ್ಕೆ ವಿನಾಯ್ತಿ ಇದ್ದಾಗ ಅವರು ಅರ್ಜಿ ಸಲ್ಲಿಸಲಿ ಅಥವಾ ಬಿಡಲಿ, ಆ ನಿಯಮವನ್ನು ಅಧಿಕಾರಿಗಳು ಜಾರಿಗೊಳಿಸಬೇಕು ಎಂದು ಪೀಠ ತಿಳಿಸಿದೆ.
ಶಾಸನದಲ್ಲಿ ಅನೂಕೂಲಕರ ಅಂಶಗಳನ್ನು ಅಳವಡಿಸಿದಾಗ, ಅದನ್ನು ಫಲಾನುಭವಿಗಳ ಪರವಾಗಿ ಜಾರಿಗೊಳಿಸಬೇಕು. ಅದು ಬಿಟ್ಟು ಫಲಾನುಭವಿ ಅರ್ಜಿ ಸಲ್ಲಿಸಿದ್ದಾರೆಯೇ, ಇಲ್ಲವೇ ಎಂಬುದನ್ನು ನೋಡಬಾರದು ಎಂದು ಹೇಳಿದೆ. ಕೆಎಟಿ ಮುಂದೆ ಅರ್ಜಿ ಸಲ್ಲಿಸಿದ್ದ ಶಿಕ್ಷಕರಿಬ್ಬರೂ ಮಹಿಳಾ ಶಿಕ್ಷಕಿಯರಾಗಿದ್ದು, ಅವರು 50 ವರ್ಷ ಮೇಲ್ಪಟ್ಟವರು. ಅವರು ಕರ್ನಾಟಕ ರಾಜ್ಯ ನಾಗರಿಕ ಸೇವಾ (ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯಿದೆ) 2020 ಸೆಕ್ಷನ್ 10(1)(6) ಅನ್ವಯ ಅವರ ವರ್ಗಾವಣೆಗೆ ವಿನಾಯ್ತಿ ಇದೆ. ಅವರನ್ನು ಹೆಚ್ಚುವರಿ ಶಿಕ್ಷಕರೆಂದು ಘೋಷಿಸಿ, ವರ್ಗಾವಣೆ ಮಾಡಬಾರದಿತ್ತು ಎಂದು ನ್ಯಾಯಾಲಯ ಹೇಳಿದೆ.
ಮಕ್ಕಳು - ಶಿಕ್ಷಕರ ಅನುಪಾತವನ್ನು ಆಧರಿಸಿ ಆ ಶಾಲೆಯಲ್ಲಿ ಎಷ್ಟು ಶಿಕ್ಷಕರು ಇರಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಆ ವೇಳೆ, ಕರ್ನಾಟಕ ರಾಜ್ಯ ನಾಗರಿಕ ಸೇವಾ (ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯಿದೆ) 2020 ಸೆಕ್ಷನ್ 10(1)(6) ಅನ್ವಯ 50 ವರ್ಷ ಮೇಲ್ಪಟ್ಟ ಶಿಕ್ಷಕರ ವರ್ಗಾವಣೆಗೆ ವಿನಾಯ್ತಿ ಇರುವ ಅಂಶವನ್ನು ಪರಿಗಣಿಸಬೇಕಾಗುತ್ತದೆ. ಆದರೆ, ಅದರ ಬದಲು ಅವರನ್ನು ಹೆಚ್ಚುವರಿ ಶಿಕ್ಷಕರು ಎಂದು ಘೋಷಿಸಿರುವುದು ಸರಿಯಲ್ಲ ಎಂದು ನ್ಯಾಯಪೀಠ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬೂದಿಹಾಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಮಾದೇವಿ ಹುಂಡೇಕರ್(55) ಮತ್ತು ಬೀಳಗಿ ತಾಲೂಕಿನ ತೆಗ್ಗಿ ಗ್ರಾಮದ ಪ್ರಭಾವತಿ ರೋಣದ್(58) ಅವರನ್ನು ಹೆಚ್ಚುವರಿ ಶಿಕ್ಷಕರು ಎಂದು ಪರಿಗಣಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆ 2022ರ ಡಿಸೆಂಬರ್ 26ರಂದು ಆದೇಶ ಹೊರಡಿಸಿತ್ತು.
ಅದರೆ, ಅರ್ಜಿದಾರರ ಶಿಕ್ಷಕರು, ನಿಯಮದ ಪ್ರಕಾರ ತಮಗೆ 50 ವರ್ಷ ಮೇಲ್ಪಟ್ಟ ವಯಸ್ಸಾಗಿದೆ, ವರ್ಗಾವಣೆಗೆ ವಿನಾಯ್ತಿ ಇದೆ ಎಂದು ಆಕ್ಷೇಪ ಸಲ್ಲಿಸಿದ್ದರು. ಆದರೆ, ಅದನ್ನು ಪರಿಗಣಿಸದೇ, ಇಬ್ಬರನ್ನೂ ಸಹ ವರ್ಗಾವಣೆ ಮಾಡಲಾಗಿತ್ತು. ಹಾಗಾಗಿ, ಅವರು ಕೆಎಟಿ ಮೊರೆ ಹೋಗಿದ್ದರು. ವರ್ಗಾವಣೆ ಆದೇಶವನ್ನು ಕೆಎಟಿ ರದ್ದುಪಡಿಸಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಇದನ್ನೂ ಓದಿ: ಎತ್ತರ ಕಡಿಮೆ ಎಂದು ಬಡ್ತಿ ನಿರಾಕರಿಸಲಾಗದು: ಹೈಕೋರ್ಟ್ - High Court