ಮೈಸೂರು: ವರ್ಗಾವಣೆಯಾದ 7 ತಿಂಗಳಿಗೇ ಶಾಸಕರು ಮತ್ತು ಅವರ ಪುತ್ರನ ಒತ್ತಡಕ್ಕೆ ಡೆತ್ನೋಟ್ ಬರೆದು ಅಥವಾ ಅವರ ಪತ್ನಿಗೆ ವಿಚಾರ ತಿಳಿಸಿ ಸಾವನ್ನಪ್ಪುತ್ತಾರೆ ಎಂದರೆ ನಿಮ್ಮ ಆಡಳಿತ ವ್ಯವಸ್ಥೆ ಎಲ್ಲಿದೆ?. ಗೃಹ ಮಂತ್ರಿಗಳೇ, ನಿಮಗೆ ಸಂವಿಧಾನದ ಮೇಲೆ ಗೌರವ ಇದ್ದರೆ ಕೊಡಲೇ ಶಾಸಕರನ್ನೇಕೆ ಅರೆಸ್ಟ್ ಮಾಡಿಸಲಿಲ್ಲ ಎಂದು ಜೆಡಿಎಸ್ ಮುಖಂಡ ಹಾಗೂ ಮಾಜಿ ಸಚಿವ ಸಾ.ರಾ.ಮಹೇಶ್ ಪ್ರಶ್ನಿಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಜಿ ಏನು ಮಾಡುತ್ತಿದ್ದೀರಿ?. ಬೆಳಗ್ಗೆಯಿಂದ ರಾತ್ರಿಯವರೆಗೂ 24 ಗಂಟೆ ಕೆಲಸ ಮಾಡುವ ನಿಮ್ಮ ನೌಕರರಿಗೆ ರಕ್ಷಣೆ ಕೊಡದೇ ಇದ್ದರೆ, ನೀವು ಸಾರ್ವಜನಿಕರಿಗೇನು ರಕ್ಷಣೆ ಕೊಡುತ್ತೀರಿ?. ಕೊಡಲೇ ಆ ಶಾಸಕರನ್ನು ಪಕ್ಷದಿಂದ ಅಮಾನತು ಮಾಡಿ, ಅರೆಸ್ಟ್ ಮಾಡಿಸಿ. ಬಳಿಕ ಆರೋಪ ಸಾಬೀತಾದರೆ ಉಚ್ಛಾಟನೆ ಮಾಡಿ. ಆ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತಿದ್ದೇನೆ ಎಂದು ಹೇಳಿದರು.
ಗೃಹ ಸಚಿವರೊಬ್ಬರು ಪ್ರಾಮಾಣಿಕರಾಗಿದ್ದರೆ ಮಾತ್ರ ಸಾಲದು. ಅವರ ಸುತ್ತಲೂ ಇರುವವರು ಪ್ರಾಮಾಣಿಕರಾಗಿರಬೇಕು. ಈ ಹಿಂದೆ ಯಾವುದೇ ಸರ್ಕಾರ ಪೊಲೀಸ್ ಇಲಾಖೆಯನ್ನು ಇಷ್ಟೊಂದು ಕೀಳು ಮಟ್ಟದಲ್ಲಿ ನಡೆಸಿಕೊಂಡಿರಲಿಲ್ಲ. ಈ ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಎಸ್ಐಟಿ ಈಗ ಹೆಸರನ್ನು ಬದಲಾಯಿಸಬೇಕು. ಅದಕ್ಕೆ ಎಸ್ಎಸ್ಎಸ್ಐಟಿ ಎಂಬ ಹೆಸರು ಸೂಕ್ತ. ಎಸ್ಎಸ್ಎಸ್ಐಟಿ ಎಂದರೆ ಸಿದ್ದರಾಮಯ್ಯ, ಶಿವಕುಮಾರ್ ವಿಶೇಷ ತನಿಖಾ ಸಂಸ್ಥೆ ಎಂದು ವ್ಯಂಗ್ಯವಾಡಿದರು.
ಸಚಿವ ಜಮೀರ್ ಹೇಳಿಕೆಗೆ ತಿರುಗೇಟು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಪ್ಯಾಂಟ್ ಒಳಗೆ ಖಾಕಿ ಚಡ್ಡಿ ಇದೆ ಎಂಬ ಸಚಿವ ಜಮೀರ್ ಹೇಳಿಕೆಗೆ ಪ್ರತಿಕ್ರಿಯಿಸಿ, 2006ರಲ್ಲಿ ಬಸ್ ಓಡಿಸಿಕೊಂಡು ಬಂದ ಜಮೀರ್ ಅವರನ್ನು ಶಾಸಕ, ಸಚಿವರನ್ನಾಗಿ ಮಾಡಿದ್ದು ದೇವೇಗೌಡರು, ಕುಮಾರಸ್ವಾಮಿ ಅಲ್ವೇ?. ಅವಾಗ ಕುಮಾರಸ್ವಾಮಿ ಯಾವ ಚಡ್ಡಿ ಹಾಕಿದ್ದರು ಎಂದು ಗೊತ್ತಿಲ್ವೇ?. ನೀವು ಈಗ ಮಂತ್ರಿಯಾಗಿದ್ದೀರಿ, ಇನ್ನೂ ಯಾಕೆ ಈ ರೀತಿ ಹೇಳಿಕೆಗಳನ್ನು ಕೊಟ್ಟು ಯಾರನ್ನು ಓಲೈಕೆ ಮಾಡಲು ಪ್ರಯತ್ನ ಮಾಡುತ್ತಿದ್ದೀರಿ? ಎಂದು ತಿರುಗೇಟು ನೀಡಿದರು.
ಹೆಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಇಬ್ಬರ ನಡುವೆ ವೈಯುಕ್ತಿಕ ಮಾತಿನ ಸಮರದ ಬಗ್ಗೆ ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ್ ಸಿಎಂ ಆಗುವ ಬಗ್ಗೆ ಹೈಕಮಾಂಡ್ನಲ್ಲಿ ಯಾವ ತೀರ್ಮಾನ ಆಗಿದೆಯೋ ಗೊತ್ತಿಲ್ಲ. ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಎಂದು 136 ಸೀಟ್ ನೀಡಿದ್ದಾರೆ. ನೀವು ಸಿಎಂ ಆದರೆ ಸಂತೋಷ. ಅದನ್ನು ಬಿಟ್ಟು ಹೆಚ್.ಡಿ.ದೇವೇಗೌಡ ಕುಟುಂಬದ ಮೇಲೆ ವೈಯಕ್ತಿಕ ದ್ವೇಷ ಯಾಕೆ?. ಕೂಡಲೇ ಇಬ್ಬರು ವೈಯಕ್ತಿಕ ವಿಚಾರವಾಗಿ ಬಹಿರಂಗ ಚರ್ಚೆ ಮಾಡಬೇಡಿ ಎಂದು ಮನವಿ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಮುಡಾ: ಸಿದ್ದರಾಮಯ್ಯನವರ ವರ್ಚಸ್ಸು ಕುಗ್ಗಿಸುವ ಹುನ್ನಾರ- ಲಕ್ಷ್ಮಣ ಸವದಿ - Laxman Savadi