ಬೆಂಗಳೂರು: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡ ಇಂದು ಭೇಟಿ ನೀಡಲಿದ್ದಾರೆ. ಧರ್ಮಸ್ಥಳದಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ರಸ್ತೆ ಮಾರ್ಗದ ಮೂಲಕ ಕುಕ್ಕೆ ತಲುಪುವರು. ಸಂಜೆ ಕ್ಷೇತ್ರದಲ್ಲಿ ನಡೆಯುವ ವಿಶೇಷ ಪೂಜೆಯಲ್ಲಿ ಭಾಗವಹಿಸಿ, ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡುವರು. ನಾಳೆಯೂ ವಿಶೇಷ ಪೂಜೆಯಲ್ಲಿ ಭಾಗವಹಿಸುವರು. ಬಳಿಕ ಮಧ್ಯಾಹ್ನ 1 ಗಂಟೆಗೆ ರಸ್ತೆ ಮಾರ್ಗದ ಮೂಲಕ ಬಿಳಿನೆಲೆ ಹೆಲಿಪ್ಯಾಡ್‌ಗೆ ಆಗಮಿಸಿ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.
ನಾಡಿನ ಇಬ್ಬರು ಸಾಧಕರು 2024ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿರುವುದು ಹೆಮ್ಮೆಯ ಸಂಗತಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಶ್ಲಾಘಿಸಿದ್ದಾರೆ. ಬೆಂಗಳೂರಿನ ಡಾ.ಪ್ರೇಮಾ ಧನರಾಜ್ ಅವರು ಅಗ್ನಿರಕ್ಷಕ್ ಎಂಬ ಸ್ವಯಂಸೇವಾ ಸಂಸ್ಥೆ ಸ್ಥಾಪಿಸಿ ಆ ಮೂಲಕ ಸುಟ್ಟ ಗಾಯಗಳಿಂದ ಬಳಲುತ್ತಿರುವ 25 ಸಾವಿರಕ್ಕೂ ಹೆಚ್ಚು ಸಂತ್ರಸ್ತರಿಗೆ ಉಚಿತ ಶಸ್ತ್ರಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ ಮಾಡಿದ್ದಾರೆ. ನೊಂದವರಿಗೆ ಬದುಕಿನ ಜತೆಗೆ ಭವಿಷ್ಯದ ಭರವಸೆ ನೀಡಿದ್ದಾರೆ ಎಂದು ಅವರು ಬಣ್ಣಿಸಿದ್ದಾರೆ.
ಸಾಮಾಜಿಕವಾಗಿ ಸಾಕಷ್ಟು ಹಿಂದುಳಿದಿರುವ ಜೇನು ಕುರುಬ ಜನಾಂಗದ ಏಳಿಗೆಗಾಗಿ ಶ್ರಮಿಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸೋಮಣ್ಣ ಅವರ ಅನನ್ಯ ಸೇವೆ ಸದಾ ಸ್ಮರಣೀಯ ಹಾಗೂ ಅನುಕರನೀಯ. ಈ ಇಬ್ಬರು ಎಲೆಮರೆಯ ಸಾಧಕರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ತಿಳಿಸಿದ್ದಾರೆ.
ಎಲ್ಲರಿಗೂ ಗಣರಾಜ್ಯೋತ್ಸವ ದಿನದ ಶುಭಾಶಯಗಳು. ರಾಷ್ಟ್ರದ ಅಭ್ಯುದಯಕ್ಕಾಗಿ ದುಡಿದ ಎಲ್ಲಾ ಮಹನೀಯರನ್ನು ಸ್ಮರಿಸೋಣ. ಅನೇಕರ ತ್ಯಾಗ ಬಲಿದಾನಗಳಿಂದ ಪಡೆದುಕೊಂಡ ಸ್ವಾತಂತ್ರ್ಯವನ್ನು ಸಾರ್ಥಕಗೊಳಿಸಿಕೊಳ್ಳುವುದರ ಜತೆಗೆ, ಭಾರತ ಮಹಾನ್ ಜಾಗತಿಕ ಶಕ್ತಿಯಾಗಿ ಆವಿರ್ಭವಿಸುವ ನಿಟ್ಟಿನಲ್ಲಿ ಒಟ್ಟಾಗಿ ದುಡಿಯೋಣ ಎಂದಿದ್ದಾರೆ.
ಇದನ್ನೂ ಓದಿ: ದೆಹಲಿಯ ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ ವೈಭವ: ಭಾರತದ ಮಿಲಿಟರಿ, ಮಹಿಳಾ ಶಕ್ತಿ ಅನಾವರಣ