ಹುಬ್ಬಳ್ಳಿ (ಧಾರವಾಡ): ''ವಿದ್ಯಾರ್ಥಿಗಳು ಮಾದಕ ವಸ್ತುವಿನ ನಶೆಗೆ ಬೀಳಬೇಡಿ. ನಾನು ಪ್ರತೀ ಅಭಿಮಾನಿಯನ್ನು ಸ್ನೇಹಿತನಾಗಿ ಕಾಣುತ್ತೇನೆ. ಡ್ರಗ್ಸ್ನಿಂದ ನಾವು ದೂರವಿರಬೇಕು. 'ಶಬ್ಧವೇದಿ'ಯಲ್ಲಿ ಅಪ್ಪಾಜಿ ಅದ್ಬುತವಾಗಿ ಹೇಳಿದ್ದಾರೆ. ಹುಟ್ಟು ಅನ್ನೋದು ಒಂದು ಗಿಫ್ಟ್, ಅದನ್ನು ಕಾಪಾಡಿಕೊಳ್ಳಬೇಕು. ನಶೆಯನ್ನು ಓದುವುದರಲ್ಲಿ ಹುಡುಕಿ, ಗೆಳೆತನದಲ್ಲಿ ಹುಡುಕಿ, ಬೇರೆ ಎಲ್ಲದರಲ್ಲೂ ನಶೆ ಇದೆ'' ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ತಿಳಿಸಿದರು. ಖ್ಯಾತ ನಟ ಹಲವು ಕಾಲೇಜುಗಳಲ್ಲಿ ಜಾಗೃತಿ ಮೂಡಿಸಿ ಮಾತನಾಡಿದರು. ಜೊತೆಗೆ ತಮ್ಮ ಭೈರತಿ ರಣಗಲ್ ಚಿತ್ರವನ್ನು ಪ್ರಚಾರ ಮಾಡಿದ್ರು.
ನಗರದ ಬಿವಿಬಿ ಕಾಲೇಜಿನಲ್ಲಿ ಮಾತನಾಡಿದ ಅವರು, ''ಮಾದಕ ವಸ್ತುಗಳಿಗೆ ದಾಸರಾದರೆ ಬದುಕು ಹಾಳಾಗುತ್ತದೆ. ಮಾದಕ ವಸ್ತು ಸರಬರಾಜು ಮಾಡುವವರನ್ನು ಪೊಲೀಸರಿಗೆ ಹಿಡಿದುಕೊಡಿ'' ಎಂದು ತಿಳಿಸಿದರು.
ಕೆಎಲ್ಇ ಕಾಲೇಜಿಗೆ ಬಂದಿದ್ದು ಖುಷಿ ಆಗ್ತಿದೆ. ನನಗೆ 62 ವರ್ಷ. ಇಲ್ಲಿಗೆ ಬಂದು ಉಲ್ಟಾ ಆಗಿದೆ. 26 ವರ್ಷ ಅನಿಸುತ್ತಿದೆ. ಭೈರತಿ ರಣಗಲ್ನಲ್ಲಿ ಒಳ್ಳೆತನಕ್ಕಾಗಿ ನಾಯಕ ಹೋರಾಡುತ್ತಾನೆ ಎಂದರು. ಇನ್ನು ಜಾಗೃತಿ ಅಭಿಯಾನದಲ್ಲಿ ಶಿವಣ್ಣ ಸಖತ್ ಸ್ಟೆಪ್ಸ್ ಹಾಕಿದ್ರು. ಟಗರು ಚಿತ್ರದ ಟಗರು ಬಂತು ಟಗರು ಹಾಡಿಗೆ ಕುಣಿದು ಕುಪ್ಪಳಿಸಿದರು. ಮುತ್ತಣ ಪೀಪಿ ಊದುವ ಹಾಡು ಹಾಡಿ ರಂಜಿಸಿದರು.
ಸಿದ್ದಾರೂಢ ಮಠಕ್ಕೆ ಭೇಟಿ ನೀಡಿದ ಶಿವಣ್ಣ: ಇದಕ್ಕೂ ಮುನ್ನ ಶಿವರಾಜ್ಕುಮಾರ್ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ ಉಭಯ ಶ್ರೀಗಳ ಗದ್ದುಗೆ ದರ್ಶನ ಪಡೆದುಕೊಂಡರು. ಬಳಿಕ ಮಾತನಾಡಿದ ಅವರು, ಹುಬ್ಬಳ್ಳಿಗೆ ಬಂದಾಗಲೆಲ್ಲಾ ಸಿದ್ದಾರೂಢ ಮಠಕ್ಕೆ ಭೇಟಿ ಕೊಡೋದು ಸಂಪ್ರದಾಯ. ತಂದೆಯವರ ಕಾಲದಿಂದಲೂ ಬೆಳೆದು ಬಂದಿರುವ ಪದ್ಧತಿ. ನಮ್ಮ ಅವ್ವ ಬೆಳೆದಿದ್ದು ಸಿದ್ಧಾರೂಢ ಮಠದಲ್ಲಿ. ಅದನ್ನು ನಾವು ಯಾವತ್ತೂ ಮರೆಯೋಕೆ ಆಗಲ್ಲ. ಹೀಗಾಗಿ ಬಂದಾಗಲೆಲ್ಲಾ ಸಿದ್ಧಾರೂಢ ಮಠಕ್ಕೆ ಹೋಗುತ್ತೇನೆ ಎಂದರು.
ವಿದ್ಯಾರ್ಥಿಗಳಲ್ಲಿ ಜಾಗೃತಿಯ ಅವಶ್ಯಕತೆ ಇದೆ; ಇನ್ನೂ ಮಾದಕ ವಸ್ತು ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿಯ ಅವಶ್ಯವಿದೆ. ಬದುಕು ಅಷ್ಟು ಸುಲಭವಾಗಿ ಸಿಗಲ್ಲ. ಅದೊಂದು ದೇವರ ಕೊಡುಗೆ. ಹಾಗಾಗಿ ನಾವದನ್ನು ಅಮೂಲ್ಯವಾಗಿ ಕಾಪಾಡಿಕೊಳ್ಳಬೇಕು. ಯಾವುದೋ ಒಂದು ವಸ್ತು ಸಿಗುತ್ತೆ ಅಂತಾ ಅದಕ್ಕೆ ದಾಸರಾಗಬಾರದು. ಆ ವಸ್ತುವಿಗೆ ಶರಣಾಗೋ ಬದಲು ಅದನ್ನು ತಳ್ಳುವುದೇ ಒಳ್ಳೆಯದು. ವಿದ್ಯಾರ್ಥಿ ಜೀವನದಲ್ಲಿ ಸ್ವಲ್ಪ ಹುಷಾರಾಗಿರಬೇಕು. ಇದನ್ನು ದಾಟಿದರೆ ಅವರು ಇತರರಿಗೆ ಮಾದರಿಯಾಗುತ್ತಾರೆ. ಯುವ ಸಮೂಹ ಮಾದಕ ವಸ್ತುವಿಗೆ ಬಲಿಯಾಗುವುದನ್ನು ತಡೆಯಬೇಕು. ಅದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದರು.
ಜೆಎಸ್ಎಸ್ ವಿದ್ಯಾಸಂಸ್ಥೆ ಮೈದಾನದಲ್ಲಿಯೂ ಮಾದಕ ವಸ್ತು ತ್ಯಜಿಸುವಂತೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಹು.ಧಾ ಪೊಲೀಸ್ ಆಯುಕ್ತ ಎನ್ ಶಶಿಕುಮಾರ ಈ ಜಾಗೃತಿ ಕೆಲಸ ಮಾಡುತ್ತಿದ್ದು, ಶಿವಣ್ಣ ಮೆರಗು ನೀಡಿದರು. ಮಾದಕ ವಸ್ತು ನಿರ್ಮೂಲನೆ ಬಗ್ಗೆ ಜಾಗೃತಿ ಮೂಡಿಸಲು ನಾನು ಬಂದಿರುವೆ. ಹು - ಧಾ ಪೊಲೀಸ್ ಆಯುಕ್ತರು ಕೇಳಿಕೊಂಡಿದ್ದರು. ಹೀಗಾಗಿ ನಾನೂ ಈ ಜಾಗೃತಿಯಲ್ಲಿ ಭಾಗಿಯಾಗಿದ್ದೇನೆ. ಇಂತಹ ಅಭಿಯಾನಗಳಿಗೆ ಬೆಂಬಲ ಕೊಡುವೆ ಎಂದರು.
ಇದನ್ನೂ ಓದಿ: Watch: ಮುಂಬೈನಲ್ಲಿ ಮಕ್ಕಳೊಂದಿಗೆ ಯಶ್-ರಾಧಿಕಾ; ಕೆಜಿಎಫ್ ಸ್ಟಾರ್ ಕಾಲಿಗೆ ಬಿದ್ದ ಅಭಿಮಾನಿ
ಮಾದಕ ವಸ್ತು ವಿರೋಧಿಗಾಗಿ ಜಾಥಾ ಮಾಡಬೇಕು. ಇಲ್ಲಿ ಯಾವುದೇ ಜಾಥಾ ಮಾಡಿದರೆ ನಾನು ಭಾಗಿಯಾಗುವೆ. ಇಂತಹ ಅಭಿಯಾನಗಳಿಗೆ ಸಿನಿಮಾ ನಟರು ಬರಬೇಕು. ಹೌದು, ಆದರೆ ಎಲ್ಲದಕ್ಕೂ ಸಿನಿಮಾ ದೂಷಿಸಿದರೇ ಹೇಗೆ? ಸಿನಿಮಾ ಕೇವಲ ಮನರಂಜನಾ ಮಾಧ್ಯಮ. ಸಿನಿಮಾದಲ್ಲಿಯೂ ಸಂದೇಶ ಕೊಡುತ್ತೇವೆ ಎಂದರು. ಇನ್ನೂ, ಭೈರತಿ ರಣಗಲ್‌ಗೆ ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ಇದೆ. ಒಳ್ಳೆ ಸಿನಿಮಾವನ್ನು ಜನರು ಬೆಂಬಲಿಸಿದ್ದಾರೆ. ಇತ್ತೀಚೆಗೆ ಚಿತ್ರಮಂದಿರಕ್ಕೆ ಜನ ಬರೋದು ಕಡಿಮೆಯಾಗಿತ್ತು. ಈಗ 3-4 ಸಿನಿಮಾಗಳಿಂದ ಪ್ರೇಕ್ಷಕರು ಬರುತ್ತಿದ್ದಾರೆ ಎಂದರು.
ಇದನ್ನೂ ಓದಿ: 'ನನ್ನನ್ನು ಗೋಮುಖ ವ್ಯಾಘ್ರ ಅನ್ನೋ ಮೋಕ್ಷಿತಾ ಎರಡು ತಲೆ ನಾಗರಹಾವು': ತ್ರಿವಿಕ್ರಮ್ ಆಕ್ರೋಶ
ಅವಳಿ ನಗರಕ್ಕೆ ಬಂದ ಕರುನಾಡ ಚಕ್ರವರ್ತಿಯನ್ನು ನೋಡಲು ವಿದ್ಯಾರ್ಥಿ ಸಮೂಹ ಕಿಕ್ಕಿರಿದು ತುಂಬಿತ್ತು. ವಿದ್ಯಾರ್ಥಿ ಸಮೂಹ ನೋಡಿ ಶಿವಣ್ಣ ಭೈರತಿ ರಣಗಲ್ ಡೈಲಾಗ್ ಹೊಡೆದರು. ಜೊತೆಗೆ ಕೆಲ ಹಾಡು ಹಾಡಿ ರಂಜಿಸಿದರು. ಹೀಗೆ, ಅವಳಿನಗರದಲ್ಲಿ ಭೈರತಿ ರಣಗಲ್ ಸಿನಿಮಾ ಪ್ರಮೋಷನ್ ಜೊತೆಗೆ ಮಾದಕ ವಸ್ತು ವಿರೋಧಿ ಅಭಿಯಾನಕ್ಕೆ ಸಾಥ್ ಕೊಟ್ಟರು.