ಬೆಳಗಾವಿ: ಜಿಲ್ಲೆಯಲ್ಲಿ ಅನೇಕ ಹಳೆಯ ಸರ್ಕಾರಿ ಕಚೇರಿ ಕಟ್ಟಡಗಳಿದ್ದು ಬಹುತೇಕವು ಮಳೆಗಾಲದಲ್ಲಿ ಸೋರುತ್ತಿವೆ. ಬೆಳಗಾವಿಯ ತಹಶೀಲ್ದಾರ್ ಕಚೇರಿಯನ್ನೂ ಇದೇ ಪರಿಸ್ಥಿತಿ. ಇಲ್ಲಿನ ಸಿಬ್ಬಂದಿ ಮತ್ತು ಕಚೇರಿಗೆ ಬರುವ ಸಾರ್ವಜನಿಕರ ಸಂಕಷ್ಟ ಹೇಳತೀರದಾಗಿದೆ.
ಕೊಡೆ ಹಿಡಿದು ಅಥವಾ ರೇನ್ ಕೋಟ್ ಧರಿಸಿಯೇ ಕಚೇರಿಗೆ ಜನರು ಕಾಲಿಡಬೇಕಿದೆ. ಯಾರಿಗೆ ಹೇಳೋಣ ನಮ್ಮ ಪ್ಲಾಬ್ಲಂ ಎನ್ನುತ್ತಾ ಸೋರುವ ಕಟ್ಟಡದಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ತಹಶೀಲ್ದಾರ್ ಕಚೇರಿಯಲ್ಲಿ ಪ್ರತಿ ವರ್ಷದ ಮಳೆಗಾಲದಲ್ಲಿ ಈ ದುಸ್ಥಿತಿ ಸಾಮಾನ್ಯ. ಸ್ವಂತ ಕಟ್ಟಡ ಇಲ್ಲ. ಮಹಾನಗರ ಪಾಲಿಕೆಯ ಕಟ್ಟಡದಲ್ಲಿ ಕೆಲಸ. ಕಟ್ಟಡದ ಕೆಳಗೆ ಬೆಳಗಾವಿ ಒನ್ ಕೇಂದ್ರವಿದ್ದು, ಮೇಲಿನ ಮಹಡಿಯಲ್ಲಿ ತಾಲೂಕು ದಂಡಾಧಿಕಾರಿ ಕಚೇರಿ ಇದೆ. ಸುಮಾರು 65 ವರ್ಷಗಳಷ್ಟು ಹಳೆ ಕಟ್ಟಡ ಇದಾಗಿದೆ.
ಕಳೆದ 10 ದಿನಗಳಿಂದ ಬೆಳಗಾವಿಯಲ್ಲಿ ಬಿಟ್ಟು ಬಿಡದೇ ಮಳೆ ಆಗುತ್ತಿದ್ದು, ಕಟ್ಟಡದ ಮೇಲ್ಛಾವಣಿ ಸೋರುತ್ತಿದೆ. ಕಾರಿಡಾರ್ನಲ್ಲಿ ನೀರು ನಿಂತಿದ್ದು, ಅದರಲ್ಲೇ ಓಡಾಡುವ ಸ್ಥಿತಿ ಇದೆ. ತಹಶೀಲ್ದಾರ್ ಕಚೇರಿಗೆ ನಿತ್ಯ ಸಾವಿರಾರು ಜನರು ವಿವಿಧ ಕೆಲಸಗಳ ನಿಮಿತ್ತ ಬರುತ್ತಾರೆ. ಹೀಗೆ ಬಂದವರು ಕೊಡೆ ಹಿಡಿದು ಇಲ್ಲವೇ ರೇನ್ ಕೋಟ್ ಹಾಕಿಕೊಂಡೇ ಕಚೇರಿಯಲ್ಲಿ ಓಡಾಡಬೇಕಿದೆ. ನೀರು ನಿಂತು ಕಾಲು ಜಾರಿ ವೃದ್ಧರು, ಮಹಿಳೆಯರು ಜಾರಿ ಬೀಳುತ್ತಿದ್ದಾರೆ.
ಮಳೆ ನೀರು ಸೋರಿ ಕಟ್ಟಡದ ಗೋಡೆ ಬಿರುಕುಬಿಟ್ಟಿದೆ. ಮಹಿಳಾ ಸಿಬ್ಬಂದಿ ಶೌಚಾಲಯಕ್ಕೆ ನೀರಿನಲ್ಲಿ ನಡೆದುಕೊಂಡು ಹೋಗಬೇಕು. ಆದರೆ ಶೌಚಾಲಯಗಳ ಒಳಗೂ ನೀರು ನಿಂತಿದ್ದು, ಸಮಸ್ಯೆ ಹೇಳತೀರದಾಗಿದೆ. ಇಡೀ ತಾಲೂಕಿನ ಜನರ ಸಮಸ್ಯೆಗಳನ್ನು ನಾವೇ ಪರಿಹರಿಸುತ್ತೇವೆ. ಆದರೆ, ನಮಗಾಗುತ್ತಿರುವ ಸಮಸ್ಯೆಯನ್ನು ಬಾಯಿ ಬಿಟ್ಟು ಯಾರ ಮುಂದೆಯೂ ಹೇಳಿಕೊಳ್ಳಲು ಆಗದ ಸ್ಥಿತಿಯಿದೆ ಎಂದು ಹೆಸರು ಹೇಳಲಿಚ್ಚಿಸದ ಸಿಬ್ಬಂದಿಯೊಬ್ಬರು ಅಳಲು ತೋಡಿಕೊಂಡರು.
ವಕೀಲ ಅವಿನಾಶ ಕಾಂಬಳೆ 'ಈಟಿವಿ ಭಾರತ'ದ ಜೊತೆಗೆ ಮಾತನಾಡಿ, "ಸರ್ಕಾರಿ ಕಚೇರಿ ಎಂದರೆ ಸುವ್ಯವಸ್ಥಿತವಾಗಿರಬೇಕು. ಆದರೆ, ಇಲ್ಲಿ ಬಹಳ ಅವ್ಯವಸ್ಥೆ ಇದೆ. ನಾವು ಹೊಳೆಗೆ ಬಂದೆವೇನೋ ಎಂದು ಭಾಸವಾಗುತ್ತಿದೆ. ತಕ್ಷಣವೇ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಿ ಈ ಸಮಸ್ಯೆ ಪರಿಹರಿಸಬೇಕು" ಎಂದು ಆಗ್ರಹಿಸಿದರು.
ತಹಶೀಲ್ದಾರ ಬಸವರಾಜ ನಾಗರಾಳ ಪ್ರತಿಕ್ರಿಯಿಸಿ, "ಈ ಕಟ್ಟಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುತ್ತದೆ. 2012ರಲ್ಲಿ ನಮ್ಮ ಕಚೇರಿ ಇಲ್ಲಿಗೆ ಶಿಫ್ಟ್ ಆಗಿದೆ. ಮೇಲಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಆಯುಕ್ತರ ಗಮನಕ್ಕೆ ತರುತ್ತೇನೆ. ತುರ್ತಾಗಿ ಸಾಧ್ಯವಿರುವ ರಿಪೇರಿ ಮಾಡುತ್ತೇವೆ. ಕಡತಗಳು, ಕಂಪ್ಯೂಟರ್ಗಳನ್ನು ಕಾಪಾಡಿಕೊಳ್ಳುತ್ತಿದ್ದೇವೆ. ಹೊಸ ಜಿಲ್ಲಾಡಳಿತ ಭವನ ನಿರ್ಮಿಸುವ ಯೋಜನೆ ಇದ್ದು, ಆಗ ನಮ್ಮ ಕಚೇರಿಯೂ ಅಲ್ಲಿಗೆ ಸ್ಥಳಾಂತರ ಆಗಲಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ಮಂಗಳೂರು: ಮಳೆಗೆ ಮನೆ ಮೇಲೆ ತಡೆಗೋಡೆ ಕುಸಿದು ಬಾಲಕ ಸಾವು - Retaining Wall Collapse Kills Boy