ಬೆಂಗಳೂರು: "ಹಳ್ಳಿಗಳಲ್ಲಿ ರೈತರು ಕೃಷಿಯನ್ನು ತೂರೆದು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ, ಆತ್ಮಹತ್ಯೆಗಳ ಸರಣಿ ಹೆಚ್ಚುತ್ತಿದೆ, ಬರಗಾಲ ಕಾಡುತ್ತಿದೆ, ರೈತರ ಮಕ್ಕಳನ್ನು ಮದುವೆಯಾಗಲು ಹೆಣ್ಣುಮಕ್ಕಳು ಒಪ್ಪುತ್ತಿಲ್ಲ, ಕೃಷಿ ದುರ್ಬಲವಾಗುತ್ತಿದೆ. ಈ ಎಲ್ಲ ಸಮಸ್ಯೆಗಳನ್ನು ಪರಿಗಣಿಸಿ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು. ಕಾಂಗ್ರೆಸ್ ಸರ್ಕಾರವೇ ಇರುವ ತೆಲಂಗಾಣದಲ್ಲಿ ಮನ್ನಾ ಮಾಡಿದ ರೀತಿಯಲ್ಲಿ ಇಲ್ಲಿ ಕೂಡ ಆಗಬೇಕು" ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.
ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಬೆಂಗಳೂರು ಚಲೋ ಮೂಲಕ ಆಗಮಿಸಿದ ಸಾವಿರಾರು ರೈತರು ಫ್ರೀಡಂ ಪಾರ್ಕ್ ಉದ್ಯಾನವನದಲ್ಲಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು. ಈ ವೇಳೆ ಕುರುಬೂರು ಶಾಂತಕುಮಾರ್ ಮಾತನಾಡಿ, "ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜ್ಯಕ್ಕೆ ಬಿಡುಗಡೆಯಾಗಬೇಕಾದ ಅನುದಾನದ ವಿಚಾರದಲ್ಲಿ ಕೆಸರೆರಚಾಟ ಮಾಡುತ್ತಿವೆ. ರೈತರ ಬಗ್ಗೆ ಮೂಸಳೆ ಕಣ್ಣೀರು ಸುರಿಸುತ್ತಿವೆ. ಕಳೆದ ಹತ್ತು ವರ್ಷದಲ್ಲಿ ಕೃಷಿ ಕ್ಷೇತ್ರಕ್ಕೆ ಬಿಡುಗಡೆಯಾಗಿರುವ ಅನುದಾನ, ಖರ್ಚು ಮಾಡಿರುವ ಅನುದಾನ ಎಷ್ಟು ಎಂದು ಎರಡು ಸರ್ಕಾರಗಳು ಶ್ವೇತಪತ್ರ ಬಿಡುಗಡೆ ಮಾಡಬೇಕು. ಆಗ ಇವರ ನಿಜ ಬಣ್ಣ ಬಯಲಾಗುತ್ತದೆ. ರೈತರಿಗೆ ಕನಿಕರ ಬೇಕಾಗಿಲ್ಲ, ನೈಜ ಪರಿಹಾರ ಬೇಕು" ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಸಚಿವ ಡಿ ಸುಧಾಕರ್ ಆಗಮಿಸಿ ಪ್ರತಿಭಟನಾಕಾರರ ಒತ್ತಾಯ ಪತ್ರ ಸ್ವೀಕರಿಸಿ ಮಾತನಾಡಿ, "ಮುಖ್ಯಮಂತ್ರಿಗಳು ದೆಹಲಿಗೆ ಹೋಗಿದ್ದಾರೆ. ನಾಳೆ ದೆಹಲಿಯಲ್ಲಿ ಈ ಒತ್ತಾಯಗಳ ವಿಚಾರವನ್ನು ಅವರ ಗಮನಕ್ಕೆ ತರುತ್ತೇನೆ. ಸಮಯಾವಕಾಶ ಸಿಕ್ಕರೆ ಮುಖಂಡರನ್ನು ಆಹ್ವಾನಿಸಿ ಚರ್ಚಿಸಲಾಗುವುದು" ಎಂದರು.
ಮತ್ತೊಂದೆಡೆ, ಇದೇ ವೇಳೆ ಫ್ರೀಡಂ ಪಾರ್ಕ್ನಲ್ಲಿ ಗ್ರೀನ್ ಬರ್ಡ್ಸ್ ಠೇವಣಿ ವಂಚಿತ ಸಾವಿರಾರು ಮಹಿಳೆಯರು ಪ್ರತಿಭಟನೆ ನಡೆಸಿದರು. ಈ ಕುರಿತು ಮಾತನಾಡಿದ ಸಚಿವರು, "ಗ್ರೀನ್ ಬರ್ಡ್ಸ್ ಠೇವಣಿದಾರರ ಹಣ ಕೊಡಿಸಲು ಎರಡು ದಿನದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಚರ್ಚಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಂದ ಸೂಚನೆ ಕೊಡಲಾಗುವುದು" ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಮುಖಂಡ ನಾರಾಯಣ ರೆಡ್ಡಿ, ಹತ್ತಳ್ಳಿ ದೇವರಾಜ್, ಬರಡನ್ಪುರ ನಾಗರಾಜ್, ಜಿ.ವಿ ಲಕ್ಷ್ಮೀದೇವಿ, ಕಿರಗಸೂರ ಶಂಕರ, ಗುರುಸಿದ್ದಪ್ಪ, ದೇವ ಕುಮಾರ್, ಪರಶುರಾಮ್, ರವಿಕುಮಾರ್, ಧರ್ಮರಾಜ್, ರಮೇಶ್, ರೇವಣ್ಣ ಇನ್ನಿತರರು ಇದ್ದರು.
ಇದನ್ನೂ ಓದಿ: ಹಾಲಿಗೆ ಪ್ರೋತ್ಸಾಹ ಧನ ಬಿಡುಗಡೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಹಸುಗಳೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಯತ್ನ