ಮಂಗಳೂರು: ಸುಡುಮದ್ದು ತಯಾರಿಸುವ ಘಟಕದಲ್ಲಿ ಸ್ಫೋಟ ಸಂಭವಿಸಿ, ಮೂವರು ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ಇಂದು ಸಂಜೆ ಈ ದುರಂತ ನಡೆದಿದೆ. ಮೂವರು ಸಾವನ್ನಪ್ಪಿದ್ದರೆ ಸ್ಫೋಟದ ತೀವ್ರತೆಗೆ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕೇಡಿ ಸಮೀಪದ ಗೊಳಿಯಂಗಡಿ ಬಳಿ ಕಲ್ಲಾಜೆ ಎಂಬಲ್ಲಿ ಬಶೀರ್ ಎಂಬವರ ಸುಡುಮದ್ದು ತಯಾರಿಕ ಘಟಕ ಇದೆ. ಭಾನುವಾರ ಸಂಜೆ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟಕ ತಯಾರಿಸುತ್ತಿರುವ ವೇಳೆ ಅಕಸ್ಮಿಕವಾಗಿ ಬೆಂಕಿಯ ಕಿಡಿ ತಗುಲಿದೆ. ಇದರಿಂದ ಸ್ಫೋಟ ಸಂಭವಿಸಿದ್ದು, ಇದರ ತೀವ್ರತೆಗೆ ದೇಹಗಳು ಛಿದ್ರಗೊಂಡು ದೂರಕ್ಕೆ ತೂರಿಬಿದ್ದಿವೆ.
ಅದಲ್ಲದೇ ಸ್ಫೋಟದ ಶಬ್ಧ ನಾಲ್ಕು ಕಿಲೋ ಮೀಟರ್ಗಿಂತಲೂ ದೂರದವರೆಗೆ ಕೇಳಿದ್ದು, ಸ್ಥಳೀಯರು ಭಯಗೊಂಡು ಬೆಚ್ಚಿಬಿದ್ದಿದ್ದಾರೆ. ಒಟ್ಟು ಒಂಬತ್ತು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯ ವಿಷಯ ತಿಳಿದು ಅಗ್ನಿ ಶಾಮಕ ಮತ್ತು ತುರ್ತು ಸೇವೆ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸಿದ್ದಾರೆ. ವೇಣೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬೆಳಗಾವಿ : ಗ್ಯಾಸ್ ಸಿಲಿಂಡರ್ ಸ್ಫೋಟ, ಐವರಿಗೆ ಗಂಭೀರ ಗಾಯ