ಬೆಂಗಳೂರು: ಹಾವೇರಿಯ ರೈತರೊಬ್ಬರಿಗೆ ಅವಮಾನ ಮಾಡಿದ ನಗರದ ಮಾಗಡಿ ರಸ್ತೆಯ ಜಿ.ಟಿ.ಮಾಲ್ ಅನ್ನು ಕಾನೂನು ಪ್ರಕಾರ 7 ದಿನಗಳ ಕಾಲ ಮುಚ್ಚಿಸುವ ಕೆಲಸ ಮಾಡುತ್ತೇವೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ವಿಧಾನಸಭೆಯಲ್ಲಿ ಇಂದು ತಿಳಿಸಿದರು.
ರೈತರೊಬ್ಬರನ್ನು ಮಾಲ್‌ಗೆ ಬಿಡದೆ ಅವಮಾನ ಮಾಡಿರುವುದನ್ನು ಪಕ್ಷಬೇಧ ಮರೆತು ಸದನದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದಾಗ ಮಧ್ಯಪ್ರವೇಶಿಸಿದ ಸಚಿವರು, ರೈತನಿಗೆ ಅವಮಾನ ಮಾಡಿದ ಮಾಲ್ ಅನ್ನು ಒಂದು ವಾರ ಮುಚ್ಚಿಸುವುದಾಗಿ ಹೇಳಿದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಸ್ಪೀಕರ್ ಯು.ಟಿ.ಖಾದರ್, ಗ್ರಾಮೀಣ ಭಾಗದಿಂದ ಬಂದ ಯುವಕ ತಮ್ಮ ತಂದೆಯನ್ನು ಮಾಲ್‌ಗೆ ಕರೆದೊಯ್ದಾಗ ಅಲ್ಲಿ ಆ ರೈತನನ್ನು ಮಾಲ್‌ನೊಳಗೆ ಬಿಡಲಿಲ್ಲ. ಆ ರೈತ ಕರ್ನಾಟಕದ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದರು. ಪಂಚೆ ತೊಟ್ಟಿದ್ದಾರೆ ಎಂಬ ಕಾರಣಕ್ಕೆ ಒಳಬಿಟ್ಟಿಲ್ಲ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಸರ್ಕಾರ ಮಾಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆ ಮೂಲಕ ಎಲ್ಲಾ ಮಾಲ್ಗಳಿಗೂ ಸಂದೇಶ ರವಾನಿಸಬೇಕು ಎಂದರು. ಇದೇ ವೇಳೆ, ಮಾಲ್‌ನ ಮಾಲೀಕರು ಎಷ್ಟೇ ಶ್ರೀಮಂತರಾದರೂ ಅದು ಮುಖ್ಯವಲ್ಲ. ಕಟ್ಟಕಡೇಯ ಜನರಿಗೆ ಸ್ಪಂದಿಸುವುದು ಮುಖ್ಯ ಎಂದು ಸ್ಪೀಕರ್ ಹೇಳಿದರು.
ಇದಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಶಾಸಕ ಲಕ್ಷ್ಮಣ ಸವದಿ, ಮಾಲ್ ವಿರುದ್ಧ ಕಠಿಣ ಕ್ರಮ ಎಂದು ಹೇಳಿದರೆ ಆಗದು. ಒಂದು ವಾರಗಳ ವಿದ್ಯುತ್ ಕಡಿತಗೊಳಿಸಿ, ಆಗ ತಕ್ಕ ಪಾಠ ಆಗುತ್ತದೆ. ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿ ರೈತರ ಸಮವಸ್ತ್ರಕ್ಕೆ ಬೆಲೆ ಕೊಡದ ಮಾಲ್ ವಿರುದ್ಧ ಕ್ರಮವಾಗಬೇಕು ಎಂದು ಆಗ್ರಹಿಸಿದರು.
ಶಾಸಕ ಪ್ರಕಾಶ್ ಕೋಳಿವಾಡ ಮಾತನಾಡಿ, ಅವರು ನಮ್ಮ ಕ್ಷೇತ್ರದ ಅರೆಮಲ್ಲಾಪುರ ಗ್ರಾಮದ ರೈತರು. ಅವರಿಗೆ 9 ಜನ ಮಕ್ಕಳಿದ್ದಾರೆ. ಎಲ್ಲರಿಗೂ ಶಿಕ್ಷಣ ಕೊಡಿಸಿದ್ದಾರೆ. ಒಬ್ಬ ಪುತ್ರ ಎಂಬಿಎ ಓದುತ್ತಿದ್ದು, ಆ ಮಗನನ್ನು ನೋಡಲು ಬಂದಿದ್ದಾಗ ಮಗ ಜಿ.ಟಿ.ಮಾಲ್‌ಗೆ ಕರೆದುಕೊಂಡು ಹೋಗಿದ್ದರು. ಅನ್ನದಾತನಿಗೆ ಅವಮಾನ ಮಾಡಿದ ಮಾಲ್ ಮುಚ್ಚಿಸಬೇಕೆಂದು ಒತ್ತಾಯಿಸಿದರು.
ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ರೈತರಿಗೆ ಅವಮಾನ ಮಾಡಿದ ವಿಚಾರ ಹತ್ತಾರು ಬಾರಿ ಚರ್ಚೆಯಾಗಿದೆ. ಈಗ ರೈತರಿಗಾಗಿರುವ ಅವಮಾನಕ್ಕೆ ಸರ್ಕಾರದಿಂದ ಕ್ರಮ ಕೈಗೊಳ್ಳಲು ಏನಾದರೂ ಆದೇಶ ಹೊರಡಿಸಿ. ಆ ಆದೇಶವನ್ನು ಕಾರ್ಯದರ್ಶಿಗಳು ಅನುಷ್ಠಾನ ಮಾಡಬೇಕು ಎಂದು ಹೇಳಿದರು.
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ರೈತರಿಗೆ ಮಾಲ್ ಪ್ರವೇಶ ಮಾಡಲು ಅವಕಾಶ ಕೊಡದೇ ಇರುವುದು ಸರಿಯಲ್ಲ. ಮಾಲ್ ಮಾಲೀಕರಾಗಲೀ, ಆಡಳಿತ ವರ್ಗದವರಾಗಲೀ ಅಪಮಾನ ಮಾಡುವುದು, ಘನತೆ, ಸ್ವಾಭಿಮಾನಕ್ಕೆ ಧಕ್ಕೆ ತರುವುದು ಸಂವಿಧಾನದಂತೆ ಅವಕಾಶವಿಲ್ಲ. ಇಂತಹ ನಡವಳಿಕೆಯನ್ನು ಖಂಡಿಸುತ್ತೇವೆ. ವರದಿ ಪಡೆದು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.
ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ಮಾತನಾಡಿ, ಅಲ್ಲಿರುವ ಭದ್ರತಾ ಸಿಬ್ಬಂದಿ ಕೂಡ ರೈತರ ಪುತ್ರ. ಮಾಲ್‌ನ ಮಾಲೀಕರ ಮೇಲೆ ಎಫ್‌ಐಆರ್ ದಾಖಲಿಸಬೇಕು. ಸೆಕ್ಯೂರಿಟಿ ಏಜೆನ್ಸಿ ವಿರುದ್ಧವೂ ಕ್ರಮವಾಗಬೇಕು ಎಂದು ಒತ್ತಾಯಿಸಿದರು.