ಬೆಂಗಳೂರು: ನಾಡಿನ ರೈತರಿಗೆ ಸಿಗಬೇಕಿದ್ದ ನ್ಯಾಯಯುತ ಪರಿಹಾರ ಕೊಡಿಸುವ ನಮ್ಮ ಹೋರಾಟಕ್ಕೆ ಸಿಕ್ಕ ಮೊದಲ ಹಂತದ ಜಯ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಬರ ಪರಿಹಾರ ಬಿಡುಗಡೆ ಸಂಬಂಧ ವಾರದೊಳಗೆ ತೀರ್ಮಾನಿಸುತ್ತೇವೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಇಂದು ಭರವಸೆ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬರ ಪರಿಹಾರಕ್ಕಾಗಿ ಮನವಿ ನೀಡಿ ಐದು ತಿಂಗಳು ಕಳೆದರೂ ಕೇಂದ್ರ ಯಾವುದೇ ನಿರ್ಣಯ ಕೈಗೊಳ್ಳದೆ, ನ್ಯಾಯಾಲಯದ ಮೆಟ್ಟಿಲೇರುವಂತಹ ಅನಿವಾರ್ಯತೆ ಸೃಷ್ಟಿಸಿತು ಎಂದರು.
ಇನ್ನು ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಕರ್ನಾಟಕದ ರೈತರ ಮೇಲಿನ ಮೋದಿ ಸರ್ಕಾರದ ದ್ವೇಷವನ್ನು ನಾವು ಸಹಿಸುವುದಿಲ್ಲ. ₹18,172 ಕೋಟಿ ಬರ ಪರಿಹಾರವನ್ನು ನೀಡಲು ನಿರಾಕರಿಸುತ್ತಿರುವ ಮೋದಿ ಸರ್ಕಾರದ ದುರುದ್ದೇಶ ನೋಡಿಕೊಂಡು ಸುಮ್ಮನಿರಲ್ಲ. ರಾಜ್ಯದ ರೈತರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಬರ ಪರಿಹಾರವನ್ನು ನಿರಾಕರಿಸುತ್ತಿರುವ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸುಳ್ಳುಗಳಿಗೆ ಸವಾಲು ಹಾಕಿದ್ದೇವೆ ಎಂದು ಟೀಕಿಸಿದ್ದಾರೆ.
ಕರ್ನಾಟಕದ ಪ್ರತಿಯೊಬ್ಬ ರೈತ ಬಂಧುಗಳಿಗೆ ನ್ಯಾಯ ಸಿಗುವಂತೆ ಮಾಡಲು ನಾವು ಸುಪ್ರೀಂ ಕೋರ್ಟ್‌ನಿಂದ ಹಿಡಿದು ಜನತಾ ನ್ಯಾಯಾಲಯದವರೆಗೆ ಎಲ್ಲ ನ್ಯಾಯಾಲಯಗಳ ಬಾಗಿಲು ತಟ್ಟಿದ್ದೇವೆ. ಒಬ್ಬ ರೈತನ ಮಗನಾಗಿ, ಜನಸೇವಕನಾಗಿ, ಕನ್ನಡಿಗರಿಗಾಗಿ ನಾನು ಮಾಡುತ್ತಿರುವ ಪ್ರತಿಜ್ಞೆ ಇದು. ನಮ್ಮ ರೈತ ಬಂಧುಗಳಿಗಾಗಿ ಹೋರಾಡುವ ಈ ಪ್ರತಿಜ್ಞೆ ಹಾಗೂ ಬದ್ಧತೆಗೆ ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯೇ ಸಾಕ್ಷಿ.
ಕರ್ನಾಟಕದ ರೈತರಿಗೆ ಬರಬೇಕಾದ ₹18,172 ಕೋಟಿ ಬರಪರಿಹಾರ ನಿಧಿಯನ್ನು ಉದ್ದೇಶಪೂರ್ವಕವಾಗಿ ತಡೆಹಿಡಿದಿದ್ದ ಮೋದಿ ಸರ್ಕಾರಕ್ಕೆ, ಒಂದು ವಾರದಲ್ಲಿ ಹಣ ಬಿಡುಗಡೆ ಮಾಡಲು ಸೂಚಿಸಿರುವ ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಎಂದು ಸಿಎಂ ತಿಳಿಸಿದ್ದಾರೆ.