ಬಾಗಲಕೋಟೆ: ಒಡಿಶಾದಲ್ಲಿ ಜಗತ್ಪ್ರಸಿದ್ಧ ಪುರಿ ಶ್ರೀ ಜಗನ್ನಾಥ ಸ್ವಾಮಿಯ ರಥಯಾತ್ರೆ ಎರಡು ದಿನಗಳ ಕಾಲ ಅತ್ಯಂತ ವೈಭವದಿಂದ ನಡೆಯಿತು. ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲೂ ಸಂಭ್ರಮದ ಜಗನ್ನಾಥ ಸ್ವಾಮಿಯ ಭವ್ಯ ರಥೋತ್ಸವ ನಡೆದಿದೆ.
ಹೌದು, ಬಾಗಲಕೋಟೆಯ ಗುಳೇದಗುಡ್ಡ ಪಟ್ಟಣದಲ್ಲಿ ರಾಜ್ಯದ ಏಕೈಕ ಜಗನ್ನಾಥ ಸ್ವಾಮಿಯ ದೇಗುಲವಿದೆ. ಈ ದೇಗುಲದ ಕುರಿತು ಬಹಳ ಜನರಿಗೆ ಮಾಹಿತಿ ಇಲ್ಲ. ಇಲ್ಲಿಯೂ ಕೂಡ ಭಾನುವಾರ ಪುರಿಯಂತೆಯೇ ಭವ್ಯ ರಥೋತ್ಸವ ನಡೆಯಿತು.
ಇಲ್ಲಿನ ಶ್ರೀ ಜಗದೀಶ ರಾಧಾಕೃಷ್ಣ ಮಂದಿರದಿಂದ ಪುರಿ ಜಗನ್ನಾಥಸ್ವಾಮಿ ದೇವರ ರಥೋತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ಮೆರವಣಿಗೆಯಲ್ಲಿ ಮಾರವಾಡಿ ಸಮಾಜದ ಮಹಿಳೆಯರು, ಯುವಕ, ಯುವತಿಯರು ದಾಂಡಿಯಾ ನೃತ್ಯ ಹಾಗೂ ದೇವರ ಭಜನೆ ಮಾಡಿದರು.
ಇಚ್ಚಲಕರಂಜಿ, ಪೂನಾ, ನಾಸಿಕ್, ಬಾಗಲಕೋಟೆ, ಹುಬ್ಬಳ್ಳಿ, ಸಾಂಗ್ಲಿ, ಇಲಕಲ್, ಅಮಿನಗಡ, ಧಾರವಾಡ ಸೇರಿದಂತೆ ಅನೇಕ ನಗರ, ಪಟ್ಟಣಗಳ ಅಪಾರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಮಂದಿರವನ್ನು ಆಕರ್ಷಕವಾಗಿ ಶೃಂಗರಿಸಲಾಗಿತ್ತು.
ದೇಶದಲ್ಲಿ ಜಗನ್ನಾಥ ಮಂದಿರಗಳು ಇರುವುದು ಎರಡು ಕಡೆ. ಒಂದು ಒಡಿಶಾದ ಪುರಿ ಮತ್ತೊಂದು ಗುಜರಾತ್‌ನ ಅಹಮದಾಬಾದ್. ಇವೆರಡು ದೇಗುಲಗಳನ್ನು ಹೊರತಪಡಿಸಿದರೆ ಬಾಗಲಕೋಟೆ ಜಗನ್ನಾಥನ ದೇಗುಲ ಇರುವುದು ಬಾಗಲಕೋಟೆಯ ಗುಳೇದಗುಡ್ಡ ಪಟ್ಟಣದಲ್ಲಿ ಎಂಬುದು ವಿಶೇಷ.
ಇದನ್ನೂ ಓದಿ: ಜಗದ್ವಿಖ್ಯಾತ ಜಗನ್ನಾಥ ರಥಯಾತ್ರೆ, ಲಕ್ಷಾಂತರ ಭಕ್ತರು ಭಾಗಿ- ಪುರಿಯಿಂದ LIVE - Puri Jagannath Rath Yatra