ಬೆಂಗಳೂರು: ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರ, ರಾಜ್ಯದಲ್ಲಿ ಜಿಲ್ಲೆ ಜಿಲ್ಲೆಗಳ ನಡುವೆ ಜಲತಂಟೆ ತಂದಿಟ್ಟು ತನ್ನ ಜಲದ್ರೋಹವನ್ನು ಮರೆ ಮಾಚುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
ಕದ್ದುಮುಚ್ಚಿ ನೆರೆರಾಜ್ಯ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ @INCKarnataka ಸರಕಾರ; ಆ ಜಲದ್ರೋಹವನ್ನು ಜನರಿಂದ ಮರೆಮಾಚಿಕೊಳ್ಳಲು ಈಗ ನಮ್ಮ ರಾಜ್ಯದಲ್ಲಿ ಜಿಲ್ಲೆ ಜಿಲ್ಲೆಗಳ ನಡುವೆ ನೀರಿನ ಜಗಳ ತಂದಿಡುತ್ತಿದೆ. ಹಾಸನ ಮತ್ತು ತುಮಕೂರಿನಲ್ಲಿ ಅಂತದ್ದೇ 'ಜಲತಂಟೆ' ಪ್ರಯೋಗಿಸುತ್ತಿದೆ.1/5#ತಂಟೆಕೊರ_ಸರಕಾರ pic.twitter.com/qq14pvyE8t
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) March 14, 2024
ಸರ್ಕಾರ ಹಾಸನ ಮತ್ತು ತುಮಕೂರು ಜಿಲ್ಲೆಗಳ ನಡುವೆ ಹೇಮಾವತಿ ನೀರಿನ ಜಗಳ ತಂದಿಟ್ಟಿದೆ ಎಂದು ಎಕ್ಸ್ ಜಾಲತಾಣದಲ್ಲಿ ಕಿಡಿಕಾರಿರುವ ಮಾಜಿ ಸಿಎಂ, ಸಿದ್ದರಾಮಯ್ಯ ಸರಕಾರವನ್ನು ತಂಟೆಕೋರ ಸರಕಾರ ಎಂದು ಟೀಕಿಸಿದ್ದಾರೆ. ಕದ್ದುಮುಚ್ಚಿ ನೆರೆರಾಜ್ಯ ತಮಿಳುನಾಡಿಗೆ ನೀರು ಹರಿಸುತ್ತಿರುವ ಸರಕಾರ ಆ ಜಲದ್ರೋಹವನ್ನು ಜನರಿಂದ ಮರೆಮಾಚಿಕೊಳ್ಳಲು ಈಗ ನಮ್ಮ ರಾಜ್ಯದಲ್ಲಿ ಜಿಲ್ಲೆ ಜಿಲ್ಲೆಗಳ ನಡುವೆ ನೀರಿನ ಜಗಳ ತಂದಿಡುತ್ತಿದೆ. ಹಾಸನ ಮತ್ತು ತುಮಕೂರಿನಲ್ಲಿ ಅಂತದ್ದೇ 'ಜಲತಂಟೆ' ಪ್ರಯೋಗಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಹಾಸನ ಜಿಲ್ಲೆ ಜನರು ಎಂದೂ ತುಮಕೂರಿಗೆ ನೀರು ಕೊಡುವುದನ್ನು ವಿರೋಧಿಸಿಲ್ಲ, ವಿರೋಧಿಸುವುದೂ ಇಲ್ಲ. ನಮಗೂ ನೀರು ಕೊಡಿ ಎಂದಷ್ಟೇ ಕೇಳುತ್ತಿದ್ದಾರೆ. ಅಕ್ಕಪಕ್ಕದ ಜಿಲ್ಲೆಗಳ ಜನರು ಎಂದರೆ ಅವಳಿ - ಜವಳಿ ಮಕ್ಕಳಂತೆ. ಅಂಥ ಮಕ್ಕಳ ನಡುವೆಯೇ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಬೆಂಕಿ ಹಾಕುತ್ತಿರುವುದು ನೀಚತನದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ನಿನ್ನೆ ಹಾಸನಕ್ಕೆ ಹೋಗಿದ್ದೆ. ಅಲ್ಲಿನ ಪರಿಸ್ಥಿತಿ ಏನಿದೆ ಎನ್ನುವುದನ್ನು ತಿಳಿದುಕೊಂಡೆ. ತುಮಕೂರಿನ ಪರಿಸ್ಥಿತಿಯೂ ಕಷ್ಟವಿದೆ ಎನ್ನವುದೂ ನನಗೆ ಗೊತ್ತು. ಆದರೆ, ಕಾಂಗ್ರೆಸ್ ಪಕ್ಷಕ್ಕೆ ಹೇಮಾವತಿ ತಾಯಿ ರಾಜಕೀಯ ದಾಳವಾಗಿದ್ದಾಳೆ. ಪೊಲೀಸ್ ರಾಜ್ ಸೃಷ್ಟಿಸಿ ಜನರ ದನಿ ಅಡಗಿಸುವ ಯತ್ನ ನಡೆಸಿದೆ ಎಂದು ದೂರಿದ್ದಾರೆ. ನಾಲೆ ಉದ್ದಕ್ಕೂ ಪೊಲೀಸ್ ಪಹರೆ ಹಾಕಿರುವುದು ಈ ಸರಕಾರ ನಮ್ಮ ಜನರ ಬಗ್ಗೆ ಹೊಂದಿರುವ ಕೀಳು ಮನ ಸ್ಥಿತಿಯನ್ನು ತೋರಿಸುತ್ತದೆ ಎಂದಿದ್ದಾರೆ.
ಪಹರೆ ಹಾಕಿ ನೀರು ಹರಿಸುವ ವರ್ತನೆ ಎರಡೂ ಜಿಲ್ಲೆಗಳ ಜನರಿಗೆ ಮಾಡುವ ಘೋರ ಅಪಮಾನ ಎಂದಿರುವ ಅವರು, ಮಾನ್ಯ ಮಾಜಿ ಪ್ರಧಾನಿಗಳಾದ ದೇವೇಗೌಡರು ಕೆಲ ದಿನಗಳ ಹಿಂದೆಯೇ ಹಾಸನಕ್ಕೂ ನೀರು ಕೊಡಿ, ಬೇರೆಯವರಿಗೂ ನೀರು ಕೊಡಿ ಎಂದು ಹೇಳಿದ್ದರು. ಈ ಕಡು ಬರದಲ್ಲಿ ಹನಿ ನೀರಿಗೂ ಎಷ್ಟು ತತ್ವಾರವಿದೆ ಎನ್ನುವುದು ಸರಕಾರಕ್ಕೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದ್ದರು. ಇನ್ನೊಬ್ಬರ ಮಾತು ಕೇಳುವ ವ್ಯವಧಾನ ಸರಕಾರಕ್ಕೆ ಇಲ್ಲದಾಗಿದೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.
ಇದನ್ನೂ ಓದಿ: ಮೂರು ದಿನದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಘೋಷಣೆ: ಮತ್ತೊಂದು ಕ್ಷೇತ್ರ ಕೇಳಿದ್ದೇವೆ ಎಂದ ಜಿ.ಟಿ.ದೇವೇಗೌಡ