ಮಂಡ್ಯ: ಲೋಕಸಭಾ ಚುನಾವಣೆಗೆ ಇನ್ನೇನೂ ಕೆಲವು ದಿನಗಳು ಬಾಕಿ ಇವೆ. ಎಲ್ಲಾ ಪಕ್ಷಗಳು ಚುನಾವಣಾ ತಯಾರಿ ಮಾಡಿಕೊಂಡಿವೆ. ಬಿಜೆಪಿ ಈಗಾಗಲೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ರೆ, ಕಾಂಗ್ರೆಸ್ ಇದುವರೆಗೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ. ಟಿಕೆಟ್ ಘೋಷಣೆಗೂ ಮೊದಲೇ ಸಕ್ಕರೆನಗರಿ ಮಂಡ್ಯದಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಗಂಭೀರ ಆರೋಪ ಸಹ ಕೇಳಿ ಬಂದಿದೆ.
ಹೌದು, ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಚುನಾವಣಾ ಕಾವು ಈಗಾಗಲೇ ರಂಗು ಪಡೆದಿದೆ. ಟಿಕೆಟ್ ಘೋಷಣೆಗೂ ಮೊದಲೇ ಕಾಂಗ್ರೆಸ್ನ ಸಂಭಾವ್ಯ ಅಭ್ಯರ್ಥಿ ವೆಂಕಟರಮಣೇಗೌಡ ಅಲಿಯಾಸ್ ಸ್ಟಾರ್ ಚಂದ್ರು ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ಪ್ರಚಾರ ಆರಂಭಿಸಿದ್ದಾರೆ. ಮಂಡ್ಯ ಜಿಲ್ಲಾ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಟಿಕೆಟ್ ಸಿಗದೆ ಇದ್ದಿದಕ್ಕೆ ಹಾಗೂ ಸ್ಥಳೀಯರ ಜೊತೆ ಚರ್ಚಿಸದೇ ಸ್ಟಾರ್ ಚಂದ್ರು ಅವರನ್ನು ಸಂಭಾವ್ಯ ಅಭ್ಯರ್ಥಿ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಡಾ.ಹೆಚ್.ಎನ್. ರವೀಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕೆಲ ದಿನಗಳ ಹಿಂದೆಯೇ ರವೀಂದ್ರ ಅವರು ಕೆಪಿಸಿಸಿ ರಾಜ್ಯಾಧ್ಯಕ್ಷರು ಹಾಗೂ ಸಿಎಂ ಅವರಿಗೂ ರಾಜೀನಾಮೆ ಪತ್ರ ಬರೆದಿದ್ದಾರೆ. ಆದರೆ ಆ ರಾಜೀನಾಮೆಯನ್ನು ಕೆಪಿಸಿಸಿ ರಾಜ್ಯಾಧ್ಯಕ್ಷರು ಅಂಗೀಕರಿಸಿಲ್ಲ. ಆದ್ದರಿಂದ ಮತ್ತೆ ಸುದ್ದಿಗೋಷ್ಠಿ ನಡೆಸಿ, ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ. ರಾಜೀನಾಮೆ ಸಲ್ಲಿಸಿರುವುದು ಮಾತ್ರವಲ್ಲದೆ ರವೀಂದ್ರ ಅವರು ಪಕ್ಷದ ವಿರುದ್ಧವೇ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
"ಟಿಕೆಟ್ ಪಡೆಯಲು, ವ್ಯಕ್ತಿಯ ವ್ಯಕ್ತಿತ್ವ, ಜನರೊಂದಿಗಿನ ಸಂಬಂಧ, ದೂರದರ್ಶಿತ್ವ ಮುಖ್ಯವಲ್ಲ. ಟಿಕೆಟ್ ಪಡೆಯಲು ದುಡ್ಡೇ ಮಾನದಂಡ. ದುಡ್ಡು ಇದ್ದವರು ಗೆದ್ದೆ ಗೆಲ್ಲುತ್ತಾರೆ ಎಂದು ಅಂದುಕೊಂಡಿದ್ದಾರೆ. ಆದರೆ ಇದನ್ನು ಜಿಲ್ಲೆಯ ಜನ ಒಪ್ಪುವುದಿಲ್ಲ" ಎಂದು ಪಕ್ಷದ ವಿರುದ್ಧವೇ ಗುಡುಗಿದ್ದಾರೆ.
ಕಾಂಗ್ರೆಸ್ ವಿರುದ್ಧ ಗುಡುಗಿದ ರೆಬಲ್ ಲೇಡಿ: ಅಂದಹಾಗೆ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಇದುವರೆಗೂ ಘೋಷಣೆ ಆಗಿಲ್ಲ. ಆದರೆ ಮಂಡ್ಯ ಕಾಂಗ್ರೆಸ್ ಟಿಕೆಟ್ ಸ್ಟಾರ್ ಚಂದ್ರು ಅವರಿಗೆ ಫಿಕ್ಸ್ ಎಂದು ಹೇಳಲಾಗುತ್ತಿದೆ. ಹೀಗಾಗಿ ಸ್ಟಾರ್ ಚಂದ್ರು ಜಿಲ್ಲೆಯಲ್ಲಿ ಪ್ರಚಾರವನ್ನು ಕೂಡ ಆರಂಭಿಸಿದ್ದಾರೆ. ಇದೇ ವಿಚಾರವಾಗಿಯೇ ಡಾ.ರವೀಂದ್ರ ರಾಜೀನಾಮೆ ಸಹ ನೀಡಿದ್ದಾರೆ. ಇದೀಗ ರವೀಂದ್ರ ಅವರ ಹೇಳಿಕೆಗೆ ಧ್ವನಿಗೂಡಿಸಿರೋ ಮಂಡ್ಯ ಸಂಸದೆ ಸುಮಲತಾ ಅಂಬರೀಶ್, "ಕಾಂಗ್ರೆಸ್ನಲ್ಲಿ ಟಿಕೆಟ್ಗಾಗಿ ದುಡ್ಡು ಪಡೆಯುವ ಸಂಸ್ಕೃತಿ ಇದೆ. ಪಕ್ಷಕ್ಕೆ ಕನೆಕ್ಷನ್ ಇಲ್ಲದವರನ್ನು ಅಭ್ಯರ್ಥಿ ಮಾಡಿದ್ದಾರೆ. ಸರ್ಕಾರಿ ಹಣ ಬಳಸಿ ನಿಮ್ಮ ಅಭ್ಯರ್ಥಿ ಪರಿಚಯಿಸುತ್ತೀರಾ? ಹಾಗಾದರೆ ನೀವು ಹೇಗೆ ಚುನಾವಣೆ ಮಾಡುತ್ತೀರಾ? ಮಂಡ್ಯ ಜನ ದಡ್ಡರಲ್ಲ. ದುಡ್ಡಿನಿಂದ ಮಂಡ್ಯದ ಜನರನ್ನು ಕೊಂಡುಕೊಳ್ಳಲು ಆಗಲ್ಲ" ಎಂದಿದ್ದಾರೆ.
ಇನ್ನು ಡಾ.ರವೀಂದ್ರ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರೋ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ, ನಾವೇ ಹಾರ, ಪಟಾಕಿ ಸಿಡಿಸಿ ಸ್ವಾಗತ ಮಾಡಿದ್ದೇವೆ. ಇದು ಯಾರ ದುಡ್ಡು. ಕಾಂಗ್ರೆಸ್ ಪಕ್ಷ ಎರಡೂ ಬಾರಿ ಟಿಕೆಟ್ ಕೊಟ್ಟಿದೆ. ಕಾಂಗ್ರೆಸ್ ಪಕ್ಷ ಯಾವತ್ತೂ ದುಡ್ಡು ಕೇಳಿಲ್ಲ. ದುಡ್ಡು ಇಸ್ಕೋಂಡೂ ಇಲ್ಲ. ಸ್ಟಾರ್ ಚಂದ್ರು ಅವರು ರಾಜಕೀಯ ಹಿನ್ನೆಲೆ ಉಳ್ಳವರು. ಅಷ್ಟೇ ಅಲ್ಲದೆ ಮಂಡ್ಯ ಜಿಲ್ಲೆಯವರು" ಎಂದು ತಿರುಗೇಟು ನೀಡಿದ್ದಾರೆ.
ಸಂತೋಷ್ ಲಾಡ್ ಪ್ರತಿಕ್ರಿಯೆ: ಇದೇ ಆರೋಪಕ್ಕೆ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಸಂತೋಷ್ ಲಾಡ್, "ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ರವೀಂದ್ರ ಅವರ ಹಣ ಕೊಟ್ಟರೆ ಟಿಕೆಟ್ ಕೊಡುವ ಆರೋಪ ಅವರ ವೈಯಕ್ತಿಕ ಅಭಿಪ್ರಾಯ. ನಮ್ಮ ಪಕ್ಷ ಮೊದಲೇ ಬಡವರ ಪಕ್ಷ, ಬಿಜೆಪಿಯವರದ್ದು ಕುಬೇರರ ಪಕ್ಷ. ಅವರ ಹತ್ತಿರ ಹಣವಿದೆ. ನಮ್ಮ ಹತ್ತಿರ ಎಲ್ಲಿದೆ ಹಣ" ಎಂದು ಸಚಿವ ಸಂತೋಷ ಲಾಡ್ ಪ್ರಶ್ನಿಸಿದರು.
ಮಾಧ್ಯಮದವರು ಪ್ರಶ್ನೆಗೆ ಉತ್ತರಿಸಿದ ಅವರು, "ನೂರು ಕೋಟಿ ಕೊಟ್ಟು ಟಿಕೆಟ್ ಪಡೆಯುವವರು ನಮ್ಮ ಪಕ್ಷದಲ್ಲಿ ಇಲ್ಲ. ನಮ್ಮಲ್ಲಿ ಇರುವವರೆಲ್ಲ ಬಡವರು. ಅಭ್ಯರ್ಥಿಯಾಗುವವರಿಂದ ಹಣ ಪಡೆದುಕೊಳ್ಳುತ್ತೇವೆ ಎಂದಿದ್ದಾರೆ. ಆ ತರಹ ಏನೂ ಇಲ್ಲ, ಆ ಸಂಸ್ಕೃತಿ ನಮ್ಮ ಪಕ್ಷದಲ್ಲಿ ಇಲ್ಲ" ಎಂದರು.
ಒಟ್ಟಾರೆ ಟಿಕೆಟ್ ಅಧಿಕೃತ ಘೋಷಣೆಗೂ ಮೊದಲೇ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಈ ಡ್ಯಾಮೇಜ್ ಕಂಟ್ರೋಲ್ ಅನ್ನು ಕಾಂಗ್ರೆಸ್ ಯಾವ ರೀತಿ ಸರಿಪಡಿಸುತ್ತೆ ಕಾದು ನೋಡಬೇಕು.
ಇದನ್ನೂ ಓದಿ: ಮಂಡ್ಯ ನಾಯಕರ ಜೊತೆ ಸಭೆ ನಡೆಸಿದ ಹೆಚ್ ಡಿ ಕುಮಾರಸ್ವಾಮಿ