ಬೆಂಗಳೂರು: ಸ್ಕೂಟರ್ಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಲ್ಲೇಶ್ವರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹರಿಶ್ಚಂದ್ರ ಘಾಟ್ ಬಳಿ ಇಂದು ಬೆಳಿಗ್ಗೆ 8.30ರ ಸುಮಾರಿಗೆ ನಡೆಯಿತು. ಕುಸುಮಿತಾ (21) ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ.
ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಕುಸುಮಿತಾ ಎಂದಿನಂತೆ ತಮ್ಮ ನಿವಾಸದಿಂದ ಕಾಲೇಜಿಗೆ ಸ್ಕೂಟರ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಬಿಎಂಟಿಸಿ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಕುಸುಮಿತಾ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಬಸ್ ಹರಿದು ಸ್ಥಳದಲ್ಲೇ ಸಾವಿಗೀಡಾದರು ಎಂದು ತಿಳಿದುಬಂದಿದೆ. ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಲ್ಲೇಶ್ವರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಬಗ್ಗೆ ಉತ್ತರ ವಿಭಾಗದ ಡಿಸಿಪಿ ಸಿರಿಗೌರಿ ಅವರು ಪ್ರತಿಕ್ರಿಯೆ ನೀಡಿದ್ದು, ''ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತದಲ್ಲಿ 20 ವರ್ಷದ ಯುವತಿ ಸಾವನ್ನಪ್ಪಿದ್ದಾಳೆ. ಜೈನ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಳು. ಇಂದು ಬೆಳಗ್ಗೆ ಬೆಳಗ್ಗೆ 8.30ರ ವೇಳೆ ದುರ್ಘಟನೆ ನಡೆದಿದೆ. ರಸ್ತೆ ಎಡಭಾಗದಲ್ಲಿ ಬರುತ್ತಿದ್ದ ಸ್ಕೂಟರ್ಗೆ ಟಚ್ ಆಗಿ ಬಸ್ ಕೆಳಗೆ ಬಿದ್ದಿದ್ದಾಳೆ. ಬಿದ್ದಿದ್ದ ಯುವತಿಯನ್ನ ಬಸ್ ಚಾಲಕ ನೋಡಿಲ್ಲ ಎಂದು ಹೇಳಲಾಗುತ್ತಿದೆ. ಮೇಲ್ನೋಟಕ್ಕೆ ಬಸ್ ಚಾಲಕನ ನಿರ್ಲಕ್ಷ್ಯ ಎಂದು ಕಂಡುಬಂದಿದೆ. ಚಾಲಕನ ವಿರುದ್ದ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ'' ಎಂದು ತಿಳಿಸಿದ್ದಾರೆ.
ಬಿಎಂಟಿಸಿ ಸ್ಪಷನೆ: ಈ ಬಗ್ಗೆ ಬಿಎಂಟಿಸಿ ವಿಡಿಯೋದೊಂದಿಗೆ ಸ್ಪಷ್ಟನೆ ನೀಡಿದೆ. 'ಬಸ್ ಸಂಖ್ಯೆ KA 57 F 3350ರಲ್ಲಿ ಅಳವಡಿಸಿದ್ದ ಮುಂಭಾಗ ಮತ್ತು ಹಿಂಭಾಗದ ಸಿಸಿ ಕ್ಯಾಮರಾಗಳ ವಿಡಿಯೋ ತುಣುಕುಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಶಿವಾಜಿನಗರದಿಂದ ಕಮಲಾನಗರಕ್ಕೆ ತೆರಳುವಾಗ ಗಾಯತ್ರಿನಗರದ ಬಳಿ ದ್ವಿಚಕ್ರ ವಾಹನ ಸವಾರರು ಬಸ್ನ್ನು ಎಡಭಾಗದಿಂದ ಓವರ್ ಟೇಕ್ ಮಾಡಲು ಯತ್ನಿಸಿದ್ದಾರೆ. ಆಗ ಎದುರುಬದಿಯಲ್ಲಿ ಆಟೋ ಇದ್ದ ಕಾರಣ ದ್ವಿಚಕ್ರ ವಾಹನವು ಸ್ಕಿಡ್ ಆಗಿ ಬಸ್ನ ಎಡಭಾಗದ ಹಿಂದಿನ ಚಕ್ರಕ್ಕೆ ಆಯತಪ್ಪಿ ಬಿದ್ದಿದೆ' ಎಂದು ಬಿಎಂಟಿಸಿ ತಿಳಿಸಿದೆ.
ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಡಿಕ್ಕಿ: ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ಕಳೆದ ತಿಂಗಳು ಮಾರತ್ತಹಳ್ಳಿಯ ವರ್ತೂರು ಮುಖ್ಯರಸ್ತೆಯಲ್ಲಿ ನಡೆದಿತ್ತು. ಇಳಂಗೋವನ್ ಸೆಂಕತ್ತವಲ್ ಘಟನೆಯಲ್ಲಿ ಸಾವಿಗೀಡರಾಗಿದ್ದಾರೆ. ಮೃತ ಇಳಂಗೋವನ್ ಅವರು ಕುಂದಲಹಳ್ಳಿ ಜಂಕ್ಷನ್ ಕಡೆಯಿಂದ ಬೆಳ್ಳಂದೂರು ಮಾರ್ಗವಾಗಿ ತೆರಳುತ್ತಿದ್ದರು. ಅದೇ ಮಾರ್ಗದಲ್ಲಿ ಬರುತ್ತಿದ್ದ ಬಿಎಂಟಿಸಿ ವೊಲ್ವೋ ಬಸ್, ದ್ವಿಚಕ್ರ ವಾಹನಕ್ಕೆ ಡಿಕ್ಕಿಹೊಡೆದಿತ್ತು. ಪರಿಣಾಮ ನೆಲಕ್ಕೆ ಬಿದ್ದ ಇಳಂಗೋವನ್ ತಲೆ ಹಾಗೂ ಮುಖದ ಭಾಗಕ್ಕೆ ಗಾಯಗಳಾಗಿದ್ದವು. ಗಾಯಗೊಂಡಿದ್ದ ಅವರನ್ನು ತಕ್ಷಣ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.
ಇದನ್ನೂ ಓದಿ: ಬಿಎಂಟಿಸಿ ಬಸ್ ಹರಿದು ಗೃಹಿಣಿ ಸಾವು: ಕೂದಲೆಳೆ ಅಂತರದಲ್ಲಿ ಪತಿ, ಮಗು ಪಾರು