ಶಿರಸಿ (ಉತ್ತರ ಕನ್ನಡ): ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳು ಸೇರಿಕೊಂಡು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರ ಮೇಲೆ ಹಲ್ಲೆ ನಡೆಸಿದ ಕುರಿತು ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಸಿಸಿಟಿವಿ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಿರಸಿಯ ನೆಹರುನಗರದ ಮಹಮ್ಮದ್ ಶರೀಫ್ ಅಬ್ದುಲ್ ವಹಾಬ್ ಖಾನ್ ಮತ್ತು ಸರ್ಫರಾಜ ಅಬ್ದುಲ್ ಅಸ್ಲಾಂ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ. ಮಹಮ್ಮದ್ ಶರೀಫ್ ಅಬ್ದುಲ್ ವಹಾಬ್ ಖಾನ್ ತನ್ನ ಕುಟುಂಬದವರೊಂದಿಗೆ ಶಿರಸಿ ನಗರದ ಸಿಪಿ ಬಜಾರ್‌ನಲ್ಲಿರುವ ಸಾಗರ್ ಶೋರೂಮ್ ಅಂಗಡಿಗೆ ಬಂದು ಬಟ್ಟೆ ಖರೀದಿಸಿ ಹೋಗಿದ್ದರು. ಮನೆಗೆ ತೆರಳಿದ್ದ ಈತ ಮತ್ತೆ ಬಟ್ಟೆ ಅಂಗಡಿಗೆ ರಾತ್ರಿ 9 ಗಂಟೆಗೆ ಆಗಮಿಸಿ, ಸೀರೆ ಬದಲಾವಣೆ ಮಾಡಿಕೊಡಿ, ಸೀರೆಗಳು ಸರಿಯಿಲ್ಲ ಎಂದು ಹೇಳಿದ್ದಾನೆ. ಇದಕ್ಕೆ ಅಂಗಡಿ ಕೆಲಸಗಾರ ನಮ್ಮಲ್ಲಿರುವುದು ಇಷ್ಟೇ ಸೀರೆ. ಹೊರಗಡೆ ಹೋಗಿ ಎಂದು ಹೇಳಿದ್ದಾರೆ.
ಇದಕ್ಕೆ ಮಹಮ್ಮದ್ ಶರೀಫ್ ತನ್ನ ಗೆಳೆಯನಾದ ಸರ್ಫರಾಜ ಅಸ್ಲಾಂನನ್ನು ಕರೆದುಕೊಂಡು ಬಂದು ಅಂಗಡಿಯ ಬಲರಾಮ ಶೇನಾಧಿ ಗ್ಯಾಲೋ ಮತ್ತು ಪ್ರಕಾಶ ಬಲರಾಮ ಪಟೇಲ ಎಂಬುರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಕೇಳಿಬಂದಿದೆ. ನಂತರ ಸ್ಥಳದಲ್ಲಿದ್ದ ಇತರರು ಗಲಾಟೆ ಬಿಡಿಸಿ ಆರೋಪಿಗಳನ್ನು ಕಳಿಸಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಡ್ರಮ್ನಲ್ಲಿ ವೃದ್ಧೆ ಶವ ಪತ್ತೆ; ಕೈ - ಕಾಲು ಕತ್ತರಿಸಿ ಬರ್ಬರ ಹತ್ಯೆ