ಬೆಂಗಳೂರು: ''ಮ್ಯುಟೇಶನ್, ಭೂ ಪರಿವರ್ತನೆ ಪ್ರಕರಣಗಳಲ್ಲಿ ಜನಸಾಮಾನ್ಯರಿಗೆ ಯಾವುದೇ ಕಿರುಕುಳ, ಅನಗತ್ಯ ವಿಳಂಬವಾಗದಂತೆ ಎಚ್ಚರಿಕೆ ವಹಿಸಿ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
''ನಮ್ಮ ಸರ್ಕಾರ ಬಂದಾಗ 10 ಸಾವಿರಕ್ಕೂ ಮಿಕ್ಕಿ ಅವಧಿ ಮೀರಿದ ಪ್ರಕರಣಗಳು ಇದ್ದವು. ಈಗ ಕೇವಲ 369 ಪ್ರಕರಣಗಳು ಮಾತ್ರ ತಹಶೀಲ್ದಾರ್ ನ್ಯಾಯಾಲಯಗಳಲ್ಲಿವೆ'' ಎಂದು ಸಿಎಂಗೆ ದಾಖಲೆ ಸಮೇತ ಕಂದಾಯ ಸಚಿವ ಕೃಷ್ಣಬೈರೇಗೌಡ ವಿವರಿಸಿದರು.
''ಡಿಸಿ ನ್ಯಾಯಾಲಯಗಳಲ್ಲಿ ಹತ್ತಾರು ವರ್ಷಗಳಿಂದ ಬಾಕಿ ಉಳಿದಿದ್ದ ಪ್ರಕರಣಗಳಲ್ಲಿ ಕೇವಲ ಒಂದು ವರ್ಷದಲ್ಲಿ ಶೇ.36ರಷ್ಟು ಪ್ರಕರಣಗಳ ವಿಲೇವಾರಿ ಮಾಡಲಾಗಿದೆ'' ಎಂದು ಹೇಳಿದರು.
ನಂತರ ಸಿಎಂ, ''ಬರೀ quantity ವಿಲೇವಾರಿ ಸಾಲದು, quality ವಿಲೇವಾರಿ ಆದರೆ ಮಾತ್ರ ಮೇಲ್ಮನವಿಗಳಿಗೆ ಬ್ರೇಕ್ ಬೀಳುತ್ತದೆ. ಈ ದಿಕ್ಕಲ್ಲಿ ಹೆಚ್ಚಿನ ಗಮನ ಹರಿಸಿ'' ಎಂದು ಸಚಿವ ಕೃಷ್ಣಬೈರೇಗೌಡರಿಗೆ ಸೂಚನೆ ನೀಡಿದರು.
''ಖಾತೆ ಬದಲಾವಣೆ ಪ್ರಕ್ರಿಯೆಯನ್ನು ಶೇ.65ರಷ್ಟು ಪ್ರಕರಣಗಳಲ್ಲಿ ಒಂದು ದಿನದ ಒಳಗಾಗಿ ಮಾಡಲಾಗುತ್ತಿರುವುದು ಒಳ್ಳೆಯ ಸಂಗತಿ. ಅಟೋ ಮ್ಯುಟೇಶನ್ ಮೂಲಕ ಇದು ಸಾಧ್ಯವಾಗಿದೆ. ಭೂ ಪರಿವರ್ತನೆ ಸಂಪೂರ್ಣ ಪ್ರಕ್ರಿಯೆಯನ್ನು ಒಂದು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು. ಮಾಸ್ಟರ್ ಪ್ಲಾನ್ ಆದ ಕಡೆ ಮತ್ತೆ ಭೂ ಪರಿವರ್ತನೆ ಅಗತ್ಯವಿಲ್ಲ ಎಂದು ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಈ ಕುರಿತು ಆದೇಶವನ್ನು ಆದಷ್ಟು ಬೇಗನೆ ಹೊರಡಿಸಿ'' ಎಂದು ಸಿಎಂ ಹೇಳಿದರು.
''ನಗರ ಪ್ರದೇಶಗಳಲ್ಲಿ ಮಾಸ್ಟರ್ ಪ್ಲಾನ್ ಕಾಲದಿಂದ ಕಾಲಕ್ಕೆ ನವೀಕರಿಸಬೇಕು. ಮ್ಯುಟೇಶನ್, ಭೂ ಪರಿವರ್ತನೆ ಪ್ರಕರಣಗಳಲ್ಲಿ ಜನಸಾಮಾನ್ಯರಿಗೆ ಯಾವುದೇ ಕಿರುಕುಳ, ಅನಗತ್ಯ ವಿಳಂಬವಾಗದಂತೆ ಎಚ್ಚರಿಕೆ ವಹಿಸಿ'' ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತಹಶೀಲ್ದಾರ್ ನ್ಯಾಯಾಲಯಗಳಲ್ಲಿವೆ 369 ಪ್ರಕರಣ : ''ಆದಷ್ಟು ಬೇಗನೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಬೇಕು. ಕಂದಾಯ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ಆದ್ಯತೆ ಮೇರೆಗೆ ವಿಲೇವಾರಿ ಮಾಡಬೇಕು. ವಿಳಂಬಕ್ಕೆ ಅವಕಾಶ ಇರಬಾರದು. ತಹಶೀಲ್ದಾರ್ ನ್ಯಾಯಾಲಯಗಳಲ್ಲಿ 3ತಿಂಗಳ ಒಳಗಾಗಿ ಪ್ರಕರಣಗಳ ವಿಲೇವಾರಿ ಮಾಡಬೇಕು. ನಮ್ಮ ಸರ್ಕಾರ ಬಂದಾಗ 10 ಸಾವಿರಕ್ಕೂ ಹೆಚ್ಚು ಅವಧಿ ಮೀರಿದ ಪ್ರಕರಣಗಳು ಇದ್ದವು. ಈಗ ಕೇವಲ 369 ಪ್ರಕರಣಗಳು ಮಾತ್ರ ತಹಶೀಲ್ದಾರ್ ನ್ಯಾಯಾಲಯಗಳಲ್ಲಿವೆ. ಪ್ರಕರಣಗಳ ವಿಲೇವಾರಿ ತ್ವರಿತಗೊಳಿಸುವ ಜತೆಗೆ ನ್ಯಾಯದಾನದ ಗುಣಮಟ್ಟ ಸಹ ಸುಧಾರಿಸಬೇಕು'' ಎಂದು ಹೇಳಿದರು.
ಕಂದಾಯ ನ್ಯಾಯಾಲಯಗಳಲ್ಲಿ ಸಮರೋಪಾದಿಯಲ್ಲಿ ಪ್ರಕರಣಗಳ ವಿಲೇವಾರಿಗೆ ಸಿಎಂ ಸಿದ್ದರಾಮಯ್ಯ ಖುಷ್ ಆಗಿದ್ದಾರೆ. ''10 ವರ್ಷ, 5 ವರ್ಷಕ್ಕೂ ಅಧಿಕ ಅವಧಿಯಿಂದ ಬಾಕಿ ಇದ್ದ ಮುಕ್ಕಾಲು ಭಾಗದಷ್ಟು ಪ್ರಕರಣಗಳಿಗೆ ಒಂದೂವರೆ ವರ್ಷದಲ್ಲಿ ಮುಕ್ತಿ ಸಿಕ್ಕಿದೆ. ತಹಶೀಲ್ದಾರ್, ಡಿಸಿ ಕೋರ್ಟ್ಗಳಲ್ಲಿ ಪ್ರಕರಣಗಳು ಸಮರೋಪಾದಿಯಲ್ಲಿ ವಿಲೇವಾರಿ ಆಗುತ್ತಿವೆ. ಆದರೆ ಉಪ ವಿಭಾಗಾಧಿಕಾರಿ ನ್ಯಾಯಾಲಯಗಳಲ್ಲಿ ವಿಲೇವಾರಿ ವೇಗ ಕಡಿಮೆ ಇದೆ'' ಎಂದು ತಾಂತ್ರಿಕ ಕಾರಣಗಳ ಸಮೇತ ಸಚಿವ ಕೃಷ್ಣಬೈರೇಗೌಡರು ಸಿಎಂಗೆ ವಿವರಿಸಿದರು.
''ಅದನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು. ಉಪವಿಭಾಗಾಧಿಕಾರಿ ನ್ಯಾಯಾಲಯಗಳ ಕಾರ್ಯವೈಖರಿ ಸುಧಾರಿಸಬೇಕು. ಈ ಬಗ್ಗೆ ಉಪ ವಿಭಾಗಾಧಿಕಾರಿಗಳಿಗೆ ಕೊನೆಯ ಎಚ್ಚರಿಕೆ ಕೊಡಿ'' ಎಂದು ಸಿಎಂ ಸೂಚಿಸಿದರು.
''ಜಿಲ್ಲಾಧಿಕಾರಿ ನ್ಯಾಯಾಲಯಗಳಲ್ಲಿ 9,947 ಪ್ರಕರಣಗಳು ಒಂದು ವರ್ಷಕ್ಕೂ ಅಧಿಕ ಅವಧಿಯಿಂದ ಬಾಕಿ ಇದ್ದವು. ಈಗ ಇದರ ಪ್ರಮಾಣ ಕೇವಲ 6 ಸಾವಿರಕ್ಕೆ ಇಳಿದಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಪ್ರಕರಣಗಳ ತ್ವರಿತ ವಿಲೇವಾರಿಗೆ 18 ವಿಶೇಷ ಉಪ ವಿಭಾಗಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜಮೀನು ಖಾತೆಗೆ ಆಧಾರ್ ಸೀಡಿಂಗ್ ಮಾಡಲಾಗುತ್ತಿದೆ'' ಎಂದು ಮಾಹಿತಿ ಒದಗಿಸಿದರು.
ನಿಗದಿತ ಅವಧಿಯೊಳಗೆ ಬಿ ಖಾತಾ ಪ್ರಕ್ರಿಯೆ ಪೂರ್ಣಗೊಳಿಸಿ : ''ರಾಜ್ಯದಲ್ಲಿ ಇದುವರೆಗೆ 2.22 ಕೋಟಿ ಖಾತೆಗಳಿಗೆ ಆಧಾರ ಸೀಡಿಂಗ್ ಮಾಡಲಾಗಿದ್ದು, ಇದರಿಂದ ನಕಲಿ ದಾಖಲೆ ಸೃಷ್ಟಿಸುವುದನ್ನು ತಡೆಯಲು ಸಾಧ್ಯವಾಗಿದೆ. ಭೂ ಪರಿವರ್ತನೆಯಾಗದೆ ವಾಣಿಜ್ಯ ಉದ್ದೇಶಗಳಿಗೆ ಜಮೀನು ಬಳಕೆ ಪ್ರಕರಣಗಳನ್ನು ಪತ್ತೆ ಹಚ್ಚಲು ಇದರಿಂದ ಸಾಧ್ಯವಾಗಿದೆ. ಅನಧಿಕೃತ ಬಡಾವಣೆಗಳಿಗೆ ಖಾತಾ ನೀಡುವುದನ್ನು ಸ್ಥಗಿತಗೊಳಿಸಲು ಈಗಾಗಲೇ ಸೂಚನೆ ನೀಡಿದ್ದೇವೆ. ಒಂದು ಅವಧಿಗೆ ಬಿ ಖಾತಾ ನೀಡುವ ಪ್ರಕ್ರಿಯೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ, ಇನ್ನು ಮುಂದೆ ಅನಧಿಕೃತ ಬಡಾವಣೆಗಳು ತಲೆ ಎತ್ತದಂತೆ ನೋಡಿಕೊಳ್ಳಬೇಕು'' ಎಂದು ಸೂಚನೆ ನೀಡಿದರು.
''ರಾಜ್ಯದಲ್ಲಿ ಹಲವು ಪ್ರಕರಣಗಳಲ್ಲಿ ಜಮೀನುಗಳ ಖಾತೆ ಇನ್ನೂ ನಿಧನ ಹೊಂದಿದವರ ಹೆಸರಿನಲ್ಲಿಯೇ ಇದೆ. ಪೌತಿ ಖಾತೆ ಅಭಿಯಾನದ ಮೂಲಕ ಮಾಲೀಕರ ಹೆಸರಿಗೆ ಜಮೀನು ಮಾಡುವ ನೋಂದಣಿ ಮಾಡುವ ಕಾರ್ಯವನ್ನು ತ್ವರಿತಗೊಳಿಸಬೇಕು'' ಎಂದು ಸಿಎಂ ನಿರ್ದೇಶನ ನೀಡಿದರು.