ಬೆಂಗಳೂರು: ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ನಡೆಸುತ್ತಿವೆ. ಪಾದಯಾತ್ರೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ನ ಹಲವು ನಾಯಕರು ಪಾಲ್ಗೊಂಡಿದ್ದಾರೆ.
ಸಿದ್ದರಾಮಯ್ಯ ಮನೆಗೆ ಹೋಗುವುದು ಖಚಿತ: ಈಟಿವಿ ಭಾರತ ಜೊತೆಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ದೇಶದ ಜನರು ಕುಂತಲ್ಲಿ ಎದ್ದಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಪಾದಯಾತ್ರೆ ನಡೆಯುತ್ತಿದೆ. ಹೀಗಾಗಿ ಈ ಸರ್ಕಾರ ಉಳಿಯಲು ಸಾಧ್ಯನೇ ಇಲ್ಲ. ಅದಕ್ಕೆ ಪೂರಕವಾಗಿ ಹೋರಾಟವೆಲ್ಲ ನಡೆಯುತ್ತಿದೆ. ಇವೆಲ್ಲವೂ ಸಿದ್ದರಾಮಯ್ಯ ಅವರು ಮನೆಗೆ ಹೋಗಲು ಅನುಕೂಲ ಮಾಡಲಿದೆ. ರಾಜಭವನವನ್ನು ಯಾರು ದುರುಪಯೋಗ ಮಾಡುತ್ತಿಲ್ಲ. ಆ ತರ ಮಾಡುವ ಪ್ರಶ್ನೆಯೇ ಬರಲ್ಲ. ಅವರು ಮಾಡಿರುವ ಹಗರಣಗಳು ರಾಜ್ಯದ ಜನರಿಗೆ ಗೊತ್ತಾಗಿದೆ. ಆ ಆಧಾರದಲ್ಲಿ ಅವರು ರಾಜೀನಾಮೆ ಕೊಡುತ್ತಾರೆ ಎಂದು ಪುನರುಚ್ಚರಿಸಿದರು.
ಗೊಂದಲ ಎಲ್ಲವೂ ನಿವಾರಣೆಯಾಗಿದೆ: ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಜೆಡಿಎಸ್-ಬಿಜೆಪಿ ಗೊಂದಲಗಳೆಲ್ಲವೂ ನಿವಾರಣೆಯಾಗಿ ಒಟ್ಟಿಗೆ ನಾವು ಬರುತ್ತಿದ್ದೇವೆ. ಯಶಸ್ವಿಯಾಗಿ ಪಾದಯಾತ್ರೆ ನಡೆಯುತ್ತದೆ. ಸಿದ್ದರಾಮಯ್ಯ ರಾಜೀನಾಮೆ ನೀಡುವ ತನಕ ಹೋರಾಟ ನಡೆಯುತ್ತದೆ. ಒಗ್ಗಟ್ಟಾಗಿ ಈ ಹಗರಣದ ವಿರುದ್ಧ ಪಾದಯಾತ್ರೆ ಮಾಡುತ್ತೇವೆ ಎಂದರು.
ಜನಾಂದೋಲನ ಅನಿವಾರ್ಯ: ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಮಾತನಾಡಿ, ಹಗರಣದ ಬಗ್ಗೆ ಸಾಕಷ್ಟು ವಿಚಾರ ಹೇಳಿದ್ದೇವೆ. ಎಲ್ಲವೂ ಓಪನ್ ಸಿಕ್ರೇಟ್ ಆಗಿರುವುದನ್ನು ನಾವು ಕಂಡಿದ್ದೇವೆ. ಸದನದ ಒಳಗೆ, ಹೊರಗೆ ಎಲ್ಲವನ್ನೂ ನಾವು ಹೇಳಿದ್ದೇವೆ. ಆದರೆ ಲಜ್ಜೆಗೆಟ್ಟ ಸಿಎಂ, ಕಾಂಗ್ರೆಸ್ ಸರ್ಕಾರ ಅಧಿಕಾರದಿಂದ ಕೆಳಗಿಳಿಯಲು ತಯಾರಿಲ್ಲ. ಅದಕ್ಕಾಗಿ ಜನಾಂದೋಲನ ಅನಿವಾರ್ಯ ಎಂದು ಹೇಳಿದರು.
ಸಿಎಂ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ: ಎಂಎಲ್ಸಿ ಹೆಚ್. ವಿಶ್ವನಾಥ್ ಮಾತನಾಡಿ, ಪಾದಯಾತ್ರೆಯಲ್ಲಿ ಎರಡು ಪಕ್ಷ ಸೇರಿರುವುದರಿಂದ ಸಣ್ಣ ಗೊಂದಲ ಇದ್ದೇ ಇರುತ್ತೆ. ಅದನ್ನು ಸರಿಪಡಿಸಿಕೊಂಡು ಹೋಗುತ್ತಿದ್ದಾರೆ. ಮುಡಾ ಹಾಗೂ ಸರ್ಕಾರದ ಭ್ರಷ್ಟಾಚಾರದ ವಿಚಾರ ಇದಾಗಿದೆ. ರಾಜೀನಾಮೆ ಕೊಡಬೇಕು ಎಂಬುದು ನಮ್ಮ ಆಗ್ರಹ. ರಾಜೀನಾಮೆ ಕೊಡ್ತಾರ ಇಲ್ವ ನೋಡಬೇಕು. ರಾಜ್ಯಪಾಲರು ನೋಟಿಸ್ ಕೊಟ್ಟಿದ್ದಾರೆ. ಆ ನೋಟಿಸ್ಗೆ ಯಾವುದೇ ಗೌರವ ಇಲ್ಲದೇ ಮಾತನಾಡುತ್ತಿದ್ದಾರೆ. ಒಬ್ಬ ಸಾಂವಿಧಾನಿಕ ಮುಖ್ಯಸ್ಥ ನೀಡಿದ ನೋಟಿಸ್ಗೆ ಉತ್ತರ ಕೊಡದೇ ಸಿಎಂ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕುರ್ಚಿಗೆ ಅಂಟಿಕೊಂಡಿರುವುದು ಶೋಭೆ ತರಲ್ಲ: ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಮಾತನಾಡಿ, ಬಿಜೆಪಿ - ಜೆಡಿ ಎಸ್ ಒಟ್ಟಾಗಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿದ್ದೇವೆ. ಇಷ್ಟು ಭ್ರಷ್ಟ, ನಾಚಿಕೆಗೇಡಿನ ಸರ್ಕಾರವನ್ನು ರಾಜ್ಯದ ಇತಿಹಾಸದಲ್ಲೇ ನೋಡಿಲ್ಲ. ನೇರವಾಗಿ ಖಜಾನೆಯಿಂದ ಹಣ ವರ್ಗಾವಣೆ ಮಾಡಿ ಚುನಾವಣೆಗೆ ಬಳಸಿರುವ ದೊಡ್ಡ ಆರೋಪ ಸಿಎಂ ಸಿದ್ದರಾಮಯ್ಯರ ಮೇಲಿದೆ. ಆದರೂ ಕುರ್ಚಿಗೆ ಅಂಟಿಕೊಂಡಿರುವುದು ಅವರ ಹಿರಿತನದ ರಾಜಕೀಯಕ್ಕೆ ಶೋಭೆ ತರಲ್ಲ. ಬಿಜೆಪಿ - ಜೆಡಿಎಸ್ ಪಾದಯಾತ್ರೆ ಮೈಸೂರು ತಲುಪುವುದಕ್ಕೂ ಮುಂಚೆ ಸಿದ್ದರಾಮಯ್ಯ ರಾಜೀನಾಮೆ ಅನಿವಾರ್ಯ ಸೃಷ್ಟಿಯಾಗುವ ವಿಶ್ವಾಸ ಇದೆ. ಅವರು ರಾಜೀನಾಮೆ ಕೊಡಲೇ ಬೇಕು ಎಂದು ಒತ್ತಾಯಿಸಿದರು.
ಪಾದಯಾತ್ರೆ ಮುಗಿಯುವಷ್ಟರಲ್ಲಿ ರಾಜೀನಾಮೆ: ಬಿಜೆಪಿ ಶಾಸಕ ಭರತ್ ಶೆಟ್ಟಿ ಮಾತನಾಡಿ, ಪಾದಯಾತ್ರೆಯಲ್ಲಿ ಬಿಜೆಪಿ- ಜೆಡಿಎಸ್ ಮಧ್ಯೆ ಯಾವುದೇ ಗೊಂದಲ ಇಲ್ಲ. ಸಣ್ಣ ತಪ್ಪು ತಿಳುವಳಿಕೆಯಿಂದ ಗೊಂದಲ ಮೊದಲಿಗೆ ಇತ್ತು. ಈಗ ಅದು ಎಲ್ಲವೂ ಸರಿಯಾಗಿದೆ. ಬಿಜೆಪಿಯ ಎಲ್ಲಾ ನಾಯಕರು ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಹಾಗೂ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ನಾಯಕರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಪಾದಯಾತ್ರೆ ನಡೆಯಲು ಸಿದ್ದರಾಮಯ್ಯ ಅವರೇ ಕಾರಣ. ಅಧಿವೇಶನದಲ್ಲಿ ಮುಡಾ ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡಲಿಲ್ಲ. ಅವರೂ ಸ್ಪಷ್ಟನೆ ಕೊಟ್ಟಿಲ್ಲ. ಒಂದು ವೇಳೆ ಚರ್ಚೆ ನಡೆದರೆ ರಾಜ್ಯದ ಜನರಿಗೆ ಸತ್ಯ ಯಾವುದು, ಸುಳ್ಳು ಯಾವುದು ಎಂಬುದು ಗೊತ್ತಾಗುತ್ತಿತ್ತು. ಚರ್ಚೆಗೆ ಅವಕಾಶ ನೀಡದ ಕಾರಣ ಸರ್ಕಾರ ಮಾಡುತ್ತಿರುವ ಹಗರಣಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಕೆಲಸ ಮಾಡಿತ್ತಿದ್ದೇವೆ. ಪಾದಯಾತ್ರೆ ಮೈಸೂರಿಗೆ ತಲುಪುವ ಮೊದಲು ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿರುತ್ತಾರೆ ಎಂದರು.
ಜೆಡಿಎಸ್ ಮುಖಂಡರು ಸಕ್ರಿಯವಾಗಿ ಭಾಗಿ: ಮಾಜಿ ಸಚಿವ, ಜೆಡಿಎಸ್ ನಾಯಕ ಬಂಡೆಪ್ಪ ಕಾಶೆಂಪೂರ ಮಾತನಾಡಿ, ಜೆಡಿಎಸ್ನಲ್ಲಿ ಯಾವುದೇ ಗೊಂದಲ ಇಲ್ಲ. ಎರಡು ಪಕ್ಷಗಳ ಮಧ್ಯೆ ಉತ್ತಮ ಹೊಂದಾಣಿಕೆಯಾಗಿದೆ. ಸಣ್ಣಪುಟ್ಟ ವ್ಯತ್ಯಾಸ ಬರುತ್ತೆ. ಅದನ್ನು ನಿವಾರಣೆ ಮಾಡಿ ಜಂಟಿಯಾಗಿ ಪಾದಯಾತ್ರೆ ಮಾಡುತ್ತಿದ್ದೇವೆ. ರಾಜ್ಯಪಾಲರ ನೋಟಿಸ್ಗೆ ಏಕೆ ಹೆದರಬೇಕು. ಕಾನೂನು ಪ್ರಕಾರ ಏನೆಲ್ಲಾ ಆಗಬೇಕೋ ಅದು ಆಗುತ್ತೆ. ಅವರು ಏನು ಮಾಡಿಲ್ಲ ಅಂದರೆ ಏಕೆ ಅಂಜಬೇಕು. ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಸಂಪೂರ್ಣ ಪಾದಯಾತ್ರೆಯಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.