ಬೆಂಗಳೂರು: ಅಕ್ರಮ ಭೂ ಡಿನೋಟಿಫಿಕೇಷನ್ ಆರೋಪದಡಿ 24 ದಿನಗಳ ಜೈಲುವಾಸ ಅನುಭವಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮತ್ತೊಮ್ಮೆ ಬಂಧನ ಭೀತಿ ಎದುರಾಗಿದೆ. ಪೋಕ್ಸೋ ಕೇಸ್ನಲ್ಲಿ ಆರೋಪ ಎದುರಿಸುತ್ತಿರುವ ಮಾಜಿ ಸಿಎಂ ವಿರುದ್ಧ 13 ವರ್ಷಗಳ ನಂತರ ಮತ್ತೊಮ್ಮೆ ಜಾಮೀನುರಹಿತ ಬಂಧನದ ವಾರೆಂಟ್ ಹೊರಡಿಸಲಾಗಿದೆ. ಈ ಹಿಂದೆ ನ್ಯಾಯಾಲಯಕ್ಕೆ ನೇರವಾಗಿ ಶರಣಾಗಿದ್ದ ಇವರು, ಈಗ ಯಾವ ರೀತಿಯ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವ ಪ್ರಶ್ನೆ ಎದುರಾಗಿದೆ.
ಈ ಹಿಂದೆ ಮೊದಲ ಬಾರಿ ಯಡಿಯೂರಪ್ಪ ವಿರುದ್ಧ ಜಾಮೀನುರಹಿತ ಬಂಧನ ವಾರೆಂಟ್ ಹೊರಡಿಸಲಾಗಿತ್ತು. ಅಕ್ರಮ ಭೂ ಡಿನೋಟಿಫಿಕೇಷನ್ ಆರೋಪ ಸಂಬಂಧ ವಕೀಲ ಸಿರಾಜಿನ್ ಬಾಷಾ ಸಲ್ಲಿಸಿದ್ದ ಪ್ರಕರಣದಲ್ಲಿ ಯಡಿಯೂರಪ್ಪ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಾಗಿತ್ತು. ಯಡಿಯೂರಪ್ಪ ಹೊರತುಪಡಿಸಿ ಇತರ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಸಿಕ್ಕರೂ ಯಡಿಯೂರಪ್ಪಗೆ ಜಾಮೀನು ಸಿಕ್ಕಿರಲಿಲ್ಲ. ಹಾಗಾಗಿ ಲೋಕಾಯುಕ್ತ ಪೊಲೀಸರು ಲೋಕಾಯುಕ್ತ ವಿಶೇಷ ನ್ಯಾಯಾಲಯದ ಅನುಮತಿ ಪಡೆದು ಜಾಮೀನುರಹಿತ ವಾರೆಂಟ್ ಹೊರಡಿಸಿದ್ದರು. ಆದರೆ ಲೋಕಾಯುಕ್ತ ಪೊಲೀಸರಿಗೆ ಸಿಗದ ಯಡಿಯೂರಪ್ಪ 2011ರ ಅಕ್ಟೋಬರ್ 15ರಂದು ಕೋರ್ಟ್ಗೆ ಹಾಜರಾಗಿದ್ದರು. ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿತ್ತು. 23 ದಿನ ಪರಪ್ಪನ ಅಗ್ರಹಾರದಲ್ಲಿ ಕಳೆದ ಯಡಿಯೂರಪ್ಪ 24ನೇ ದಿನ ಅಂದರೆ ನವೆಂಬರ್ 8ರಂದು ಜೈಲಿನಿಂದ ಹೊರಬಂದಿದ್ದರು. ಯಡಿಯೂರಪ್ಪಗೆ ಜಾಮೀನು ಕೊಡಿಸಲು ಸುಪ್ರೀಂ ಕೋರ್ಟ್ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಕೂಡ ಬಂದಿದ್ದರು.
ಇದೀಗ ಮತ್ತೊಮ್ಮೆ ಬಂಧನದ ಭೀತಿಯಲ್ಲಿ ಯಡಿಯೂರಪ್ಪ ಸಿಲುಕಿದ್ದಾರೆ. ಸಿಐಡಿ ಪೊಲೀಸರು ವಿಚಾರಣೆಗೆ ಹಾಜರಾಗದ ಆರೋಪದ ಮೇಲೆ ವಶಕ್ಕೆ ಪಡೆಯಲು ಅನುಮತಿ ಕೋರಿದ್ದನ್ನು ಮಾನ್ಯ ಮಾಡಿರುವ ಜೆಎಂಎಫ್ಸಿ ತ್ವರಿತ ನ್ಯಾಯಾಲಯ ಜಾಮೀನುರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ. ಹಾಗಾಗಿ ಯಾವ ಕ್ಷಣದಲ್ಲಾದರೂ ಯಡಿಯೂರಪ್ಪರನ್ನು ಸಿಐಡಿ ಅಧಿಕಾರಿಗಳು ಬಂಧಿಸುವ ಸಾಧ್ಯತೆ ಇದೆ.
ಈ ಹಿಂದೆ ಲೋಕಾಯುಕ್ತ ಪೊಲೀಸರು ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದ್ದರೆ ಇಂದು ಸಿಐಡಿ ಪೊಲೀಸರು ಜಾಮೀನುರಹಿತ ಬಂಧನ ವಾರೆಂಟ್ ಹೊರಡಿಸಿದ್ದಾರೆ. ಈ ಪ್ರಕರಣದಲ್ಲಿ ಯಡಿಯೂರಪ್ಪ ಯಾವ ರೀತಿಯ ಕಾನೂನು ಹೋರಾಟ ನಡೆಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.
ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ 2024ರ ಮಾರ್ಚ್ 3ರಂದು ಯಡಿಯೂರಪ್ಪ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಈ ದೂರಿನ ಆಧಾರದ ಮೇಲೆ ಎಫ್‌ಐಆರ್ ಕೂಡ ದಾಖಲಾಗಿತ್ತು. ಈ ಪ್ರಕರಣ ವಿಚಾರವಾಗಿ ಈ ಬಂಧನ ಭೀತಿ ಎದುರಾಗಿದೆ.
ಇದನ್ನೂ ಓದಿ: ಪೋಕ್ಸೋ ಕೇಸ್: ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ - POCSO CASE