ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪುಡಿರೌಡಿಗಳ ಅಟ್ಟಹಾಸ ಮತ್ತೆ ಮುಂದಿವರೆದಿದೆ. ಕ್ಷುಲಕ ಕಾರಣಕ್ಕೆ ಸಾರ್ವಜನಿಕರ ಜೊತೆ ಜಗಳ ತೆಗೆದು ಹಲ್ಲೆ ಮಾಡುವುದು ಇತ್ತೀಚೆಗೆ ಸಾಮಾನ್ಯ ಎಂಬಂತಾಗಿದೆ. ಅಂತಹುದೇ ಒಂದು ಘಟನೆ ತಡರಾತ್ರಿ ನಡೆದಿದೆ. ನಗರದ ಮಂಟೂರು ರಸ್ತೆಯ ಗಾಂಧಿ ಏಕ್ತಾ ಕಾಲೋನಿಯಲ್ಲಿ ಯುವಕನಿಗೆ ಪುಡಿರೌಡಿಗಳ ಗುಂಪು ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿ ಪಾರಾರಿಯಾಗಿದ್ದಾರೆ. ಘಟನೆಯಲ್ಲಿ ಗೈಬುಖಾನ್ ಅಕ್ಕಿಂ (29) ಗಾಯಾಳು. ಮಣಿಕಂಠ, ಸಾಹಿಲ್, ಮತ್ತೊಬ್ಬ ಸೇರಿಕೊಂಡು ಗಾಂಜಾ ಕುಡಿದ ಮತ್ತಿನಲ್ಲಿ ಗೈಬುಖಾನ್ ಅಕ್ಕಿಂ ಜತೆ ಸುಖಾ ಸುಮ್ಮನೆ ಏಕಾಏಕಿ ತಂಟೆ ತೆಗೆದು ಒದ್ದು, ಕೆಳಗೆ ಬೀಳಿಸಿ, ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಗೊಳಗಾದ ಗೈಬುಖಾನ್‌ನನ್ನು ಕಿಮ್ಸ್‌ಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಪುಂಡರ ಅಟ್ಟಹಾಸದ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಈ ಸಂಬಂಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿದೆ.
ರೌಡಿಗೆ 6 ತಿಂಗಳು ಗಡಿಪಾರು : ಜಿಲ್ಲೆಯಲ್ಲಿ ಈ ರೀತಿಯ ಘಟನೆಗಳು ಹೆಚ್ಚಾಗುತ್ತಿದ್ದು ಕಳೆದ ತಿಂಗಳು ಪೊಲೀಸ್ ಕಮಿಷನರ್ ರೌಡಿಯೊಬ್ಬನನ್ನು ಜಿಲ್ಲೆಯಿಂದ ಗಡಿಪಾರು ಮಾಡಿದ್ದರು. ವಿವಿಧ ಅಪರಾಧಗಳಲ್ಲಿ ತೊಡಗಿದ್ದ ಹುಬ್ಬಳ್ಳಿ ರೌಡಿಶೀಟರ್ ಫಜಲ್ ಅಹ್ಮದ್ನನ್ನು ಫೆ.1 ರಿಂದ ಆರು ತಿಂಗಳ ಅವಧಿವರೆಗೆ ಬೀದರ್ ಜಿಲ್ಲೆಯ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಆದೇಶ ಹೊರಡಿಸಿದ್ದರು.
ಈ ರೌಡಿ, ಎಲೆಕ್ಟ್ರಿಶಿಯನ್ ಉದ್ಯೋಗ ಮಾಡುತ್ತ ಸಾರ್ವಜನಿಕರ ಮೇಲೆ, ಅದರಲ್ಲೂ ಹೆಚ್ಚಾಗಿ ಬಡ ಜನರ ಮೇಲೆ ಹಲ್ಲೆ ಮಾಡುತ್ತಿದ್ದ. ಅಲ್ಲದೇ, ಕೂಲಿ, ಹಮಾಲಿ, ಸಣ್ಣಪುಟ್ಟ ವ್ಯಾಪಾರ ಮಾಡುವವರ ಮೇಲೆ ಗುಂಪು ಕಟ್ಟಿಕೊಂಡು ಹೊಡೆಯುತ್ತಿದ್ದ. ಇಷ್ಟಲ್ಲದೇ ಈತ ತನ್ನ ವಿರುದ್ಧ ಸಾಕ್ಷಿ ಹೇಳದಂತೆ ಬೆದರಿಕೆ ಹಾಕುತ್ತಿದ್ದ. ಮಾರಾಕಾಸ್ತ್ರಗಳನ್ನು ತೋರಿಸುತ್ತಾ ರೌಡಿಸಂ ಮಾಡುತ್ತಿದ್ದ. ಸಾರ್ವಜನಿಕರಲ್ಲಿ ಭಯದ ವಾತಾವರಣ ಹುಟ್ಟಿಸುವಂತಹ ಅಪರಾಧಗಳಲ್ಲಿ ತೊಡಗಿರುವ ಕುರಿತು ಈತನ ವಿರುದ್ಧ ಬೆಂಡಿಗೇರಿ, ವಿದ್ಯಾನಗರ, ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.
ಹೀಗಾಗಿ ಸಮಾಜದಲ್ಲಿ ಆರೋಗ್ಯಕರ ವಾತಾವರಣ ಕಾಯ್ದುಕೊಳ್ಳಲು ಮತ್ತು ಈತನ ಅಪರಾಧಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ 6 ತಿಂಗಳ ಅವಧಿಗೆ ಗಡಿಪಾರು ಮಾಡಿ ಹುಬ್ಬಳ್ಳಿ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಆದೇಶ ನೀಡಿದ್ದರು.
ಇದನ್ನೂ ಓದಿ: ಹುಬ್ಬಳ್ಳಿ: 'ಜಾಹೀರಾತುಗಳಿಗೆ ಲೈಕ್ಸ್, ರೇಟಿಂಗ್ ಕೊಟ್ಟು ಹಣ ಗಳಿಸಿ' ಸಂದೇಶ ನಂಬಿ 20 ಲಕ್ಷ ಕಳೆದುಕೊಂಡ ವ್ಯಕ್ತಿ