ಬೆಳಗಾವಿ: ಬೆಳಗಾವಿ ಲೋಕಸಮರದಲ್ಲಿ ಮಾತಿಗೆ ಮಾತು, ಏಟಿಗೆ ಎದುರೇಟು ಜೋರಾಗಿದೆ. ಒಂಬತ್ತು ತಿಂಗಳ ಹಿಂದೆ ಗಂಡ ಹೆಂಡತಿ ಎಲ್ಲರೂ ಅಳುತ್ತ ನಮ್ಮ ಬಳಿ ಬಂದಿದ್ದರು ಎಂಬ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಟೀಕೆಗೆ ತಿರುಗೇಟು ಕೊಟ್ಟಿರುವ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್, ನಾನು ಕಾಂಗ್ರೆಸ್ಗೆ ರಾಜೀನಾಮೆ ಕೊಟ್ಟಾಗ ಅದನ್ನು ಹೇಳಬೇಕಿತ್ತು. ಚುನಾವಣೆ ಪ್ರಚಾರದಲ್ಲಿ ಆದೆಷ್ಟು ಕೀಳುಮಟ್ಟದ ಅಪಪ್ರಚಾರ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.
ಶೆಟ್ಟರ್ ಹೊರಗಿನವರು, ಹೆಬ್ಬಾಳ್ಕರ್ ಪಂಚಮಸಾಲಿ ಅಲ್ಲ ಎಂಬುದು ಸೇರಿ ಅನೇಕ ವಿಚಾರಗಳನ್ನು ಮುಂದಿಟ್ಟುಕೊಂಡು ಎರಡೂ ಪಕ್ಷಗಳ ನಾಯಕರು ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ತೀರಾ ವೈಯಕ್ತಿಕ ಟೀಕೆಗಳಲ್ಲಿ ಪರಸ್ಪರ ಮುಳುಗಿದ್ದಾರೆ.
ಶೆಟ್ಟರ್ಗೆ ಬದ್ಧತೆ ಇದೆಯಾ?: ಸವದತ್ತಿ ತಾಲೂಕಿನ ಚಚಡಿ ಗ್ರಾಮದಲ್ಲಿ ಪುತ್ರನ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದರು. ಬರೀ ಒಂಬತ್ತು ತಿಂಗಳ ಹಿಂದೆ ಶೆಟ್ಟರ್ ಅವರು ಬಿಜೆಪಿ ಮೋಸ, ಅನ್ಯಾಯ ಮಾಡಿದೆ ಅಂತಾ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದರು. ನರೇಂದ್ರ ಮೋದಿ, ಯಡಿಯೂರಪ್ಪ ಅನ್ಯಾಯ ಮಾಡಿದ್ದಾರೆ ಎಂದಿದ್ದರು. ಗಂಡ ಹೆಂಡತಿ ಎಲ್ಲರೂ ಅಳ್ತಾ ನಮ್ಮ ಬಳಿ ಬಂದಿದ್ದರು.
ಚುನಾವಣೆ ನಿಂತು ಸೋತರು. ಆದರೆ, ಕಾಂಗ್ರೆಸ್ ಪಕ್ಷ ಅವರನ್ನ ಕೈಬಿಡಲಿಲ್ಲ. ಸೋತರು ಅಂತಾ ಅವರನ್ನು ಮನೆಯಲ್ಲಿ ಕೂಡಿಸಲಿಲ್ಲ, ಎಂಎಲ್ಸಿ ಮಾಡಿದರು. ಈಗ ದಿಢೀರ್ ಅಂತಾ ಬಿಜೆಪಿಗೆ ಹೋಗಿ ಮೋದಿಯವರನ್ನು ಪ್ರಧಾನಿ ಮಾಡಿ ಅಂತಾರೆ. ಇವರಿಗೆ ಬದ್ಧತೆ ಇದೆಯಾ..? ಶೆಟ್ಟರ್ ಅವರಿಗೆ ನೈತಿಕತೆ ಇದೆಯಾ ಎಂದು ಖಾರವಾಗಿ ಪ್ರಶ್ನಿಸಿದ್ದರು.
ಬೆಳಗಾವಿ ಜಿಲ್ಲೆಗೆ ಎರಡು ಬಾರಿ ಉಸ್ತುವಾರಿ ಸಚಿವರಾಗಿದ್ದರು. ಬೆಳಗಾವಿ ಜಿಲ್ಲೆಗೆ ಶೆಟ್ಟರ್ ಅವರು ಬರೀ ಅನ್ಯಾಯ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಬೇಕಾದಾಗ ಅದನ್ನೂ ಹುಬ್ಬಳ್ಳಿಗೆ ತಗೊಂಡು ಹೋದರು. ಯಾವ ಮುಖ ಇಟ್ಟುಕೊಂಡು ಬೆಳಗಾವಿ ಭಾಗಕ್ಕೆ ಬಂದು ವೋಟ್ ಕೇಳ್ತಿದ್ದಾರೆ ಗೊತ್ತಿಲ್ಲ. ಹುಬ್ಬಳ್ಳಿಯವರನ್ನು ಹುಬ್ಬಳ್ಳಿಗೆ ಕಳುಹಿಸಬೇಕು. ಬೆಳಗಾವಿ ಮಗನಾದ ಮೃಣಾಲ್ ಅವರನ್ನು ನಿಮ್ಮ ಸೇವೆ ಮಾಡಲು ದೆಹಲಿಗೆ ಕಳುಹಿಸಿ ಕೊಡಿ ಎನ್ನುವ ಮೂಲಕ ಶೆಟ್ಟರ್ ವಿರುದ್ಧ ಕಟು ಶಬ್ದಗಳಲ್ಲಿ ಟೀಕಿಸಿದ್ದಾರೆ.
ಒಟ್ಟಾರೆ, ವೈಯಕ್ತಿಕ ವಿಚಾರಗಳ ಮೇಲೆ ಬೆಳಗಾವಿಯಲ್ಲಿ ಮಾತಿನ ಭರಾಟೆ ಜೋರಾಗಿದ್ದು, ಇದು ಇಷ್ಟಕ್ಕೆ ತಣ್ಣಗಾಗುವ ಲಕ್ಷಣ ಕಾಣಿಸುತ್ತಿಲ್ಲ.
ಸೋಲಿನ ಭೀತಿಯಿಂದ ಹೆಬ್ಬಾಳ್ಕರ್ ಅಪಪ್ರಚಾರ: ಲಕ್ಷ್ಮೀ ಹೆಬ್ಬಾಳ್ಕರ್ ಏಟಿಗೆ ಸೈಲೆಂಟ್ ಆಗಿಯೇ ತಿರುಗೇಟು ಕೊಟ್ಟಿರುವ ಜಗದೀಶ ಶೆಟ್ಟರ್, ಇಂತಹದನ್ನು ನನ್ನ ಜೀವನದಲ್ಲಿ ಮೊದಲ ಸಲ ನೋಡಿದ್ದೇನೆ. ಕೀಳು ಮಟ್ಟದ ಇಂತಹ ಅಪಪ್ರಚಾರಕ್ಕೆ ನಾನು ಉತ್ತರ ಕೊಡಲ್ಲ. ಸೋಲಿನ ಭಯ ಮತ್ತು ಹತಾಶೆಯಿಂದಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಮೋದಿ, ಬಿಜೆಪಿ ಹಾಗೂ ಶೆಟ್ಟರ್ ಬಗ್ಗೆ ಮಾತನಾಡಲು ವಿಷಯ ಇಲ್ಲ. ಹೀಗಾಗಿ ಕೀಳು ಮಟ್ಟದ ಪ್ರಚಾರ ಮಾಡುತ್ತಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.
ಇದು ಅಸೆಂಬ್ಲಿ, ಜಿ, ಪಂ ಚುನಾವಣೆ ಅಲ್ಲ. ನಾನು ಕಾಂಗ್ರೆಸ್ ಸೇರಿದ್ದರಿಂದ ಅವರಿಗೆ ಲಾಭ ಆಗಿದೆ. ಅವರ ಪಕ್ಷದ ನಾಯಕರೇ ಬಹಿರಂಗವಾಗಿ ಅನೇಕ ಸಲ ಹೇಳಿದ್ದಾರೆ. ಶೆಟ್ಟರ್ ಬಂದಿದ್ದರಿಂದ ಶಕ್ತಿ ಬಂದಿದೆ ಎಂದಿದ್ದರು. ನನ್ನನ್ನು ಸ್ವಾಗತ ಮಾಡಿ ಕರೆದುಕೊಂಡಿದ್ದಾರೆ. ಸೋಲಿನ ಹತಾಶೆಯಿಂದಾಗಿ ಈ ರೀತಿ ಹೇಳಿಕೆ, ಹಸಿ ಸುಳ್ಳು ಹೇಳುವುದು ಆರಂಭವಾಗಿದೆ. ಇದಕ್ಕೆ ಮತದಾನದ ದಿನ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಇದನ್ನೂಓದಿ:ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ, ಎಲ್ಲೆಡೆ ನಿರೀಕ್ಷೆ ಮೀರಿ ಬೆಂಬಲ: ಯಡಿಯೂರಪ್ಪ - B S Yediyurappa