ಬೆಂಗಳೂರು : ಕಾರ್ಖಾನೆಗಳು, ಕಂಪನಿಗಳು ಮತ್ತು ಕಟ್ಟಡ ನಿರ್ಮಾಣ ಸಂಸ್ಥೆಗಳು ಬೋರ್ವೆಲ್ ಮತ್ತು ಕಾವೇರಿ ನೀರಿನ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾಗಿದೆ. ಅವರಿಗೆ ಕೆರೆಗಳ ನೀರನ್ನು ಮಾತ್ರ ಕೊಡಬೇಕು ಎಂದು ಬಿ ಪ್ಯಾಕ್ ಸಂಸ್ಥೆಯ ಕಾರ್ಯ ಸಂಯೋಜಕ ರಾಘವೇಂದ್ರ ಅವರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಮುಖ್ಯವಾಗಿ ಎಲೆಕ್ಟ್ರಾನಿಕ್ ಸಿಟಿಯ ಕಂಪನಿಗಳಿಗೆ, ಪೀಣ್ಯದ ಕಾರ್ಖಾನೆಗಳು, ಕಾಸಿಯಾ ಸಂಸ್ಥೆಗಳು ಸೇರಿದಂತೆ ಹಲವಕ್ಕೆ ಹತ್ತಿರದ ಕೆರೆ ನೀರು ತಲುಪಿಸಲು ವ್ಯವಸ್ಥೆ ಮಾಡಬೇಕಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹೆಬ್ಬಗೋಡಿ ಕೆರೆ, ಹುಸ್ಕೂರು ಕೆರೆ, ಯಾನಂಡಹಳ್ಳಿ ಕೆರೆಯ ನೀರನ್ನು ಸರ್ಕಾರ ಎಸ್.ಟಿ.ಪಿ ಪ್ಲಾಂಟ್ಗಳನ್ನು ಬಳಸಿ, ನೀರನ್ನು ಅಲ್ಲಿನ ಸಂಸ್ಥೆಗಳಿಗೆ ನೀಡಬೇಕು ಎನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದು ಅವರು ಹೇಳಿದ್ದಾರೆ.
ಆರ್ಥಿಕತೆಗೆ ಕೊಡುಗೆ ನೀಡುತ್ತಿರುವುದು ಕಾರ್ಖಾನೆಗಳು, ಐ.ಟಿ ಕಂಪನಿಗಳು ಮತ್ತು ಹಲವು ಖಾಸಗಿ ಸಂಸ್ಥೆಗಳಾಗಿವೆ. ಇವಕ್ಕೆಲ್ಲ ಕಾವೇರಿ ನೀರನ್ನು ಬಿಟ್ಟು ಕೆರೆಗಳ ನೀರನ್ನು ಕೊಡುವುದು ಸಮಂಜಸವಾಗಿದೆ. ಈಗಾಗಲೇ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಬಯೋಕಾನ್ ಸಂಸ್ಥೆ ಹತ್ತಿರದ ಹೆಬ್ಬಗೋಡಿ ಕೆರೆ, ಹುಸ್ಕೂರು ಕೆರೆ, ಯಾನಂಡಹಳ್ಳಿ ಕೆರೆಯ ನೀರನ್ನು ಬಳಸಿ ಅಲ್ಲಿನ ಕೆರೆಗಳ ಮತ್ತು ಸುತ್ತಮುತ್ತಲಿನ ಪರಿಸರದ ಪುನರ್ ನಿರ್ಮಾಣಕ್ಕೆ ಮುಂದಾಗಿದೆ. ಅದೇ ರೀತಿ ಹಲವು ಸಂಸ್ಥೆಗಳು ತಮ್ಮ ಸಿಎಸ್ಆರ್ ಫಂಡ್ಗಳನ್ನು ಬಳಸಿ ಬೇರೆ ಬೇರೆ ರೀತಿಯಲ್ಲಿ ಕೆರೆಗಳನ್ನು, ಅವುಗಳ ಪರಿಸರವನ್ನು ಉಳಿಸುವ ಪ್ರಯತ್ನಕ್ಕೆ ಮುಂದಾಗಬೇಕು ಎಂದು ಅವರು ಹೇಳಿದರು.
ಪಾಲಿಕೆಯ ಕಾಲ್ ಸೆಂಟರ್ ವಾರ್ ರೂಮ್ : ಪಾಲಿಕೆಯ ಕಾಲ್ ಸೆಂಟರ್ ಮತ್ತು ವಾರ್ ರೂಮ್ ಮಾರ್ಚ್ 6 ರಂದು ಪ್ರಾರಂಭವಾಗಿದೆ. ಇದರ ಬಗ್ಗೆ ಇಷ್ಟು ಬೇಗ ವಿಶ್ಲೇಷಣೆ ಮಾಡುವುದು ಕಷ್ಟಸಾಧ್ಯ. ವಾರ್ ರೂಮ್ನಲ್ಲಿ ಪಾಲಿಕೆ ಮತ್ತು ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದಾರೆ. ಕೋವಿಡ್ ವಾರ್ ರೂಮ್ ರೀತಿಯಲ್ಲಿ ಇದರ ಕಾರ್ಯನಿರ್ವಹಣೆ ನಡೆಯುತ್ತಿದೆ. ಅದರ ಸಾಧಕ - ಬಾಧಕ 15 ದಿನಗಳ ನಂತರ ಗೊತ್ತಾಗಲಿದೆ ಎಂದು ಹೇಳಿದರು.
ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಉತ್ತಮ ರೀತಿಯಲ್ಲಿ ಸದ್ಯಕ್ಕೆ ವಾರ್ ರೂಮ್ ಮತ್ತು ಕಾಲ್ ಸೆಂಟರ್ ನಿರ್ವಹಣೆ ನಡೆಸುತ್ತಿದ್ದಾರೆ. ಒಂದು ವೇಳೆ ಲೋಪಗಳು ಕಂಡು ಬಂದಲ್ಲಿ ಬಿ ಪ್ಯಾಕ್ ಸೇರಿದಂತೆ ಹಲವು ಸಾರ್ವಜನಿಕ ಸಂಸ್ಥೆಗಳು ಅದಕ್ಕೆ ಪೂರಕ ಸಲಹೆಗಳನ್ನು ನೀಡಲಿವೆ ಎಂದು ತಿಳಿಸಿದರು.
ಇದನ್ನೂ ಓದಿ : ಈಜುಕೊಳಗಳಿಗೆ ಕಾವೇರಿ ನೀರು ಬಳಕೆ ನಿಷೇಧಿಸಿ ಬೆಂಗಳೂರು ಜಲಮಂಡಳಿ ಆದೇಶ