ಬೆಂಗಳೂರು: ಮೋಟಾರು ವಾಹನ ಅಪಘಾತ ಪ್ರಕರಣಗಳಲ್ಲಿ ಪಾವತಿಸುವ ಪರಿಹಾರ ಮೊತ್ತದಲ್ಲಿ ಮೆಡಿಕ್ಲೈಮ್‌ನ ಅಡಿಯಲ್ಲಿ ಪಾವತಿಸಿರುವ ಮೊತ್ತವನ್ನು ಕಡಿತಗೊಳಿಸಿ ಉಳಿದ ಮೊತ್ತ ಪಾವತಿಸಬಹುದು ಎಂದು ಹೈಕೋರ್ಟ್ ತಿಳಿಸಿದೆ.
ಬೆಂಗಳೂರಿನ ಮಾರತ್‌ಹಳ್ಳಿಯ ವಾಸಿ ಹನುಮಂತಪ್ಪ ಪರವಾಗಿ ಮೋಟಾರು ವಾಹನಗಳ ಅಪಘಾತ ಪರಿಹಾರ ನ್ಯಾಯಾಧಿಕರಣ(ಎಂಎಸಿಟಿ)ದ ಆದೇಶವನ್ನು ಪ್ರಶ್ನಿಸಿ ವಿಮಾ ಕಂಪನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರಿದ್ದ ಏಕ ಸದಸ್ಯಪೀಠ ಸೋಮವಾರ ಈ ಆದೇಶ ನೀಡಿತು.
ಅರ್ಜಿದಾರರ ಕುಟುಂಬಕ್ಕೆ ಮೆಡಿಕ್ಲೈಮ್ ಪಾಲಿಸಿಯಡಿ ನೀಡಿರುವ 1.8 ಲಕ್ಷ ರೂ. ಮೊತ್ತವನ್ನು ಕಡಿತಗೊಳಿಸಿ ಉಳಿದ ಪರಿಹಾರಕ್ಕೆ ವಾರ್ಷಿಕ ಶೇ.6ರಷ್ಟು ಬಡ್ಡಿ ಸೇರಿಸಿ 4,93,839 ರೂ. ಪಾವತಿ ಮಾಡಬೇಕು ಎಂದು ವಿಮಾ ಕಂಪನಿಗೆ ಕೋರ್ಟ್ ಆದೇಶಿಸಿದೆ. ಅಲ್ಲದೆ, ನ್ಯಾಯಾಲಯ ಈ ಪ್ರಕರಣದಲ್ಲಿ ಪರಿಹಾರವನ್ನು ನಿಗದಿಪಡಿಸುವಾಗ ಈಗಾಗಲೇ ಮೆಡಿಕ್ಲೈಮ್ ವಿಮಾ ನೀತಿಯಡಿ ಪಡೆದಿರುವ ವೈದ್ಯಕೀಯ ವೆಚ್ಚವನ್ನು ಕಡಿತಗೊಳಿಸಬೇಕಾಗುತ್ತದೆ. ಹಾಗಾಗಿ ಉಳಿದ ಪರಿಹಾರ ಮೊತ್ತವನ್ನು ವಿಮಾ ಕಂಪನಿ ಪಾವತಿಸಬೇಕು ಎಂದು ತಿಳಿಸಿದೆ.
ವಿಚಾರಣೆ ವೇಳೆ ವಿಮಾ ಕಂಪೆನಿ ಪರವಾಗಿ ವಾದ ಮಂಡಿಸಿದ ವಕೀಲರು, ಮನೀಶ್ ಗುಪ್ತಾ ಪ್ರಕರಣದಲ್ಲಿ ನೀಡಿರುವ ತೀರ್ಪು ಉಲ್ಲೇಖಿಸಿ, ಮೋಟಾರು ವಾಹನ ಕಾಯಿದೆಯಡಿ ಪರಿಹಾರವನ್ನು ನೀಡುವಾಗ ಅದರಲ್ಲಿ ಮೆಡಿಕ್ಲೈಮ್ ಅಡಿ ಮೊದಲೇ ಪಾವತಿಸಿದ ವೆಚ್ಚ ಕಡಿತ ಮಾಡಿದ ನಂತರ ಉಳಿದ ಪರಿಹಾರವನ್ನು ನೀಡಬೇಕು ಎಂಬುದಾಗಿ ಹೈಕೋರ್ಟ್ ಹೇಳಿದೆ. ಆದ್ದರಿಂದ ಈ ಪ್ರಕರಣದಲ್ಲಿ ಆ ತೀರ್ಪನ್ನು ಅನ್ವಯಿಸಬೇಕು ಎಂದು ಕೋರಿತ್ತು. ಇದನ್ನು ನ್ಯಾಯಪೀಠ ಪುರಸ್ಕರಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: 2008ರ ಡಿ.10ರಂದು ಲೇಪಾಕ್ಷಿಯಿಂದ ಸೇವಾ ಮಂದಿರ ಗ್ರಾಮಕ್ಕೆ ತನ್ನ ಮೋಟಾರ್ ಸೈಕಲ್‌ನಲ್ಲಿ ಹನುಮಂತಪ್ಪ ತೆರಳುವಾಗ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದರು. ಹನುಮಂತಪ್ಪ ಮತ್ತು ಆತನ ಹೆಂಡತಿ ಗಂಭೀರವಾಗಿ ಗಾಯಗೊಂಡಿದ್ದರು. ಹಿಂದೂಪುರ ಪೊಲೀಸರು ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರು. ಹನುಮಂತಪ್ಪ ಎಂಎಸಿಟಿಯಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮಂಡಳಿ 2013ರ ಮಾ.22ದು ವೈದ್ಯಕೀಯ ವೆಚ್ಚ ಸೇರಿದಂತೆ ಒಟ್ಟು 6,73,839 ರೂ. ಪರಿಹಾರ ನೀಡುವಂತೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ವಿಮಾ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು.
ಇದನ್ನೂ ಓದಿ: ಒಬ್ಬ ವ್ಯಕ್ತಿಯೇ ಆರ್‌ಟಿಐ ಅಡಿ ಸಲ್ಲಿಸಿದ್ದ 9 ಸಾವಿರಕ್ಕೂ ಹೆಚ್ಚು ಅರ್ಜಿ ವಜಾ; ₹9.6 ಲಕ್ಷ ಶುಲ್ಕ ಪಾವತಿಗೆ ಹೈಕೋರ್ಟ್ ಆದೇಶ
ಇದನ್ನೂ ಓದಿ: 2ನೇ ಮಗು ಪಡೆಯಲು ಅಡ್ಡಿಯಾದ ಬಾಡಿಗೆ ತಾಯ್ತನ ಕಾಯಿದೆಯ ಸೆಕ್ಷನ್‌ಗಳ ರದ್ದತಿಗೆ ಅರ್ಜಿ: ಸರ್ಕಾರಕ್ಕೆ ನೋಟಿಸ್
ಇದನ್ನೂ ಓದಿ: ಹಿರಿಯ ನಾಗರಿಕ ಕಾಯಿದೆಯಡಿ ಆಸ್ತಿ ವರ್ಗಾವಣೆ ಹಕ್ಕು ರದ್ದು ಕೋರಿ ಮಕ್ಕಳು ಅರ್ಜಿ ಸಲ್ಲಿಸಲಾಗದು: ಹೈಕೋರ್ಟ್