ಬರ್ಮಿಂಗ್ಹ್ಯಾಮ್: ಶನಿವಾರ ಇಲ್ಲಿ ನಡೆದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿ ವಿರುದ್ಧ ಸೋಲು ಕಂಡರು. ಇದರೊಂದಿಗೆ ಪ್ರತಿಷ್ಟಿತ ಟ್ರೋಫಿ ಗೆಲ್ಲುವ ಭಾರತದ 23 ವರ್ಷದ ಕಾಯುವಿಕೆ ಮತ್ತೆ ಮುಂದುವರೆದಿದೆ.
22 ವರ್ಷದ ಸೇನ್ ಅವರು 2019ರ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಹಾಗೂ ವಿಶ್ವದ ಒಂಬತ್ತನೇ ಶ್ರೇಯಾಂಕದ ಕ್ರಿಸ್ಟಿ ವಿರುದ್ಧ ಸೆಮಿಫೈನಲ್‌ನಲ್ಲಿ 21-12, 10-21, 15-21ರಿಂದ ಮುಗ್ಗರಿಸಿದರು. ಕಳೆದ ವಾರ ಫ್ರೆಂಚ್ ಓಪನ್ ಸೂಪರ್ 750 ಪಂದ್ಯಾವಳಿಯಲ್ಲಿ ಸೆಮಿ ಫೈನಲ್‌ನಲ್ಲಿ ಹಿನ್ನಡೆ ಕಂಡಿದ್ದ ಸೇನ್ ಇದೀಗ ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ನಲ್ಲಿ ಸೆಮಿಸ್ನಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಮೊದಲ ಸುತ್ತಿನಲ್ಲಿ 21-12ರ ಅಂತರದಿಂದ ಎಡವಿದ್ದ ಸೇನ್, ಛಲಬಿಡದೆ ಎರಡನೇ ಸುತ್ತಿನಲ್ಲಿ 10-21 ಸೆಟ್ ಮೂಲಕ ಕ್ರಿಸ್ಟಿ ಅವರನ್ನು ಮಣಿಸಿ 1-1 ಸಮಬಲದೊಂದಿಗೆ ಪುನರಾಗಮನ ಮಾಡಿದ್ದರು. ಮೂರನೇ ಮತ್ತು ಅಂತಿಮ ಸುತ್ತಿನಲ್ಲೂ ಪ್ರಬಲ ಪೈಪೋಟಿ ನೀಡಿದರಾದರೂ ಕ್ರಿಸ್ಟಿ ದಿಟ್ಟ ಹೋರಾಟ ಪ್ರದರ್ಶಿಸುವ ಮೂಲಕ 15-21 ಅಂತರದಿಂದ ಸೇನ್ ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿದರು.
ಇದಕ್ಕೂ ಮುನ್ನ, ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಮಾಜಿ ಚಾಂಪಿಯನ್ ಲಿ ಜಿ ಜಿಯಾ ವಿರುದ್ಧ ರೋಚಕ ಮುಖಾಮುಖಿಯಲ್ಲಿ ಶ್ರೇಷ್ಟ ಪ್ರದರ್ಶನ ನೀಡಿದ್ದರು. ಬರ್ಮಿಂಗ್‌ಹ್ಯಾಮ್‌ನ ಯುನೈಟೆಡ್ ಅರೆನಾದಲ್ಲಿ ಒಂದು ಗಂಟೆ 10 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸೇನ್ 20-22,21-16,21-19ರಲ್ಲಿ 10ನೇ ಶ್ರೇಯಾಂಕದ ಮಲೇಷ್ಯಾ ಆಟಗಾರನನ್ನು ಮಣಿಸಿ ಸೆಮಿಫೈನಲ್ ತಲುಪಿದ್ದರು.
ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಸಾಧನೆ: ಇದುವರೆಗೆ ಕೇವಲ ಇಬ್ಬರು ಭಾರತೀಯರು ಮಾತ್ರ ಆಲ್ ಇಂಗ್ಲೆಂಡ್ ಓಪನ್ ಚಾಂಪಿಯನ್ ಪ್ರಶಸ್ತಿ ಗೆದ್ದಿದ್ದಾರೆ. 1981ರಲ್ಲಿ ನಟಿ ದೀಪಿಕಾ ಪಡುಕೋಣೆ ಅವರ ತಂದೆ ಪ್ರಕಾಶ್ ಪಡುಕೋಣೆ ಈ ಪ್ರಶಸ್ತಿ ಜಯಿಸಿದ್ದರು. 2001ರಲ್ಲಿ ಪುಲ್ಲೇಲ ಗೋಪಿಚಂದ್ ಪ್ರಶಸ್ತಿ ಎತ್ತಿ ಹಿಡಿದಿದ್ದರು. ಈ ಬಾರಿ ಲಕ್ಷ್ಯ ಸೇನ್ ಗೆದ್ದರೆ ಐತಿಹಾಸಿಕ ಸಾಧನೆ ಮಾಡಿದ ಮೂರನೇ ಆಟಗಾರ ಎನಿಸಿಕೊಳ್ಳುತ್ತಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಲಕ್ಷ್ಯ ಸೇನ್, "ಫಲಿತಾಂಶದಿಂದ ಸಾಕಷ್ಟು ನಿರಾಶೆಗೊಂಡಿದ್ದೇನೆ. ಆದರೆ, ನಾನು ದೊಡ್ಡ ಪಂದ್ಯಾವಳಿಗಳನ್ನು ಗೆಲ್ಲುವ ಸಾಮರ್ಥ್ಯ ಹೊಂದಿದ್ದೇನೆ" ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ರಾತ್ರಿ ಮಹಿಳಾ ಹಾಸ್ಟೆಲ್ ಪ್ರವೇಶ: ವೇಟ್ಲಿಫ್ಟರ್ ಅಚಿಂತ ಶೆಯುಲಿ ಅಮಾನತು