ಬೆಂಗಳೂರು: ಕಟ್ಟಡವೊಂದರ ಲಿಫ್ಟ್ಗೆ ಅಳವಡಿಸಲು ತೆರೆದಿದ್ದ ಗುಂಡಿಗೆ ಬಿದ್ದು ಐದು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಗುವಿನ ತಾಯಿ ನೀಡಿದ ದೂರಿನ ಮೇರೆಗೆ ಕಟ್ಟಡ ಮಾಲೀಕ ಹಾಗೂ ಉಸ್ತುವಾರಿ ವಹಿಸಿಕೊಂಡಿದ್ದ ಸುನಿಲ್ ಎಂಬಾತನ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಕನ್ನಮಂಗಲ ಗ್ರಾಮ ಪಂಚಾಯತ್ ಮುಂಭಾಗದ ಮಿಲ್ಕ್ ಡೈರಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಕಟ್ಟಡಕ್ಕೆ ಲಿಫ್ಟ್ ಅಳವಡಿಸಲು 5 ಅಡಿ ಆಳ, ಅಗಲದ ಗುಂಡಿ ತೋಡಲಾಗಿತ್ತು. ಗುಂಡಿ ಸುತ್ತಮುತ್ತಲು ಸುರಕ್ಷಿತ ಕ್ರಮ ಅನುಸರಿಸುವಲ್ಲಿ ಮಾಲೀಕರು ನಿರ್ಲಕ್ಷ್ಯ ತೋರಿದ್ದರು ಎಂಬ ಆರೋಪ ಕೇಳಿಬಂದಿದೆ.
ಬುಧವಾರ ಬೆಳಗ್ಗೆ ಬಾಲಕ ಸ್ನೇಹಿತರ ಜೊತೆ ಆಟವಾಡುವಾಗ ಆಚಾನಕ್ಕಾಗಿ ಗುಂಡಿಗೆ ಬಿದ್ದಿದ್ದ. ಐದು ಅಡಿ ಆಳದ ಗುಂಡಿಯಲ್ಲಿ ಮಳೆ ನೀರು ತುಂಬಿಕೊಂಡಿದ್ದರಿಂದ ನೀರಿನಲ್ಲಿ ಬಾಲಕ ಮುಳುಗಿದ್ದ. ಅಲ್ಲೇ ಇದ್ದ ಸ್ನೇಹಿತರು ತಕ್ಷಣವೇ ನೀಡಿದ ಮಾಹಿತಿ ಮೇರೆಗೆ ಸ್ಥಳೀಯರು, ಬಾಲಕನನ್ನ ರಕ್ಷಿಸಿ ಆಸ್ಪತ್ರೆ ಸೇರಿಸಿದ್ದರು. ಆದರೆ, ಬಾಲಕ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಗುವಿನ ತಾಯಿ ನೀಡಿದ ದೂರಿನ ಮೇರೆಗೆ ಮಾಲೀಕ ಹಾಗೂ ಕಟ್ಟಡ ಕಾಮಗಾರಿ ವಹಿಸಿಕೊಂಡಿದ್ದ ಸುನಿಲ್ ಎಂಬುವರ ವಿರುದ್ಧ ನಿರ್ಲಕ್ಷ್ಯ ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಬರುವಂತೆ ನೊಟೀಸ್ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಶಾಲೆಗೆ ರಜೆ, ಆಟ ಆಡುತ್ತಾ ಗುಂಡಿಗೆ ಬಿದ್ದ ಬಾಲಕ: ಬಾಲಕನ ಮನೆಯ ಪಕ್ಕದಲ್ಲಿ ಕಟ್ಟಡ ಕಟ್ಟಲಾಗುತ್ತಿದೆ. ಯಾವುದೇ ಸುರಕ್ಷತಾ ಕ್ರಮ ಇಲ್ಲದೇ ಇಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ. ಮಳೆಯಿಂದಾಗಿ ಶಾಲೆಗೆ ರಜೆ ಇದ್ದ ಕಾರಣ ಮಕ್ಕಳೆಲ್ಲ ಸೇರಿ ಆಟ ಆಡುವಾಗ ಬಾಲಕ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಸ್ಥಳೀಯರೆಲ್ಲ ಪ್ರತಿಭಟಿಸಿದಾಗ ತಡೆಗೋಡೆ ಮಾಡಿದ್ದಾರೆ. ಈ ಮೊದಲೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದರೆ ಸಾವು ಸಂಭವಿಸುತ್ತಿರಲಿಲ್ಲ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಗಂಗಾವತಿ: ಕೆರೆಯಲ್ಲಿ ಮುಳುಗುತ್ತಿದ್ದ ಇಸ್ರೇಲ್ ಪ್ರಜೆ ರಕ್ಷಣೆ