ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ ಪಟ್ಟಿಯಲ್ಲಿ ಟೀಂ ಇಂಡಿಯಾ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. ಇಂದು ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಗೆಲುವಿನೊಂದಿಗೆ ಶೇಕಡಾವಾರು ಅಂಕಗಳಲ್ಲಿಯೂ ಸುಧಾರಣೆ ಕಂಡು ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಪ್ರಸ್ತುತ ಶೇ.71.67 ಅಂಕಗಳೊಂದಿಗೆ ಭಾರತ ಮೊದಲ ಸ್ಥಾನದಲ್ಲಿದ್ದರೆ, ಶೇ.62.50 ಅಂಕಗಳೊಂದಿಗೆ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. ಏತನ್ಮಧ್ಯೆ, ಮೊದಲ ಮತ್ತು ಎರಡನೇ ಸ್ಥಾನದಲ್ಲಿರುವ ಭಾರತ ಮತ್ತು ಆಸೀಸ್ ನಡುವೆ ಶೇಕಡಾ 10 ರಷ್ಟು ವ್ಯತ್ಯಾಸವಿದೆ. ಮತ್ತೊಂದೆಡೆ ಭಾರತದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡಿರುವ ಬಾಂಗ್ಲಾದೇಶ ಶೇ.39.29 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ.
2023-25ರ ವಿಶ್ವ ಟೆಸ್ಟ್ ಚಾಂಪಿಯನ್ಸ್ ಋತುವಿನಲ್ಲಿ ಟೀಂ ಇಂಡಿಯಾ ಇದುವರೆಗೆ 10 ಪಂದ್ಯಗಳನ್ನು ಆಡಿದೆ ಮತ್ತು ಅವುಗಳಲ್ಲಿ 7ರಲ್ಲಿ ಗೆಲುವು ಸಾಧಿಸಿ 2 ರಲ್ಲಿ ಸೋಲನ್ನು ಕಂಡಿದೆ. ಒಂದು ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ. ಮತ್ತೊಂದೆಡೆ, ಆಸ್ಟ್ರೇಲಿಯಾ 12 ಪಂದ್ಯಗಳಲ್ಲಿ 8ರಲ್ಲಿ ಗೆಲುವು ದಾಖಲಿಸಿದ್ದು, 3 ಪಂದ್ಯಗಳಲ್ಲಿ ಸೋಲು ಮತ್ತು 1ರಲ್ಲಿ ಡ್ರಾ ಸಾಧಿಸಿದೆ. 62.5 ಶೇಕಡವಾರು ಅಂಕಗಳೊಂದಿಗೆ ನ್ಯೂಜಿಲೆಂಡ್ ಮೂರನೇ ಸ್ಥಾನದಲ್ಲಿದೆ. ಶ್ರೀಲಂಕಾ (ಶೇ 42.86), ಇಂಗ್ಲೆಂಡ್ (ಶೇ 42.19), ಬಾಂಗ್ಲಾದೇಶ (39.29), ಮತ್ತು ದಕ್ಷಿಣ ಆಫ್ರಿಕಾ (38.89) ನಂತರದ ಸ್ಥಾನದಲ್ಲಿವೆ.
ಸದ್ಯ ಬಾಂಗ್ಲಾದೇಶ ವಿರುದ್ಧ ಭಾರತ ಮತ್ತೊಂದು ಟೆಸ್ಟ್ ಪಂದ್ಯವನ್ನು ಆಡಬೇಕಿದೆ. ಇದಾದ ಬಳಿಕ ನ್ಯೂಜಿಲೆಂಡ್ ತಂಡ ಭಾರತ ಪ್ರವಾಸ ಬೆಳೆಸಲಿದೆ. ಈ ಪ್ರವಾಸದಲ್ಲಿ ಟೀಂ ಇಂಡಿಯಾ ಕಿವೀಸ್ ವಿರುದ್ಧ ತವರಿನಲ್ಲಿ 3 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇದಾದ ಬಳಿಕ ಭಾರತ ತಂಡ ವರ್ಷದ ಕೊನೆಯಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯಾಗೆ ಪ್ರವಾಸ ಬೆಳೆಸಲಿದೆ. ಈ ಅವಧಿಯಲ್ಲಿ 5 ಪಂದ್ಯಗಳನ್ನು ಆಡಲಿದೆ. ಅಗ್ರ 2 ತಂಡಗಳ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್ಸ್ ಫೈನಲ್ ನಡೆಯಲಿದೆ.
ಏತನ್ಮಧ್ಯೆ, ಐಸಿಸಿ ಇತ್ತೀಚೆಗೆ ವಿಶ್ವ ಟೆಸ್ಟ್ ಫೈನಲ್‌ಗೆ ಸ್ಥಳ ಮತ್ತು ದಿನಾಂಕವನ್ನು ಪ್ರಕಟಿಸಿದೆ. ಈ ಹಣಾಹಣಿಗೆ ಲಂಡನ್‌ನ ಪ್ರತಿಷ್ಠಿತ ಲಾರ್ಡ್ಸ್ ಮೈದಾನ ಆತಿಥ್ಯ ವಹಿಸಲಿದೆ. ಫೈನಲ್ ಪಂದ್ಯ ಮುಂದಿನ ವರ್ಷ ಜೂನ್ 11 ರಿಂದ 15ರ ವರೆಗೆ ನಡೆಯಲಿದೆ ಎಂದು ಐಸಿಸಿ ಇತ್ತೀಚೆಗೆ ಬಹಿರಂಗಪಡಿಸಿದೆ. ಜೂನ್ 16 ಅನ್ನು ಮೀಸಲು ದಿನವೆಂದು ಘೋಷಿಸಲಾಗಿದೆ.
ಇದನ್ನೂ ಓದಿ: ದಯವಿಟ್ಟು ನನ್ನನ್ನು ಧೋನಿ ಜೊತೆ ಹೋಲಿಕೆ ಮಾಡಬೇಡಿ; ಪಂತ್ ಮನವಿ - Rishabh pant