ಬೆಳಗಾವಿ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದಾಖಲೆಗಳಲ್ಲಿದೇ ಸಾಗಿಸುತ್ತಿದ್ದ 7.98 ಲಕ್ಷ ನಗದು ಮತ್ತು ಅಕ್ರಮವಾಗಿ ಗೋವಾ ಮದ್ಯ ಮಾರುತ್ತಿದ್ದ ಓರ್ವ ಆರೋಪಿ ಸೇರಿದಂತೆ ಲಕ್ಷಾಂತರ ಮೌಲ್ಯದ ಗೋವಾ ಸಾರಾಯಿ ಜಪ್ತಿ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಹಿಂಡಲಗಾ ಲಕ್ಷ್ಮೀ ನಗರದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಗೋವಾ ಮದ್ಯ ಮಾರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದರು. ಬೆಳಗಾವಿ ತಾಲೂಕು ಹಿಂಡಲಗಾ ನಿವಾಸಿಯಾಗಿರುವ ರಾಜೇಶ ನಾಯಕ (41) ಬಂಧಿತ ಆರೋಪಿ. ಬಂಧಿತನಿಂದ ವಿವಿಧ ಕಂಪನಿ ಗೋವಾ ರಾಜ್ಯದ 9 ಲಕ್ಷ 9 ಸಾವಿರದ 750 ರೂ ಮೌಲ್ಯದ ಸಾರಾಯಿ. ಕೃತ್ಯಕ್ಕೆ ಬಳಸಿದ ಕಾರು ಸೇರಿ ಒಟ್ಟು 10 ಲಕ್ಷ 60 ಸಾವಿರ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ.
ಕಣಕುಂಬಿ ಚೆಕ್ ಪೋಸ್ಟ್‌ನಲ್ಲಿ 7.98 ಲಕ್ಷ ಹಣ ಜಪ್ತಿ: ಅದೇ ರೀತಿ ಖಾನಾಪುರ ತಾಲೂಕಿನ ಕಣಕುಂಬಿ ಚೆಕ್‌ಪೋಸ್ಟ್‌ನಲ್ಲಿ ಶುಕ್ರವಾರ, ದಾಖಲೆಗಳಿಲ್ಲದ 7.98 ಲಕ್ಷ ನಗದನ್ನು ಚುನಾವಣಾ ಸಿಬ್ಬಂದಿ ಹಾಗೂ ಪೊಲೀಸರ ತಂಡ ವಶಕ್ಕೆ ಪಡೆದಿದೆ.
ಮೂಲತ: ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದ ಸಂಜಯ ಬಸವರಾಜ ರೆಡ್ಡಿ ಎನ್ನುವವರು ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಹಣ ಇಟ್ಟುಕೊಂಡಿದ್ದರು. ಬಸ್ ಗೋವಾದಿಂದ ಬೆಳಗಾವಿ ಕಡೆಗೆ ಬರುತ್ತಿತ್ತು. ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಮಾಡುವ ವೇಳೆ ಹಣ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಹಣ ಮುಟ್ಟುಗೋಲು ಹಾಕಿಕೊಂಡು ಖಾನಾಪುರದ ಉಪ ಖಜಾನೆಯಲ್ಲಿ ಇರಿಸಲಾಗಿದೆ ಎಂದು ಖಾನಾಪುರ ಸಹಾಯಕ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ:ಆಸ್ತಿ - ಒಡವೆಗಾಗಿ ಚಿಕ್ಕಮ್ಮಳ ಹತ್ಯೆಗೆ ಯತ್ನಿಸಿದ್ದ ಮಗಳು - ಅಳಿಯನ ಬಂಧನ - Attempted murder