ಹಾವೇರಿ : ಜಿಲ್ಲೆಯ ಅಜಾತ ಶತ್ರು ಎಂದೇ ಖ್ಯಾತಿ ಪಡೆದಿದ್ದ ಮಾಜಿ ಸಚಿವ ಮನೋಹರ್ ತಹಶಿಲ್ದಾರ್ ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಇಂದು ಅವರ ಪಾರ್ಥೀವ ಶರೀರವನ್ನು ರಾಜಕೀಯ ಕರ್ಮ ಭೂಮಿ ಹಾನಗಲ್ಗೆ ತರಲಾಯಿತು. ಹಾನಗಲ್ ಪಟ್ಟಣದ ಕುಮಾರೇಶ್ವರ ಮಹಾವಿದ್ಯಾಲಯದ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಗಣ್ಯರು, ಅಭಿಮಾನಿಗಳು ಹಿರಿಯ ರಾಜಕಾರಣಿ ಮನೋಹರ್ ತಹಶಿಲ್ದಾರ್ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ಸಂಸದ ಬಸವರಾಜ ಬೊಮ್ಮಾಯಿ, ಎಂಎಲ್ಸಿ ಸಲೀಂ ಅಹ್ಮದ್ ಸೇರಿದಂತೆ ಹಲವು ರಾಜಕಾರಣಿಗಳು, ಗಣ್ಯರು, ಮಠಾಧೀಶರು ಮನೋಹರ್ ಅಂತಿಮ ದರ್ಶನ ಪಡೆದರು. ಇದೇ ವೇಳೆ ಮನೋಹರ್ ತಹಶಿಲ್ದಾರ್ ನೆನೆದು ಬಸವರಾಜ ಬೊಮ್ಮಾಯಿ ಭಾವುಕರಾದರು.
ಆರೋಗ್ಯ ವಿಚಾರಿಸಿ ಬಂದಿದ್ದೆ : ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಕಳೆದ ಲೋಕಸಭಾ ಚುನಾವಣೆ ವೇಳೆ ನನ್ನ ಪರ ಪ್ರಚಾರ ಮಾಡಿದ್ರು. ಅವರೊಬ್ಬ ಅಜಾತ ಶತ್ರು. ಯಾರೊಂದಿಗೂ ವೈಯಕ್ತಿಕ ದ್ವೇಷ ಇಟ್ಟುಕೊಂಡಿರಲಿಲ್ಲ. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಕೆಲ ದಿನಗಳ ಹಿಂದೆ ಭೇಟಿಯಾಗಿ ಆರೋಗ್ಯ ವಿಚಾರಿಸಿ ಬಂದಿದ್ದೆ. ತಮ್ಮ ಪುತ್ರ ಭರತ್ ಬೊಮ್ಮಾಯಿ ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿರೋದಾಗಿ ಹೇಳಿದಾಗ ಮನಸಾರೆ ಹಾರೈಸಿದ್ದರು. ಅವರು ನಮ್ಮನ್ನಗಲಿದ್ದಾರೆ ಎಂದು ಭಾವುಕರಾದರು.
ಗ್ರಾಮದ ತೋಟದಲ್ಲಿ ಅಂತ್ಯಕ್ರಿಯೆ : ಹಾನಗಲ್ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಅಬಕಾರಿ ಸಚಿವರಾಗಿ, ಉಪಸಭಾಪತಿಯಾಗಿ ಮತ್ತು ಮುಜರಾಯಿ ಸಚಿವರಾಗಿ ಕೆಲಸ ಮಾಡಿದ್ದರು. 2018ರಲ್ಲಿ ಟಿಕೆಟ್ ಸಿಗದ ಕಾರಣ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರ್ಪಡೆಯಾದರು. ನಂತರ ಲೋಕಸಭಾ ಅವಧಿಯಲ್ಲಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದರು. ಸರಳ ಸಜ್ಜನ ರಾಜಕಾರಣಿ ತೀವ್ರ ಅನಾರೋಗ್ಯದಿಂದ ವಿಧಿವಶರಾಗಿದ್ದು, ನಾಳೆ ಹಾನಗಲ್ ತಾ ಅಕ್ಕಿವಳ್ಳಿ ಗ್ರಾಮದ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಇದನ್ನೂ ಓದಿ : ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ವಿಧಿವಶ