ಬೆಂಗಳೂರು: ಇವತ್ತಿನಿಂದ ಯಾವೆಲ್ಲ ದೂರು ಬರುತ್ತವೋ ಅವು ಹೊಸ ಕಾನೂನುಗಳಡಿ ದಾಖಲಾಗಲಿವೆ. ಹೊಸ ಕಾನೂನುಗಳ ಜಾರಿ ಬಗ್ಗೆ ಎಲ್ಲರಿಗೂ ತರಬೇತಿ ಕೊಟ್ಟಿದ್ದೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು.
ಇಂದಿನಿಂದ ಮೂರು ಕ್ರಿಮಿನಲ್ ಅಪರಾಧ ನ್ಯಾಯ ಕಾನೂನುಗಳ ಜಾರಿ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸುತ್ತಾ, ಹೊಸ ಕಾನೂನಿನ ಸಂಬಂಧ ಕಾನ್ಸ್ಟೇಬಲ್ನಿಂದ ಹಿಡಿದು ಅಧಿಕಾರಿಗಳವರೆಗೂ ತರಬೇತಿ ಕೊಟ್ಟಿದ್ದೇವೆ. ಇದಕ್ಕಾಗಿ ಪೊಲೀಸರಿಗೆ ಆ್ಯಪ್ ಸಿದ್ಧಪಡಿಸಲಾಗಿದೆ. ಪೊಲೀಸರಿಗೆ ಹೊಂದಾಣಿಕೆ ಆಗುವವರೆಗೂ ಈ ಆ್ಯಪ್ ನೋಡ್ಕೊಂಡು ಕೆಲಸ ಮಾಡಬಹುದು. ಇದು ಒಂದು ರೀತಿಯಲ್ಲಿ ಟೆಸ್ಟಿಂಗ್ ಸಮಯ ಎಂದರು.
ಇನ್ಮುಂದೆ ದಾಖಲಾಗುವ ಪ್ರಕರಣಗಳಿಗೆ ಹೊಸ ಕಾನೂನು ಅನ್ವಯ ಆಗಲಿದೆ. ಇದರ ಪರಿಣಾಮ ಏನು ಅಂತ ಈಗಲೇ ಹೇಳಲು ಆಗುವುದಿಲ್ಲ. ಸ್ವಲ್ಪ ದಿನಗಳ ನಂತರ ಇದರ ಸಕ್ಸಸ್ ಬಗ್ಗೆ ಗೊತ್ತಾಗುತ್ತದೆ. ಇಡೀ ದೇಶದಲ್ಲಿ ಜಾರಿಯಾಗಿದೆ, ಫೀಡ್ ಬ್ಯಾಕ್ ನೋಡಿಕೊಂಡು ಸರ್ಕಾರ ಮುಂದೆ ಕೆಲ ಪರಿಷ್ಕರಣೆ ಮಾಡಬಹುದು ಎಂದು ಹೇಳಿದರು.
ಅಂತರ ಜಿಲ್ಲೆ ವರ್ಗಾವಣೆಗೆ ಹೊಸ ನಿಯಮ: ಅಂತರ್ ಜಿಲ್ಲಾ ವರ್ಗಾವಣೆಯಲ್ಲಿ ಗೊಂದಲ ವಿಚಾರವಾಗಿ ಪೊಲೀಸರು ಕುಟುಂಬ ಸಮೇತರಾಗಿ ಗೃಹ ಸಚಿವ ಪರಮೇಶ್ವರ್ ಅವರನ್ನು ಭೇಟಿ ಮಾಡಿ, ಸಮಸ್ಯೆ ಹೇಳಿಕೊಂಡರು. ಈ ವೇಳೆ ಮಾತನಾಡಿ, ಇದಕ್ಕಾಗಿ ನಿಯಮಗಳನ್ನು ರಚಿಸಲಾಗುತ್ತದೆ. ಉತ್ತರ ಕರ್ನಾಟಕ ಕಡೆಯವರು ಇಲ್ಲಿಗೆ ಬಂದು ಕೆಲಸ ಮಾಡುವಲ್ಲಿ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕಾಗಿ ಒಂದಷ್ಟು ನಿಯಮಗಳನ್ನು ಮಾಡಲಾಗ್ತಿದೆ. ಇದರ ಜತೆಗೆ ಪತಿ-ಪತ್ನಿ ವರ್ಗಾವಣೆ ವಿಚಾರಕ್ಕೂ ಹೊಸ ನಿಯಮಗಳನ್ನು ಮಾಡಲಾಗುತ್ತದೆ. ಆದಷ್ಟು ಶೀಘ್ರವಾಗಿ ನಿಯಮಗಳನ್ನು ಮಾಡ್ತೇವೆ ಎಂದು ಅಭಯ ನೀಡಿದರು.
ದರ್ಶನ್ ಕೇಸ್‌ಗೆ ಕೊಡ್ತಿರೋ ಆಸಕ್ತಿ ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮದ ಕೇಸ್‌ಗೆ ಕೊಡ್ತಿಲ್ಲ ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣದ ತನಿಖೆಯನ್ನು ಈಗಾಗಲೇ ಸಿಬಿಐ ಕೂಡಾ ನಡೆಸ್ತಿದೆ. ನಮ್ಮವರೂ ತನಿಖೆ ಮಾಡ್ತಿದ್ದಾರೆ. ಆದ್ಯತೆ ವಿಚಾರದಲ್ಲಿ ಸಮಸ್ಯೆ ಆಗಿಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.
ಶರಣ್ ಪ್ರಕಾಶ್ ಪಾಟೀಲ್, ದದ್ದಲ್ ರಾಜೀನಾಮೆಗೆ ಬಿಜೆಪಿ ಆಗ್ರಹ ವಿಚಾರವಾಗಿ ಮಾತನಾಡಿ, ಯಾರು ತಪ್ಪು ಮಾಡಿದ್ದಾರೋ ಅವರ ರಕ್ಷಣೆ ಮಾಡಲ್ಲ ಸರ್ಕಾರ. ಯಾರೇ ಇದ್ದರೂ ಕಾನೂನು ಪ್ರಕಾರ ಕ್ರಮ ಆಗಲಿದೆ. ಅಧಿಕಾರಿಗಳು ಇರಬಹುದು, ರಾಜಕೀಯ ವ್ಯಕ್ತಿಗಳಿರಬಹುದು, ಯಾರೇ ಇದ್ರೂ ಕ್ರಮ ಖಚಿತ. ಈ ಪ್ರಕರಣದಲ್ಲಿ ಸಿಬಿಐನವರು ಬ್ಯಾಂಕ್ ವಂಚನೆ ಕುರಿತು ತನಿಖೆ ನಡೆಸ್ತಿದ್ದಾರೆ. ನಾವು ನಿಗಮದ ಒಳಗೆ ಆಗಿರುವ ಲೋಪಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಬಿಜೆಪಿಯವರು ಪ್ರತಿಭಟನೆ ಮಾಡಲಿ, ಸಿಎಂ ಮನೆ ಮುತ್ತಿಗೆ ಹಾಕಲಿ, ಯಾರು ಬೇಡ ಅಂತಾರೆ. ತನಿಖೆ ವೇಳೆ ಸಚಿವರು, ಶಾಸಕರ ಮೆರಲೆ ಆರೋಪಗಳು ಬರೋದು ಸಹಜ. ಅವರ ತಪ್ಪು ಇದೆ ಅಂತ ತನಿಖೆಯಲ್ಲಿ ಗೊತ್ತಾದರೆ ಅದರ ಬಗ್ಗೆನೂ ತನಿಖೆ ಮಾಡ್ತೇವೆ ಎಂದರು.