ಬೆಂಗಳೂರು: ಇಂದಿನ ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಆರ್ಸಿಬಿಯ ತವರು ಮೈದಾನವಾದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.
ಉಭಯ ತಂಡಗಳ ಪಾಲಿಗೆ ಇಂದಿನ ಪಂದ್ಯ ಮಹತ್ವದಾಗಿದ್ದು ಗೆದ್ದ ತಂಡದ ಪ್ಲೇ ಆಫ್ ಕನಸು ಜೀವಂತವಾಗಿರಲಿದೆ. ಸೋತ ಟೀಮ್ ರೇಸ್ನಿಂದ ಹೊರ ಬೀಳಲಿದೆ. ಹಿಂದಿನ ನಾಲ್ಕು ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸುವ ಮೂಲಕ ಗೆಲುವಿನ ಟ್ರ್ಯಾಕ್ಗೆ ಮರುಳಿರುವ ಆರ್ಸಿಬಿ ಇಂದಿನ ಪಂದ್ಯವನ್ನು ಗೆದ್ದು ಪ್ಲೇಆಫ್ ಕನಸು ಜೀವಂತವಾಗಿರಿಸಿಕೊಳ್ಳುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿಯಲಿದೆ. ಆದರೆ ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಮಳೆರಾಯ ತನ್ನ ಇನ್ನಿಂಗ್ಸ್ ಆರಂಭಿಸಿದ್ದು, ಇಂದಿನ ಪಂದ್ಯಕ್ಕೂ ವರುಣ ಅಡ್ಡಿಪಡಿಸುತ್ತಾನಾ ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿದೆ.
ಪಂದ್ಯ ರದ್ದಾದರೆ?: ಸದ್ಯ ಬೆಂಗಳೂರಿನಲ್ಲಿ ಮೋಡ ಕವಿದ ವಾರಾವರಣವಿದ್ದು, ಸಂಜೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಷ್ಟು ದಿನ ಮೆಳೆಗಾಗಿ ಪ್ರಾರ್ಥಿಸಿದ್ದ ಬೆಂಗಳೂರಿಗರು ಮಾತ್ರ ಇಂದು ಮಳೆ ಬಾರದಂತೆ ಪ್ರಾರ್ಥಿಸುತ್ತಿದ್ದಾರೆ. ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದಲ್ಲಿ ಎರಡೂ ತಂಡಗಳೂ ತಲಾ ಒಂದು ಅಂಕ ಪಡೆಯಲಿದ್ದು, ಆರ್ಸಿಬಿ ಪ್ಲೇಆಫ್ನಿಂದ ಹೊರ ಬೀಳಲಿದೆ. ಡೆಲ್ಲಿ ಪ್ಲೇಆಫ್ ಮೇಲಿನ ತಂಡಗಳ ಸೋಲಿನ ಮೇಲೆ ನಿರ್ಧಾರವಾಗಲಿದೆ.
ಸದ್ಯ ಆರ್ಸಿಬಿ ಆಡಿರುವ 12 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 10 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಡೆಲ್ಲಿ 12 ಪಂದ್ಯ ಆಡಿ 6ರಲ್ಲಿ ಗೆದ್ದು 12 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ.
ಹೆಡ್ ಟು ಹೆಡ್: ಉಭಯ ತಂಡಗಳು ಇದೂವರೆಗೂ 30 ಬಾರಿ ಮುಖಾಮುಖಿಯಾಗಿದ್ದು, ಡೆಲ್ಲಿ ವಿರುದ್ದ ಆರ್ಸಿಬಿ 18 ಬಾರಿ ಗೆದ್ದು ಮೇಲುಗೈ ಸಾಧಿಸಿದೆ. ಅದರಂತೆ ಡೆಲ್ಲಿ 11 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ರದ್ದಾಗಿದೆ.
ಪಿಚ್ ವರದಿ: ಚಿನ್ನಸ್ವಾಮಿ ಕ್ರೀಡಾಂಗಣ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸ್ವರ್ಗ ಎಂದು ಪರಿಗಣಿಸಲಾಗಿದೆ. ಈ ಮೈದಾನದಲ್ಲಿ 287 ರನ್ ಗರಿಷ್ಠ ಸ್ಕೋರ್ ಆಗಿದ್ದು, 87 ಕನಿಷ್ಠ ಸ್ಕೋರ್ ಆಗಿದೆ.
ಸಂಭಾವ್ಯ ತಂಡಗಳು - ಆರ್ಸಿಬಿ: ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ವಿಲ್ ಜ್ಯಾಕ್ಸ್, ರಜತ್ ಪಾಟಿದಾರ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್, ಸ್ವಪ್ನಿಲ್ ಸಿಂಗ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಲಾಕಿ ಫರ್ಗುಸನ್, ಯಶ್ ದಯಾಲ್.
ಇಂಪ್ಯಾಕ್ಟ್ ಪ್ಲೇಯರ್ಸ್: ಮಹಿಪಾಲ್ ಲೊಮೊರೊರ್.
ಡೆಲ್ಲಿ ಕ್ಯಾಪಿಟಲ್ಸ್: ಜೇಕ್ ಫ್ರೇಸರ್-ಮೆಕ್‌ಗುರ್ಕ್, ಪೃಥ್ವಿ ಶಾ, ಅಭಿಷೇಕ್ ಪೊರೆಲ್, ಡೇವಿಡ್ ವಾರ್ನರ್/ಶೈ ಹೋಪ್, ಟ್ರಿಸ್ಟಾನ್ ಸ್ಟಬ್ಸ್, ಗುಲ್ಬದಿನ್ ನೈಬ್/ಜ್ಯೆ ರಿಚರ್ಡ್‌ಸನ್, ಅಕ್ಷರ್ ಪಟೇಲ್, ರಸಿಖ್ ಸಲಾಂ, ಕುಲದೀಪ್ ಯಾದವ್, ಮುಖೇಶ್ ಕುಮಾರ್, ಖಲೀಲ್ ಅಹ್ಮದ್.
ಇಂಪ್ಯಾಕ್ಟ್ ಪ್ಲೇಯರ್ಸ್: ಇಶಾಂತ್ ಶರ್ಮಾ